ಮಡಿಕೇರಿ, ಏ.21: ಜಿಲ್ಲೆಯಲ್ಲಿ ಮೇ 3 ರ ತನಕ ಲಾಕ್‍ಡೌನ್ ಜಾರಿಯಲ್ಲಿದ್ದು, ವಕ್ಫ್ ಮಂಡಳಿ ನೀಡಿರುವ ಮಾರ್ಗ ಸೂಚಿಗಳನ್ವಯ ರಂಜಾನ್ ಮಾಸವನ್ನು ಆಚರಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಂಜಾನ್ ಆಚರಣೆ ಸಂಬಂಧ ಪಾಲಿಸಬೇಕಾದ ನಿಯಮಗಳಿಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಂಜಾನ್ ಮಾಸದಲ್ಲಿ ಮುಸ್ಲಿಂ ಧರ್ಮೀಯರು ಬಡವರಿಗೆ ದಾನ-ಧರ್ಮ ಮಾಡುವ ಪರಿಪಾಠವಿದ್ದು, ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿಗದಿಪಡಿಸಿದ ದಿನಗಳಲ್ಲಿ ನಿಗದಿತ ಸಮಯದಲ್ಲಿ ಬಡವರಿಗೆ ದಾನ-ಧರ್ಮ ಮಾಡಬಹುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಮಸೀದಿಗಳಲ್ಲಿ ಕಡ್ಡಾಯವಾಗಿ ಗುಂಪು ಸೇರಿ ಪ್ರಾರ್ಥನೆ ಮಾಡುವುದನ್ನು ಈಗಾಗಲೇ ನಿಷೇಧಿಸಲಾಗಿದ್ದು, ಇದನ್ನು ತಪ್ಪದೆ ಪಾಲಿಸಬೇಕು. ಮೇ 3ರ ತನಕ ಸರ್ಕಾರವು ಹೊರಡಿಸಿರುವ ಲಾಕ್‍ಡೌನ್ ನಿಯಮಗಳನ್ನು ತಪ್ಪದೆ ಪಾಲಿಸುವಂತೆ ಮುಸ್ಲಿಂ ಮುಖಂಡ ರುಗಳಿಗೆ ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪಿ. ಮಾತನಾಡಿ ರಂಜಾನ್ ಮಾಸದಲ್ಲಿ ಮುಸ್ಲಿಂ ಧರ್ಮೀಯರು ಕಡ್ಡಾಯವಾಗಿ ಮನೆಯಲ್ಲಿಯೇ ಪ್ರಾರ್ಥನೆ ಮಾಡುವುದು, ಮನೆಗಳ ಮೇಲ್ಛಾವಣಿಗಳ ಮೇಲೆ ಅಕ್ಕ-ಪಕ್ಕದ ಮನೆಯರನ್ನು ಸೇರಿಸಿಕೊಂಡು ಗುಂಪಾಗಿ ನಮಾಝ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಇದನ್ನು ತಪ್ಪದೆ ಪಾಲಿಸಬೇಕೆಂದು ತಿಳಿಸಿದರು.

ಯಾವುದೇ ಇಫ್ತಾರ್ ಕೂಟಗಳನ್ನು ಆಯೋಜನೆ ಮಾಡುವುದು, ಮಸೀದಿಗಳಲ್ಲಿ ಗುಂಪಾಗಿ ನಮಾಝ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಇದನ್ನು ತಪ್ಪದೇ ಪಾಲಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಡಿವೈಎಸ್‍ಪಿ ದಿನೇಶ್ ಕುಮಾರ್ ಇತರರು ಇದ್ದರು.