ಮಡಿಕೇರಿ, ಏ. 20: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ಇಂದು ಇಲ್ಲಿನ ಮಲ್ಲಿಕಾರ್ಜುನ ನಗರ, ಭಗವತಿ ನಗರ, ರಾಣಿಪೇಟೆ ಮುಂತಾದೆಡೆಯ ಬಡ ಕುಟುಂಬಗಳಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು. ಆಶ್ರಮದ ಅಧ್ಯಕ್ಷರಾಗಿರುವ ಶ್ರೀ ಬೋಧ ಸ್ವರೂಪಾನಂದ ಮಹಾರಾಜ್ ಹಾಗೂ ಶ್ರೀ ಗೋಪೇಂದ್ರ ನಂದ ಮಹಾರಾಜ್ ನೇತೃತ್ವದಲ್ಲಿ 350 ಕುಟುಂಬಗಳಿಗೆ ಆಹಾರ ಕಿಟ್ ಹಾಗೂ ಕುಂಬಳಕಾಯಿ ವಿತರಿಸಲಾಯಿತು.ಮಲ್ಲಿಕಾರ್ಜುನ ನಗರ ಶ್ರೀ ಕೋದಂಡರಾಮ ದೇವಾಲಯ ಸಮಿತಿಯ ಜಿ. ರಾಜೇಂದ್ರ, ಎಸ್.ಎಸ್. ಸಂಪತ್‍ಕುಮಾರ್, ಮಂಜುನಾಥ್, ತಿಮ್ಮಯ್ಯ, ನಂಜುಂಡ, ಗೋಪಿ, ಪರಮೇಶ್, ಸುರೇಶ್, ಸಿ.ಎನ್. ಸೋಮೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.ಕೊಡಗು ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ. ಅನಂತಶಯನ, ಆಟೋ ಚಾಲಕರ ಸಂಘದ ಅಧ್ಯಕ್ಷ ಡಿ.ಎಚ್. ಮೇದಪ್ಪ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ‘ಶಕ್ತಿ’ಯೊಂದಿಗೆ ಈ ಸಂದರ್ಭ ಮಾತನಾಡಿದ ಶ್ರೀ ಬೋಧ ಸ್ವರೂಪಾನಂದ ಮಹಾರಾಜ್ ಅವರು; ಇದುವರೆಗೆ 1843 ಕುಟುಂಬಗಳಿಗೆ ಕೊರೊನಾ ನಡುವೆ ಹಸಿವು ತಣಿಸಲು ಆಹಾರ ಕಿಟ್ ಪೂರೈಸಲಾಗಿದೆ ಎಂದು ಮಾಹಿತಿ ನೀಡಿದರು.ಆಶ್ರಮದಲ್ಲಿ ಹಸಿದು ಬಂದವರಿಗೆ 1040 ಊಟ, ಮಡಿಕೇರಿ, ಮಾದಾಪುರ ಮುಂತಾದ ಕಡೆಗಳಲ್ಲಿ ದೈನಂದಿನ ಆಹಾರ ಪದಾರ್ಥಗಳ ಕಿಟ್‍ಗಳನ್ನು; ಬೇಡಿಕೆಯ ಮೇರೆಗೆ ಪೂರೈಕೆ ಮಾಡಿರುವದಾಗಿ ಸ್ವಾಮೀಜಿ ವಿವರಿಸಿದರು. ಸರಕಾರದಿಂದ ಬಡವರಿಗೆ ಉಚಿತವಾಗಿ ಅಕ್ಕಿಯನ್ನು ಪೂರೈಸುತ್ತಿರುವದರಿಂದ; ಆಶ್ರಮವು ಅಂತಹವರಿಗೆ ಎಣ್ಣೆ, ಸಕ್ಕರೆ, ಗೋಧಿಪುಡಿ, ರವೆ, ತೆಂಗಿನಕಾಯಿ, ಆಲೂಗಡ್ಡೆ, ಈರುಳ್ಳಿ ಇತ್ಯಾದಿ ಕಿಟ್‍ಗಳನ್ನು ನೀಡುವ ಮೂಲಕ ತಾತ್ಕಾಲಿಕ ಸಮಸ್ಯೆಗೆ ಸ್ಪಂದಿಸುತ್ತಿರುವದಾಗಿ ಸ್ವಾಮೀಜಿ ನೆನಪಿಸಿದರು. ಆದಷ್ಟು ಬೇಗ ದೇಶ ಹಾಗೂ ವಿಶ್ವ ಕೊರೊನಾ

(ಮೊದಲ ಪುಟದಿಂದ) ಸಂಕಷ್ಟದಿಂದ ಪಾರಾಗಿ; ಮನುಕುಲ ನೆಮ್ಮದಿಯ ನಡುವೆ ಬದುಕು ಕಂಡುಕೊಳ್ಳುವಂತೆ ಎಲ್ಲರೂ ಭಗವಂತನಲ್ಲಿ ಪ್ರಾರ್ಥಿಸಬೇಕೆಂದು ಅವರು ಅಭಿಪ್ರಾಯಪಟ್ಟರು. ಅಲ್ಲದೆ ಪ್ರತಿಯೊಬ್ಬರು ಸ್ವಯಂ ಜಾಗೃತರಾಗಿ ಈ ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತೆ ಕರೆ ನೀಡಿದರು.

ನಗರ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳು, ಈ ವೇಳೆಯಲ್ಲಿ ಸಾರ್ವಜನಿಕರು ಅಂತರ ಕಾಯ್ದುಕೊಂಡು ಆಹಾರ ಕಿಟ್‍ಗಳನ್ನು ಹೊಂದಿಕೊಳ್ಳುವಂತೆ ನಿಗಾ ವಹಿಸಿದ್ದರು. ಜಾತಿ, ಮತ, ಬೇಧವಿಲ್ಲದೆ ಬಡವರು ಆಹಾರ ಕಿಟ್ ಪಡೆದುಕೊಂಡರು. ಈ ವೇಳೆ ಪೊನ್ನಂಪೇಟೆ ಗ್ರಾ.ಪಂ. ಸದಸ್ಯ ಎಂ.ಬಿ. ಅನೀಸ್, ಮಾಜಿ ಸದಸ್ಯ ಟಿ.ವಿ. ಸುರೇಶ್, ಸ್ವಯಂಸೇವಕರಾದ ಶರತ್, ಸಂತೋಷ್, ಮಹೇಶ್, ಬ್ರಿಜೇಶ್, ಅಲ್ಲಿನ ಆಟೋ ಚಾಲಕರ ಸಂಘದ ಪ್ರಮುಖರಾದ ಸುರೇಶ್, ಚಂಗಪ್ಪ, ಶ್ಯಾಂ ಪೊನ್ನಪ್ಪ ಸಹಕಾರ ನೀಡಿದರು.