ಶನಿವಾರಸಂತೆ, ಏ. 15: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ದೊಡ್ಡಕುಂದ ಗ್ರಾಮದ ಅಂಗನವಾಡಿ ಬಳಿ ಇರುವ ಕಾಫಿ ತೋಟದ ಹತ್ತಿರ ಕಳ್ಳಭಟ್ಟಿ ಸಾರಾಯಿ ಮಾರಾಟ ದಂಧೆಗೆ ಸೋಮವಾರ ಪೊಲೀಸರು ಧಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕೊಡ್ಲಿಪೇಟೆ ಹೊಸ ಮುನ್ಸಿಪಾಲ್ಟಿಯ ನಿವಾಸಿ ಹಾಲೇಶ ಎಂಬಾತ ಕಲ್ಲಾರೆ ಗ್ರಾಮದ ಹೊಳೆಯ ಹತ್ತಿರ ಇರುವ ಕಾಡಿನಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಅದನ್ನು ಮಾರಾಟ ಮಾಡಲು ದೊಡ್ಡಕುಂದ ಗ್ರಾಮದ ನಂದೀಶ ಹಾಗೂ ಕೀರ್ತಿಗೆ ಕೊಡುತ್ತಿದ್ದ ಅವರುಗಳು ಕಳ್ಳಭಟ್ಟಿ ಸಾರಾಯಿಯನ್ನು ಮಾರಾಟ ಮಾಡಿ ಹಾಲೇಶನಿಗೆ ಹಣ ಕೊಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ದೊರೆತ ಕೊಡ್ಲಿಪೇಟೆ ಉಪಠಾಣೆ ಹಾಗೂ ಶನಿವಾರಸಂತೆ ಪೊಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಗೆ ಧಾಳಿ ನಡೆಸಲಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಇಬ್ಬರು ತಮ್ಮ ಕೈಯಲ್ಲಿದ್ದ 2 ಲೀಟರ್ ