ಪೊನ್ನಂಪೇಟೆ, ಏ. 21: ಕೇರಳ ರಾಜ್ಯದಿಂದ ಗೂಡ್ಸ್ ಗಾಡಿಯಲ್ಲಿ ಬೇಕರಿ ತಿನಿಸುಗಳನ್ನು ತಂದು ಅಂಗಡಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಪೊನ್ನಂಪೇಟೆ ಕೊರೊನಾ ಟಾಸ್ಕ್ ಪೋರ್ಸ್ ಅಧಿಕಾರಿಗಳು ಬೇಕರಿ ತಿನಿಸುಗಳ ಸಹಿತ ಅಶೋಕ ಲೈಲ್ಯಾಂಡ್ ದೋಸ್ತ್ (ಕೆ.ಎಲ್ 18 ಒ 6447) ವಾಹನವನ್ನು ಪೊಲೀಸರ ಸಹಕಾರದಿಂದ ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.
ಕೊರೊನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ಕೇರಳ-ಕೊಡಗಿನ ಗಡಿ ಭಾಗಗಳನ್ನು ಬಂದ್ ಮಾಡಲಾಗಿದೆ. ಆದ್ದರಿಂದ ಆಹಾರ ಸಾಮಗ್ರಿಗಳನ್ನು ಸಾಗಿಸುವ ವಾಹನ ಗಳು ಮಾನಂದವಾಡಿ ಮೈಸೂರು ಮಾರ್ಗದಿಂದ ಹೆಚ್.ಡಿ. ಕೋಟೆ, ಹುಣಸೂರು ಮಾರ್ಗವಾಗಿ ಕೊಡಗನ್ನು ಪ್ರವೇಶಿಸುತ್ತಿವೆ.
ಈ ಸಂದರ್ಭ ಪೊನ್ನಂಪೇಟೆ ಕೊರೊನಾ ಟಾಸ್ಕ್ ಫೋರ್ಸ್ ಸಹ ಕಾರ್ಯದರ್ಶಿ ಹಾಗೂ ಪಿಡಿಓ ಪುಟ್ಟರಾಜು ಮಾತನಾಡಿ ಕೇರಳದಲ್ಲಿ ಕೊರೊನಾ ಸೋಂಕಿತರು ಇರುವುದರಿಂದ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಅಲ್ಲಿ ತಯಾರಿಸಿ ತಂದಿರುವ ತಿಂಡಿತಿನಿಸುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ಕಾರ್ಯಾಚರಣೆ ಸಂದರ್ಭ ಪೊನ್ನಂಪೇಟೆ ಠಾಣಾಧಿಕಾರಿ ಡಿ. ಕುಮಾರ್, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತ್ರ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಅಣ್ಣೀರ ಹರೀಶ್, ಅಮ್ಮತ್ತಿರ ಸುರೇಶ್, ಕಾವೇರಮ್ಮ, ಆಶಾ ಕಾರ್ಯಕರ್ತೆ ಪ್ರಶಾಂತಿ, ಗ್ರಾ.ಪಂ. ಕಚೇರಿ ಸಿಬ್ಬಂದಿ ಯೋಗೀಶ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.