ಮಡಿಕೇರಿ, ಏ. 21: ಕಳೆದ ಮಾರ್ಚ್ 19 ರಿಂದ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿರ್ಬಂಧದೊಂದಿಗೆ; ಗಡಿ ಚೆಕ್‍ಪೋಸ್ಟ್‍ಗಳನ್ನು ಸಂಪೂರ್ಣ ಬಂದ್‍ಗೊಳಿಸಿದ ಪರಿಣಾಮ; ದೇವರ ದಯೆಯಿಂದ ನಮ್ಮ ಜಿಲ್ಲೆ ಶೇ. 100 ರಷ್ಟು ಕೊರೊನಾ ಮುಕ್ತವೆಂಬ ಪ್ರಶಂಸೆ; ಕೇಂದ್ರ ಸರಕಾರದಿಂದ ಸತತ ಮೂರು ಬಾರಿ ವ್ಯಕ್ತಗೊಂಡಿದ್ದು; ಈ ಹಿನ್ನೆಲೆ ಕೊಡಗು ಜಿಲ್ಲಾಡಳಿತದ ಹೊಣೆಗಾರಿಕೆ ಇನ್ನಷ್ಟು ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಭಿಪ್ರಾಯ ಪಟ್ಟಿದ್ದಾರೆ. ಈ ದಿಸೆಯಲ್ಲಿ ಇದುವರೆಗೆ ಎಲ್ಲ ರೀತಿ ಸ್ಪಂದಿಸಿರುವ ಜಿಲ್ಲೆಯ ಶೇ. 90 ರಷ್ಟು ಜನತೆ ಇನ್ನಷ್ಟು ಶಿಸ್ತು, ಸಂಯಮದಿಂದ ಕೊಡಗಿನ ಸುರಕ್ಷತೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ದೇಶನದಂತೆ ಕಟ್ಟೆಚ್ಚರ ವಹಿಸಿರುವ ಜಿಲ್ಲಾಡಳಿತದ ಕ್ರಮಗಳಿಗೆ ಸ್ಪಂದಿಸಬೇಕೆಂದು ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.ಸಾಕಷ್ಟು ಪೂರ್ವ ತಯಾರಿ : ತಾವು ಓರ್ವ ಜಿಲ್ಲಾಡಳಿತದ ಮುಖ್ಯಸ್ಥರಾಗಿದ್ದರೂ; ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮೊದಲ್ಗೊಂಡು ಇತರ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಆಶಾ ಕಾರ್ಯಕರ್ತೆ ಯರು, ಅಂಗನವಾಡಿ ಹಂತದ ತನಕ ಅಗತ್ಯ ಮಾಹಿತಿಯೊಂದಿಗೆ; ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ದೇಶನದಂತೆ; ಅಕ್ಕಪಕ್ಕ ರಾಜ್ಯಗಳು ಹಾಗೂ ಜಿಲ್ಲೆಗಳ ಸ್ಥಿತಿಗತಿ ನೋಡಿ ಕೊಂಡು ಸಾಕಷ್ಟು ಪೂರ್ವ ತಯಾರಿ ಮೂಲಕ ಕೊಡಗಿನ ಸುರಕ್ಷತೆಗೆ ಒಂದು ತಂಡವಾಗಿ ಶ್ರಮಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ನೆನಪಿಸಿದರು.ಹೊರಗಿನವರ ನಿಯಂತ್ರಣ: ಕೊಡಗಿಗೆ ವಿದೇಶವೂ ಸೇರಿದಂತೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬಂದವರನ್ನು, ಕೊರೊನಾ ಸೋಂಕಿನ ಆರಂಭಿಕ ದಿನಗಳಿಂದ ನಿಯಂತ್ರಿಸುತ್ತಾ ಬಂದಿರುವ ಪರಿಣಾಮ ಇಂದು ಜಿಲ್ಲೆಗೆ ಒಳಿತಾಗಿದೆ ಎಂದು ವ್ಯಾಖ್ಯಾನಿಸಿದ ಅವರು; ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಕಾರ ಜನತೆಯಿಂದ ಅಪೇಕ್ಷಿಸುವ ದಾಗಿ ನುಡಿದರು.

ನಿತ್ಯ ಅರಿವು : ತಾವು ಸೇರಿದಂತೆ ಜಿಲ್ಲೆಯ ಸಾಕಷ್ಟು ಉನ್ನತ ಮಟ್ಟದ ಅಧಿಕಾರಿಗಳು; ನಿಯಂತ್ರಣ ಕೊಠಡಿ ಸಂಖ್ಯೆ - 1077ರ ಮೂಲಕ ಸಾರ್ವಜನಿಕ ದೂರುಗಳನ್ನು ಸ್ವೀಕರಿಸುತ್ತಾ; ಒಂದು ತಂಡವಾಗಿ ಎಲ್ಲರ ಅಭಿಪ್ರಾಯ ಕ್ರೋಢೀಕರಿಸಿ ಕೊರೊನಾ ಸೋಂಕು ಹರಡದಂತೆ; ಮಾದ್ಯಮಗಳ ಮೂಲಕ ನಿತ್ಯ ಅರಿವು ಮೂಡಿಸುತ್ತಾ; ಬಂದಿದ್ದಾಗಿ ಅವರು ನೆನಪಿಸಿಕೊಂಡರು.

