ಮಡಿಕೇರಿ, ಏ. 15: ಇಬ್ಬರು ಮೊಮ್ಮಕ್ಕಳನ್ನು ಕೂಲಿ ಮಾಡಿ ಸಾಕುತ್ತಿರುವ ಅಜ್ಜಿ ಹಾಗೂ ಕೆ.ಆರ್. ನಗರದ ಸಾಲಿಗ್ರಾಮದಿಂದ ಜೀವನ ಸಾಗಿಸಲು ಪತ್ನಿ, ನಾಲ್ವರು ಮಕ್ಕಳೊಂದಿಗೆ ಆಗಮಿಸಿ ಸಂಕಷ್ಟಕ್ಕೆ ಸಿಲುಕಿರುವ ಗಾರೆ ಕೆಲಸ ಮಾಡುವ ವ್ಯಕ್ತಿಯ ಕುಟುಂಬಕ್ಕೆ ಮಾಧ್ಯಮ ಸ್ಪಂದನದಿಂದ ಸೋಮವಾರ ಆಹಾರ ಕಿಟ್ ವಿತರಿಸಲಾಯಿತು.
ಮಡಿಕೇರಿಯ ಫೇರ್ ಟ್ರೇಡರ್ ಮಾಲೀಕರಾದ ಮೊಹಮ್ಮದ್ ರಫೀಕ್ ಈ ಕುಟುಂಬಕ್ಕೆ ಅಗತ್ಯ ವಸ್ತುಗಳ ಕಿಟ್ ಒದಗಿಸಿದರು.
ಗಾಳಿಬೀಡು ಗ್ರಾಮದ ತಮ್ಮ ನಿವಾಸದಲ್ಲಿ ಇಬ್ಬರು ಪುಟ್ಟ ಮೊಮ್ಮಕ್ಕಳೊಂದಿಗೆ ಅಜ್ಜಿ ಜೀವನ ಸಾಗಿಸುತ್ತಿದೆ. ಮಗಳು ಮಕ್ಕಳನ್ನು ಬಿಟ್ಟು ನಾಪತ್ತೆಯಾಗಿದ್ದಾಳೆ. ಅಳಿಯ ಮಡಿಕೇರಿಯಲ್ಲಿ ಗುಜರಿ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಮಕ್ಕಳನ್ನು ಸಾಕುವ ಸಂಪೂರ್ಣ ಜವಾಬ್ದಾರಿ ಅಜ್ಜಿಯ ಹೆಗಲ ಮೇಲಿದೆ.
ಸಾಲಿಗ್ರಾಮದಿಂದ ಐದು ವರ್ಷದ ಹಿಂದೆ ಮಡಿಕೇರಿಗೆ ಬಂದಿರುವ ಕುಟುಂಬಕ್ಕೆ ಲಾಕ್ ಡೌನ್ ಸಮಸ್ಯೆಯಾಗಿ ಕಾಡುತ್ತಿದೆ. ಗಾರೆ ಕೆಲಸ ಇಲ್ಲದರಿಂದ ಕುಟುಂಬ ತೊಂದರೆಗೆ ಸಿಲುಕಿದೆ. ಊರಿನಲ್ಲಿದ್ದ ಬಿಪಿಎಲ್ ಕಾರ್ಡ್ ರದ್ದಾಗಿದೆ. ಹೊಸದಾಗಿ ಕಾರ್ಡ್ ಮಾಡಿಸಿಲ್ಲ. ಇದ್ದ ಹಣ ಖರ್ಚು ಮಾಡಿ ಇಷ್ಟು ದಿನ ಕಳೆದಿದ್ದಾರೆ.
ಎರಡು ಕುಟುಂಬದ ಸಂಕಷ್ಟವನ್ನು ಮಾಧ್ಯಮ ಸ್ಪಂದನ ಸದಸ್ಯ ಕುಡೆಕಲ್ ಸಂತೋಷ್ ಬಯಲುಗೊಳಿಸಿದ್ದರು. ಮಾಧ್ಯಮ ಸ್ಪಂದನ ಸದಸ್ಯರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಡೆಕಲ್ ಸಂತೋಷ್, ಕೆ.ಎ. ಆದಿತ್ಯ, ಸುವರ್ಣ ಮಂಜು, ಸುರೇಶ್ ಬಸವೇಗೌಡ ಅವರು ಖುದ್ದು ತೆರಳಿ ಆಹಾರ ಕಿಟ್ ಒದಗಿಸಿದರು.