ಸೋಮವಾರಪೇಟೆ, ಏ.20: ಕೊರೊನಾ ಲಾಕ್ಡೌನ್ನಿಂದ ಆಟೋಗಳ ಸಂಚಾರ ಸಂಪೂರ್ಣ ಸ್ತಬ್ಧವಾಗಿರುವದರಿಂದ ಆಟೋ ಚಾಲಕರುಗಳ ನೆರವಿಗೆ ಸರ್ಕಾರ ಧಾವಿಸಬೇಕೆಂದು ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿಗೆ ಮನವಿ ಸಲ್ಲಿಸಿದರು.
ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ 600ಕ್ಕೂ ಅಧಿಕ ಆಟೋ ಚಾಲಕರಿದ್ದು, ಇವರಲ್ಲಿ ಬಹುತೇಕರು ಆಟೋವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದೀಗ ಲಾಕ್ಡೌನ್ನಿಂದ ಆಟೋಗಳಿಗೆ ಬಾಡಿಗೆ ಇಲ್ಲದಂತಾಗಿದ್ದು, ಬಡ ಚಾಲಕರ ಬದುಕು ಸಂಕಷ್ಟದಲ್ಲಿದೆ. ಈ ಹಿಂದೆ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಆಟೋ ಚಾಲಕರು ಸಮಾಜಕ್ಕೆ ಹೆಚ್ಚಿನ ಸಹಾಯ ಮಾಡಿದ್ದಾರೆ. ಇದೀಗ ಅವರುಗಳ ಬದುಕು ಸಂಕಷ್ಟದಲ್ಲಿದ್ದು, ಸರ್ಕಾರದಿಂದ ಅಗತ್ಯ ನೆರವು ಒದಗಿಸಬೇಕೆಂದು ಸಂಘದ ಅಧ್ಯಕ್ಷ ಮೋಹನ್ ಮನವಿ ಮಾಡಿದರು.
ಆಟೋ ಚಾಲಕರು ಮನೆ ಬಾಡಿಗೆ ಕಟ್ಟಲೂ ಸಹ ಅಸಾಧ್ಯವಾದ ಪರಿಸ್ಥಿತಿಗೆ ತಲುಪಿದ್ದಾರೆ. ಈ ಹಿನ್ನೆಲೆ ಸರ್ಕಾರದಿಂದ ಬಡ ಆಟೋ ಚಾಲಕರಿಗೆ ಆಹಾರದ ಕಿಟ್ ವಿತರಿಸಲು ಕ್ರಮ ಕೈಗೊಳ್ಳಬೇಕು ಅಥವಾ ಪ್ರತಿ ತಿಂಗಳು 5 ಸಾವಿರ ಗೌರವ ಧನ ನೀಡಲು ಸರ್ಕಾರ ಮುಂದಾಗಬೇಕು ಎಂದು ತಾಲೂಕು ಶಿರಸ್ತೇದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.ಈ ಸಂದರ್ಭ ಸಂಘದ ಕಾರ್ಯದರ್ಶಿ ಹೆಚ್.ಕೆ. ಗಂಗಾಧರ್, ಸಹ ಕಾರ್ಯದರ್ಶಿ ಜನಾರ್ಧನ್, ಖಜಾಂಚಿ ಸುರೇಶ್ ಅವರುಗಳು ಉಪಸ್ಥಿತರಿದ್ದರು.