ಮಡಿಕೇರಿ, ಏ.20 : ಕೊಡಗು ಲಾಕ್‍ಡೌನ್ ಆದಾಗ್ಗಿನಿಂದ ಜಿಲ್ಲೆಯಾದ್ಯಂತ ಮದು-ಮಾಂಸ ಮಾರಾಟಕ್ಕೆ ಕತ್ತರಿ ಬಿದ್ದಿತ್ತು. ಮದ್ಯ-ಮಾಂಸ ಪ್ರಿಯರು ತಮಗೆ ಬೇಕಾದುದು ಸಿಗದೆ ಚಡಪಡಿಸು ವಂತಾಗಿತ್ತು. ಇದೀಗ ಕೊಂಚ ನಿಯಮ ಸಡಿಲಿಕೆಯೊಂದಿಗೆ ವಾರದಲ್ಲಿ 3 ದಿನಗಳ ಕಾಲ ಮಾಂಸ ಹಾಗೂ ಕೆರೆ ,ಹೊಳೆ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸುವದ ರೊಂದಿಗೆ ಮಾಂಸ ಪ್ರಿಯರ ನಾಲಿಗೆಗೆ ಒಂದಿಷ್ಟು ರುಚಿ ಮುಟ್ಟಿದಂತಾಗಿದೆ. ಮಾಂಸಕ್ಕಿಂತಲೂ ಮೀನಿಗೆ ಹೆಚ್ಚಿನ ಬೇಡಿಕೆ ಇರುವಂತೆ ಕಂಡುಬರುತ್ತಿದೆ.ಇಂದು ಕಗ್ಗೋಡ್ಲುವಿನ ಕೆರೆಯೊಂದರ ಬಳಿ ಮೀನಿಗಾಗಿ ಎಲ್ಲಿಂದೆಲ್ಲಿಂದಲೋ ಬಂದ ಜನರು ತಮಗಿಷ್ಟದ ಮೀನನ್ನು ಕೊಂಡೊಯ್ಯು ತ್ತಿದ್ದುದು ಕಂಡುಬಂದಿತು. ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ಬರೋಬ್ಬರಿ 2130 ಕೆ.ಜಿ.ಯಷ್ಟು ಮೀನು ಮಾರಾಟವಾಗಿರುವುದು ಗಮನಾರ್ಹ!

ಕಗ್ಗೋಡ್ಲುವಿನ ರಾಷ್ಟ್ರ ಪುರಸ್ಕಾರ ಪಡೆದ ಪ್ರಗತಿಪರ ರೈತ ಮಂದ್ರಿರ ತೇಜಸ್ ನಾಣಯ್ಯ ಅವರು ಕಗ್ಗೋಡ್ಲುವಿನ ತಮ್ಮ ಕೆರೆಯಲ್ಲಿ ಬೆಳೆಸಿದ ಮೀನುಗಳನ್ನು ಹಿಡಿದು ಮಾರಾಟ ಮಾಡಿದರು. ಕೆರೆಯಿಂದ ಹಿಡಿದಾಕ್ಷಣ ಜೀವಂತವಿರುವಂತೆಯೇ ಕೆರೆಯ ಬದಿಯಲ್ಲಿನ ಗದ್ದೆಯಲ್ಲಿಯೇ ಮಾರಾಟದ ವ್ಯವಸ್ಥೆ ಮಾಡಲಾಗಿತ್ತು. ಮೀನು ಮಾರಾಟ ಮಾಡಲಾಗುತ್ತಿದೆ ಎಂಬ ವಿಷಯ ತಿಳಿದ ಜನತೆ ಮುಗಿಬಿದ್ದು ಬಂದು ಖರೀದಿಸಿದರು. ಲಾಕ್ ಡೌನ್ ನಿಯಮದಂತೆ ಒಬ್ಬರ ಹಿಂದೆ ಒಬ್ಬರಂತೆ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ಬಂದು ಖರೀದಿಸಲು ವ್ಯವಸ್ಥೆ ಮಾಡಲಾಗಿ ತ್ತಾದರೂ ಆತುರ ತಡೆಯಲಾಗದೆ ಜನರು ತಾಜಾ ಮೀನಿಗಾಗಿ ನನಗೆ ನನಗೆ ಎಂದು ಮುಗಿ ಬೀಳುತ್ತಿದ್ದರು. ಚೇಂಬರ್ ಆಫ್ ಕಾಮರ್ಸ್ ವಿಧಿಸಿದ ದರದಂತೆ ಕೆ.ಜಿ.ಗೆ ರೂ.200ರಂತೆ ಮಾರಾಟ ಮಾಡಲಾಯಿತು.

ಕೆರೆಯಲ್ಲಿ ಬೆಳೆದ ಕಾಟ್ಲ, ರೋವ್, ಕಾಮನ್ ಕಾರ್ಪ್ ಹಾಗೂ ತಿಲಾಪಿಯ (ಜಿಲೇಬಿ) ಮೀನುಗಳನ್ನು ಮಾರಾಟ ಮಾಡಲಾಗಿದ್ದು ಇಂದು ಒಟ್ಟು 2130 ಕೆ.ಜಿ ಯಷ್ಟು ಮಾರಾಟವಾಗಿದೆ ಎಂದು ರೈತ ತೇಜಸ್ ನಾಣಯ್ಯ ತಿಳಿಸಿದರು. ಸ್ಥಳದಲ್ಲಿಯೇ ಮೀನು ಕ್ಲೀನ್ ಮಾಡಿಕೊಡುವ ವ್ಯವಸ್ಥೆ ಕೂಡ ಮಾಡಲಾಗಿತ್ತು. ತೇಜಸ್ ಅವರ ಸಂಬಂಧಿ ಕಟ್ಟೆಮನೆ ಸೋನಾಜಿತ್ ಸಹಕಾರ ನೀಡಿದರು. ತಾ.22ರ ಬುಧವಾರದಂದು ಕೂಡ ಮೀನು ಮಾರಾಟ ಮಾಡಲಾಗುವು ದೆಂದು ತೇಜಸ್ ತಿಳಿಸಿದ್ದಾರೆ.

-ಸಂತೋಷ್