ಜೀವನ ಪಾಠ - ಎಸ್‍ಪಿ : ಜಾಗತಿಕ ಸವಾಲಾಗಿರುವ ಕೊರೊನಾದಿಂದ ಪ್ರತಿಯೊಬ್ಬರ ಜೀವನದಲ್ಲಿ ಹೊಸ ಪಾಠ ಕಲಿತುಕೊಳ್ಳಲು ಅವಕಾಶವಾಗಿದ್ದು; ಯಾರೂ ನಿರೀಕ್ಷಿಸದ ಈ ಬೆಳವಣಿಗೆಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರದೊಂದಿಗೆ ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ಅಧ್ಯಯನಗೊಳಿಸಿ; ಕೊಡಗಿನ ಸ್ಥಿತಿಗತಿ ಗಮನದಲ್ಲಿ ಇರಿಸಿಕೊಂಡು ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್ ಅಭಿಪ್ರಾಯಪಟ್ಟರು.

ನೆರೆಯ ಕೇರಳ ಹಾಗೂ ಅಕ್ಕಪಕ್ಕ ಜಿಲ್ಲೆಗಳಿಂದ ಕೊರೊನಾ ಹಬ್ಬುವ ಆತಂಕ ನಡುವೆ; ಪ್ರಥಮವಾಗಿ ಇಲ್ಲಿನ ವ್ಯಕ್ತಿಯೊಬ್ಬರಿಗೆ ಸೋಂಕು ಪತ್ತೆಯಾಗಿದ್ದರಿಂದ ಕೊಡಗಿನಲ್ಲಿ ಸಾಕಷ್ಟು ಕಠಿಣ ನಿರ್ಧಾರಗಳನ್ನು ಕೈಗೊಂಡಾಗ; ಜಿಲ್ಲಾಡಳಿತ ಮತ್ತು ಇಲಾಖೆಯ ಮೇಲಧಿಕಾರಿಗಳಿಂದ ಕೆಳ ಹಂತದವರೆಗೆ ಸಿಬ್ಬಂದಿಗಳು ಹಗಲಿರುಳು ಶ್ರಮಿಸಿದ್ದು; ಅತ್ಯಂತ ಪ್ರಶಂಸನೀಯ ಎಂದು ಅವರು ನೆನಪಿಸಿಕೊಂಡರು.

ಇನ್ನಷ್ಟು ಸವಾಲು : ಸದ್ಯದ ಪರಿಸ್ಥಿತಿಯಲ್ಲಿ ಯಾರೊಬ್ಬರೂ ಕೊಡಗಿನಲ್ಲಿ ಮೈಮರೆಯದೆ; ಇನ್ನಷ್ಟು ಸವಾಲುಗಳನ್ನು ಎದುರಿಸುವ ಛಲದೊಂದಿಗೆ; ಕೊಡಗಿನ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಉನ್ನತ ಸ್ತರದಿಂದ ಕೆಳಹಂತದ ಸಿಬ್ಬಂದಿಗಳು ನೀಡುವ ಮಾಹಿತಿ ಕ್ರೋಢೀಕರಿಸಿ; ಕೇಂದ್ರ ಮತ್ತು ರಾಜ್ಯಗಳಿಂದ ಬರುವ ಆದೇಶವನ್ನು ಗಮನದಲ್ಲಿ ಇರಿಸಿಕೊಂಡು ಕೆಲಸ ನಿರ್ವಹಿಸಬೇಕೆಂದು ಎಸ್‍ಪಿ ನೆನಪಿಸಿದರು.

ಓಡಾಟ ಸರಿಯಲ್ಲ : ಈಗಿನ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕಿಲ್ಲ (ಮೊದಲ ಪುಟದಿಂದ) ಎಂಬ ಮಾತ್ರದಿಂದ ಕೆಲವರು ಜಿಲ್ಲಾಡಳಿತದ ನಿರ್ದೇಶನ ಪಾಲಿಸದೆ; ಓಡಾಟದಲ್ಲಿ ತೊಡಗಿರುವದು ಸರಿಯಲ್ಲ ಎಂದು ಸೂಚ್ಯವಾಗಿ ಎಚ್ಚರಿಸಿದ ಅವರು; ವಿನಾ ಕಾರಣ ನಿರ್ಬಂಧ ಉಲ್ಲಂಘಿಸಿದರೆ; ಇನ್ನು ಮುಂದೆ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಲಿದೆ ಎಂದರು. ಮೇ 3ರ ತನಕ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ಬಂಧದಲ್ಲಿ ಕೊಡಗಿಗೆ ಯಾವದೇ ವಿನಾಯಿತಿ ಇಲ್ಲ ಎಂಬ ಅರಿವು ಜನತೆಗೆ ಇರಬೇಕು ಎಂದು ಎಸ್‍ಪಿ ನೆನಪಿಸಿದರು. ಒಟ್ಟಿನಲ್ಲಿ ಜಿಲ್ಲೆಯ ಈ ಇಬ್ಬರು ಉನ್ನತ ಸ್ಥಾನದ ಅಧಿಕಾರಿಗಳ ಮಾತಿನಲ್ಲಿ; ಕೊಡಗಿನ ಶೇ. 90 ರಷ್ಟು ಜನತೆಯ ಸಹಕಾರಕ್ಕೆ ಶ್ಲಾಘನೆಯೊಂದಿಗೆ; ಮುಂದೆ ನಿಯಮ ಉಲ್ಲಂಘಿಸಿದರೆ ಕಾನೂನು ತನ್ನದೇ ಕ್ರಮ ಜರುಗಿಸುವ ಸಂದೇಶವಿತ್ತು.