ಮಡಿಕೇರಿ, ಏ. 21: ಕೋವಿಡ್-19 ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ, ಜಿಲ್ಲಾಸ್ಪತ್ರೆಯ ದಾದಿಯರು, ಶುಶ್ರೂಷಕಿಯರು ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದಿಸಿ ಅವರ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸಲಾಯಿತು.
ಕೋವಿಡ್-19 ಆಸ್ಪತ್ರೆಯ ಉಪನ್ಯಾಸ ಸಭಾಂಗಣದಲ್ಲಿ ಮಂಗಳವಾರದಂದು ಪ್ರಜಾಸತ್ಯ ಪತ್ರಿಕೆ ವತಿಯಿಂದ ನಡೆದ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನ ನೆರವೇರಿಸಿ ಮಾತನಾಡಿದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ಕೆ.ಬಿ. ಕಾರ್ಯಪ್ಪ ಅವರು ಮಾಧ್ಯಮದವರು ಕೂಡ ಸೈನಿಕರಂತೆ ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂಬೈಯಲ್ಲಿ 54 ಮಂದಿ ಮಾಧ್ಯಮದವರಿಗೆ ಕೊರೊನಾ ಸೋಂಕು ತಗುಲಿದ್ದು, ಕೊರೊನಾ ವಿರುದ್ಧ ಹೋರಾಟದಲ್ಲಿ ಮಾಧ್ಯಮದವರು ಎಷ್ಟರಮಟ್ಟಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಉಲ್ಲೇಖಿಸಿದರು.
ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಕೊಡಗು ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಈ ಸನ್ಮಾನ ತಮ್ಮ ಸೇವಾಮನೋಭಾವಕ್ಕೆ ಪ್ರೋತ್ಸಾಹ ನೀಡಿದಂತೆ ಎಂದು ಭಾವಿಸಿಕೊಂಡು ಇನ್ನಷ್ಟು ಉತ್ಸಾಹದಿಂದ, ಪ್ರೀತಿಯಿಂದ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಮನವಿ ಮಾಡಿದರು. ಕೊರೊನಾ ವೈದ್ಯಕೀಯ ಕ್ಷೇತ್ರದ ಮಹತ್ವವನ್ನು ಜಗತ್ತಿಗೆ ಸಾರಿದೆ ಎಂದು ಅವರು ನುಡಿದರು.
ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜಿಗೆ ಹಸ್ತಾಂತರವಾದ ಬಳಿಕ ಇದೀಗ ಕೋವಿಡ್-19 ಆಸ್ಪತ್ರೆಯಾಗಿ ಬದಲಾದ ಬಳಿಕ ಅಜಗಜಾಂತರ ವ್ಯತ್ಯಾಸವನ್ನು ಕಂಡಿದೆ ಎಂದರು. ಜಿಲ್ಲೆಯಲ್ಲಿ ಕೊರೊನಾ ಸೋಂಕು ಶೂನ್ಯ ಇರುವಲ್ಲಿ ಕೊಡಗು ವೈದ್ಯಕೀಯ ಕ್ಷೇತ್ರದ ಅದಮ್ಯ ಪ್ರೀತಿ, ವಿಶ್ವಾಸ ಮತ್ತು ಶ್ರದ್ಧೆಯ ಸೇವೆ ಇದೆ ಎಂದು ಶ್ಲಾಘಿಸಿದರು.
ಕಾವೇರಿ ಟೈಮ್ಸ್ ದಿನಪತ್ರಿಕೆಯ ಪ್ರಕಾಶಕ ಬೊಳ್ಳಜೀರ ಬಿ. ಅಯ್ಯಪ್ಪ ಮಾತನಾಡಿ ಕೊರೊನಾ ವಿರುದ್ಧ ಜಿಲ್ಲೆಯಲ್ಲಿ ಸಂಘಟಿತ ಪ್ರಯತ್ನದಿಂದ ಯಶಸ್ಸು ಕಾಣುತ್ತಿದೆ. ಡಾ. ಬಿ.ಸಿ. ನವೀನ್‍ಕುಮಾರ್ ಅವರು ಜಿಲ್ಲೆಯ ಮೂಲೆ ಮೂಲೆಗೆ ತೆರಳಿ ಪೊಲೀಸರು ಮತ್ತು ಪೌರ ಕಾರ್ಮಿಕರಿಗೆ ಉಚಿತ ಚಿಕಿತ್ಸೆ ನೀಡುತ್ತಿರುವುದು ಒಂದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಮೇರಿ ನಾಣಯ್ಯ ಅವರು ಈ ರೀತಿಯ ಸನ್ಮಾನ ಕಾರ್ಯಕ್ರಮ ಶ್ಲಾಘನೀಯ ವಿಚಾರವಾಗಿದ್ದು, ನಮ್ಮ ಸೇವೆಯನ್ನು ನೆನೆದ ಈ ದಿನ ನಮಗೆಲ್ಲರಿಗೂ ಸ್ಮರಣೀಯ ದಿನ ಎಂದು ಅಭಿಮಾನದಿಂದ ನುಡಿದರಲ್ಲದೆ, ಈ ಸನ್ಮಾನ ನಮಗೆ ಇನ್ನಷ್ಟು ಸಾಧನೆ ಮಾಡಲು ಪ್ರೋತ್ಸಾಹ ನೀಡುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ‘ಪ್ರಜಾಸತ್ಯ’ ದಿನಪತ್ರಿಕೆಯ ಪ್ರಧಾನ ಸಂಪಾದಕ ಡಾ. ಬಿ.ಸಿ. ನವೀನ್‍ಕುಮಾರ್ ಮಾತನಾಡಿ, ಮನುಷ್ಯ ತಾನು ಪ್ರಪಂಚವನ್ನೇ ಜಯಿಸಿ ಬಿಡಬಲ್ಲೆ ಎಂಬ ಮನೋಭಾವನೆಯನ್ನು ಹೊಂದಿದ್ದ. ಆದರೆ, ಕಣ್ಣಿಗೆ ಕಾಣದ ವೈರಸ್ ಬಂದು ಇಡೀ ಜಗತ್ತನ್ನು ಸ್ತಬ್ಧ ಮಾಡಿದೆ. ಇದು ನಮ್ಮ ಆತ್ಮಾವಲೋಕನಕ್ಕೆ ಕಾರಣವಾಗಬೇಕು ಎಂದರು. ಕೊರೊನಾ ಎಂಬ ಜೀವ ತೆಗೆಯುವ ವೈರಿಯೊಂದಿಗೆ ಪ್ರತ್ಯಕ್ಷ ಹೋರಾಟ ಮಾಡುತ್ತಿರುವ ದಾದಿಯರು ಮತ್ತು ಸಿಬ್ಬಂದಿ ವರ್ಗದವರ ಕೆಲಸ ಅತ್ಯಂತ ಪ್ರಮುಖವಾದುದು. ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಪ್ರೋತ್ಸಾಹ ಮತ್ತು ರಕ್ಷಣೆಯನ್ನು ಕೊಡುವ ಜವಾಬ್ದಾರಿ ಸರ್ಕಾರ ಮತ್ತು ಸಮಾಜದ್ದಾಗಿದೆ ಎಂದು ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀಕ್ಷಕ ಡಾ. ಎ.ಜೆ. ಲೋಕೇಶ್, ಸಹಾಯಕ ಆಡಳಿತಾಧಿಕಾರಿ ಎಸ್.ಎಲ್. ಬಸವರಾಜು, ನರ್ಸಿಂಗ್ ವಿಭಾಗದ ಅಧೀಕ್ಷಕಿ ವೀಣಾಕುಮಾರಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಕೋವಿಡ್-19 ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಅಬ್ದುಲ್ ಅಜೀಜ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಹೆಚ್.ಟಿ. ಅನಿಲ್ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಕೋವಿಡ್-19 ಆಸ್ಪತ್ರೆಯ 40 ಮಂದಿ ದಾದಿಯರು ಮತ್ತು ಸಿಬ್ಬಂದಿ ವರ್ಗದವರಿಗೆ ನೆನಪಿನ ಕಾಣಿಕೆ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.