ಮಡಿಕೇರಿ, ಏ. 15: ಕೊರೊನಾ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು ಕರೆ ನೀಡಿರುವ ಲಾಕ್‍ಡೌನ್ ಆದೇಶವನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡುವುದರ ಜೊತೆಗೆ ಕೊಡಗಿನ ಜನರ ಹಿತದೃಷ್ಟಿಯಿಂದ ತೀರಾ ಅನಿವಾರ್ಯವಾಗಿ ಮಾಡಲೇ ಬೇಕಾದ ಕೆಲಸ ಕಾರ್ಯಗಳಿದ್ದರೆ ಜಿಲ್ಲಾಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಸೇರಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಿ ಎಂದು ಉಸ್ತುವಾರಿ ಸಚಿವ ಸೋಮಣ್ಣ ಹೇಳಿದರು.ಜಿಲ್ಲಾ ಪಂಚಾಯತ್ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಇವರುಗಳು ಕೊಡಗಿನಲ್ಲಿ ಅತ್ಯಗತ್ಯವಾಗಿ ಆಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ಸಚಿವರ ಗಮನ ಸೆಳೆದರು.

ಈ ವೇಳೆ ಪ್ರತಿಕ್ರಿಯಿಸಿದ ಸಚಿವರು, ಲಾಕ್‍ಡೌನ್‍ಗೆ ತೊಂದರೆ ಆಗದ ರೀತಿಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕಾರ್ಯಗಳಿದ್ದರೆ ಜನಪ್ರತಿನಿಧಿ ಗಳು ಹಾಗೂ ಜಿಲ್ಲಾಧಿಕಾರಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವಂತೆ ಹೇಳಿದರು.ಏಪ್ರಿಲ್ 20ರ ಬಳಿಕ ವಿನಾಯ್ತಿ ವಿಚಾರ ಅಧಿಕಾರಿಗಳ ಸಭೆಯಲ್ಲಿ ಮಹಾಮಾರಿ ಕೊರೊನಾ ಯಾವುದೇ ಅಪಾಯ ತಂದೊಡ್ಡದೆ ತೊಲಗಲಿ ಎಂದು ನಿಮ್ಮ ನಿಮ್ಮ ದೇವರುಗಳನ್ನು ಪ್ರಾರ್ಥಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ ಸಚಿವ ಸೋಮಣ್ಣ, ತಾ. 20ರ ಬಳಿಕ ಲಾಕ್‍ಡೌನ್ ವಿನಾಯಿತಿ ವಿಚಾರದಲ್ಲಿ ಕೊಡಗು ಒಳ್ಳೆ ಸುದ್ದಿಗಳನ್ನು ನಿರೀಕ್ಷಿಸಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿನ ನೀವೇ ಕೇಳಿ

ಭಾಗಮಂಡಲದಲ್ಲಿ ಪಿಂಡ ಪ್ರಧಾನಕ್ಕೆ ಅವಕಾಶ ಸಿಗಬೇಕು. ಕೊಡಗಿನ ಸಂಪ್ರದಾಯದಂತೆ ಪಿಂಡ ಪ್ರದಾನ ಮಾಡಲು ವಿನಾಯಿತಿ ನೀಡಬೇಕು

(ಮೊದಲ ಪುಟದಿಂದ) ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಧಿಕಾರಿಗಳ ಸಭೆಯಲ್ಲಿ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು. ಈ ವೇಳೆ ಶಾಸಕ ಬೋಪಯ್ಯ ಅದೆಲ್ಲಾ ಆಗಲ್ಲ. ದೇವಾಲಯಗಳು ಸೇರಿದಂತೆ ಎಲ್ಲವನ್ನು ಬಂದ್ ಮಾಡಲು ಪ್ರಧಾನಿಯವರ ಆದೇಶವಾಗಿದೆ. ಅವಕಾಶಬೇಕು ಅನ್ನೋದಾದ್ರೆ ಮೋದಿಯವ್ರನ್ನ ಕೇಳ್ಕೊಳ್ಳಿ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವೀಣಾ ಅಚ್ಚಯ್ಯ, ಮೋದಿಯವರನ್ನು ನಾವು ಕೇಳೋಕಾಗುತ್ತಾ, ನೀವೇ ಕೇಳಿ ಎಂದು ಟಾಂಗ್ ಕೊಟ್ಟರು. ಮಧ್ಯಪ್ರವೇಶಿಸಿದ ಸಚಿವರು ಪ್ರಧಾನಿ ಆದೇಶವನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ಹಾಗಾಗಿ ತಾ. 20ರ ವರೆಗೆ ಸುಮ್ಮನಿರಿ; ನಂತರ ಬೇಕಾದರೆ ನೋಡೋಣ ಎಂದು ಹೇಳಿದರು.

ಆಹಾರ ಇಲಾಖೆಯ ಅಧಿಕಾರಿ ಗಳು ಒಟಿಪಿ ಹೆಸರಿನಲ್ಲಿ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ವೀರಾಜಪೇಟೆಯ ದೇವಣಗೇರಿಯಲ್ಲಿ ತ್ವರಿತಗತಿಯಲ್ಲಿ ಆಹಾರ ವಿತರಿಸುವಂತೆ ಕೆ.ಜಿ. ಬೋಪಯ್ಯ ನಿರ್ದೇಶನ ನೀಡಿದರು.

ಬ್ಯಾಂಕುಗಳಲ್ಲಿ ಗ್ರಾಹಕರು ಸಾಲುಗಟ್ಟಿ ನಿಲ್ಲುವುದನ್ನು ಕಾಣುತ್ತೇವೆ. ಇದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಮಾತನಾಡಿ ಲೋಕೋಪ ಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್‍ಗಳಿಗೆ ಸೂಚಿಸಿದರು.

ಜಿಲ್ಲೆಯ ಪ್ರತಿಯೊಬ್ಬರಿಗೂ ಆಹಾರ ಧಾನ್ಯ ಪೂರೈಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು. ಜಿಲ್ಲೆಯಲ್ಲಿ ಹಲವು ಪ್ರದೇಶಗಳಲ್ಲಿ ಬೋರ್‍ವೆಲ್ ಗಳು ಕೆಟ್ಟು ಹೋಗಿದ್ದು, ಇವುಗಳನ್ನು ಸರಿಪಡಿಸಬೇಕು. ಕುಡಿಯುವ ನೀರಿಗೆ ತೊಂದರೆಯಾಗದಂತೆ ಗಮನ ಹರಿಸಬೇಕು. ಕೃಷಿ ಚಟುವಟಿಕೆಗೆ ಯಾವುದೇ ರೀತಿ ತೊಡಕಾಗದಂತೆ ನೋಡಿಕೊಳ್ಳಬೇಕು ಎಂದು ರಂಜನ್ ಸೂಚಿಸಿದರು.

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿüಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ., ಜಿ.ಪಂ. ಸಿಇಒ ಕೆ. ಲಕ್ಷ್ಮೀಪ್ರಿಯ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್, ಕೊಡಗು ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಡಾ. ಕಾರ್ಯಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.

ಬಳಿಕ ಸಚಿವ ಸೋಮಣ್ಣ ಜಿಲ್ಲಾಸ್ಪತೆಯಾಗಿ ಮಾರ್ಪಾಡಾಗಿರುವ ಅಶ್ವಿನಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.