*ಸಿದ್ದಾಪುರ, ಏ. 15: ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನುಡಿದಂತೆ ಎಲ್ಲವೂ ನಡೆದಿದ್ದರೆ ತ್ಯಾಗತ್ತೂರು ನಿವಾಸಿ ವಿಶೇಷಚೇತನ ಬಾಲನ್ ಅವರ ಗೃಹ ಪ್ರವೇಶವಾಗಿ ವರ್ಷವೇ ಆಗುತಿತ್ತು. ಆದರೆ ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಸರ್ಕಾರದ ಮನೆ ಸಿಗದ ಕಾರಣ ಬಡ ಜೀವಿಯ ಬದುಕು ಇಂದು ಅತಂತ್ರವಾಗಿದೆ.

ನಡೆಯಲಾಗದಿದ್ದರೂ ತಮ್ಮಿಂದಾದ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬಾಲನ್ ಅವರು ಸ್ಥಳೀಯ ವಿಶೇಷಚೇತನರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೇಕ ಸ್ವ-ಸಹಾಯ ಸಂಘಗಳ ರಚನೆಯಲ್ಲೂ ಪ್ರಮುಖ ಪಾತ್ರ ವಹಿಸಿ ಪರೋಪಕಾರಿ ಎಂದು ಕರೆಯಿಸಿಕೊಂಡಿದ್ದಾರೆ. ಎಲ್ಲೂ ಕೆಲಸಕ್ಕೆ ಹೋಗಲು ಸಾಧ್ಯವಾಗದ ಬಾಲನ್, ತೋಟದಲ್ಲಿ ಕಾರ್ಮಿಕರಾಗಿ ದುಡಿಯುವ ಅವರ ಪತ್ನಿಯೇ ಆಸರೆ. ಸುಮ್ಮನಿರದೆ ಕಾಫಿ, ಕರಿಮೆಣಸು ಮತ್ತು ಅಡಿಕೆ ಬೆಳೆಗಳ ಮಾರಾಟಗಾರರು ಹಾಗೂ ಕೊಂಡುಕೊಳ್ಳುವವರ ನಡುವೆ ಸೇತುವೆಯಾಗಿ ನಿಂತು ತಮ್ಮ ಖರ್ಚಿಗಾಗುವಷ್ಟನ್ನು ಸಂಪಾದಿಸಿಕೊಳ್ಳುತ್ತಿದ್ದಾರೆ.

ಆದರೆ ಇದೀಗ ಕೊರೊನಾ ಲಾಕ್‍ಡೌನ್ ಆದೇಶದ ಹಿನ್ನೆಲೆ ಯಾರಿಗೂ ಕೆಲಸವಿಲ್ಲದಾಗಿದ್ದು, ಬಾಲನ್ ಅವರ ಕುಟುಂಬ ಕೂಡ ಸಂಕಷ್ಟವನ್ನು ಎದುರಿಸುತ್ತಿದೆ. ಬಾಡಿಗೆ ಮನೆಯಲ್ಲಿರುವ ಇವರಿಗೆ ಬಾಡಿಗೆ ಹಣ ಪಾವತಿಸುವುದಕ್ಕೂ ಕಷ್ಟವಾಗಿದೆ. ತಾವು ವಾಸವಿದ್ದ ಮನೆ ಶಿಥಿಲಗೊಂಡಿದೆ ಎನ್ನುವ ಕಾರಣಕ್ಕೆ ವರ್ಷದ ಹಿಂದೆ ಗ್ರಾ.ಪಂ. ಪಿಡಿಓ ಮಾತು ಕೇಳಿ ಕೆಡವಿ ಹಾಕಲಾಯಿತು. ಅಲ್ಲದೆ ಸಾಲ ಮಾಡಿ ನೂತನ ಅಡಿಪಾಯವನ್ನೂ ನಿರ್ಮಿಸ ಲಾಯಿತು.

ಅಧಿಕಾರಿಯ ಸಲಹೆಯಂತೆ ಅಡಿಪಾಯದೆದುರು ನಿಂತು ಫೋಟೋ ತೆಗೆಸಿ ಸಂಬಂಧಿಸಿದ ಅರ್ಜಿಗಳ ಸಹಿತ ಅಧಿಕಾರಿಗಳಿಗೆ ನೀಡಿದ್ದರೂ ಇಲ್ಲಿಯವರೆಗೆ ಮನೆ ಮಂಜೂರಾಗಿಲ್ಲ ಎನ್ನುವ ದು:ಖ ಅವರನ್ನು ಕಾಡುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಮನೆ ನಿರ್ಮಿಸಿಕೊಡಲು ಅವಕಾಶವಿದೆ ಎಂದು ಪಿಡಿಓ ಹೇಳಿದ ಕಾರಣಕ್ಕಾಗಿ ಗ್ರಾ.ಪಂ. ಮತ್ತು ಸಂಬಂಧಿಸಿದ ಇಲಾಖೆಗೆ ಅರ್ಜಿ ಸಲ್ಲಿಸಿದ ಅವರು ಸುಮಾರು 40 ಕಿ.ಮೀ. ದೂರದಲ್ಲಿರುವ ಸೋಮವಾರಪೇಟೆ ತಾಲೂಕು ಕಚೇರಿಗೆ ಅಲೆದಾಟ ನಡೆಸಿದ್ದಾರೆ. 2019 ಮಾರ್ಚ್ ತಿಂಗಳಿನಲ್ಲಿ ಮನೆ ಮಂಜೂರಾಗಿರುವ ಬಗ್ಗೆ ಮಾಹಿತಿ ದೊರೆಯಿತಾದರು ಸ್ಥಳ ಪರಿಶೀಲನೆ ನಡೆಸಿದ ಪಿಡಿಓ, ಈಗಿರುವ ಮನೆ ಶಿಥಿಲಾವÀಸ್ಥೆಯಲ್ಲಿರುವುದರಿಂದ ಹೊಸ ಅಡಿಪಾಯ ಹಾಕುವಂತೆ ಸಲಹೆ ನೀಡಿದರು.

ಅಂತೆಯೇ ಸ್ವಂತ ಸೂರಿನ ಕನಸಿನೊಂದಿಗೆ ರೂ.10 ಸಾವಿರವನ್ನು ಸಾಲ ಪಡೆದು ಪಿಡಿಓ ಅವರಿಗೆ ನೀಡಿದ ಬಾಲನ್ ಶಿಥಿಲಾವಸ್ಥೆಯಲ್ಲಿದ್ದ ಮನೆಯನ್ನು ಕೆಡವಿದರು. ಅಡಿಪಾಯ ನಿರ್ಮಿಸಲು ಮತ್ತೆ ಸಾಲ ಮಾಡಿದರು. ಆದರೆ ಈ ಪ್ರಕ್ರಿಯೆ ನಡೆದು ಒಂದು ವರ್ಷವಾದರೂ ಮನೆ ನಿರ್ಮಾಣಕ್ಕೆ ಅಧಿಕಾರಿಗಳಿಂದ ಸಹಕಾರವೇ ದೊರೆತಿಲ್ಲ. ಪಿಡಿಓ ಬಳಿ ಕೇಳಿದಾಗ ಹಣ ಬಂದಿಲ್ಲ ಎಂಬ ನೆಪ ಹೇಳಿ ಕಾಲಹರಣ ಮಾಡುತ್ತಿದ್ದಾರೆ ಎಂದು ಬಾಲನ್ ಆರೋಪಿಸಿದ್ದಾರೆ.

- ಅಂಚೆಮನೆ ಸುಧಿ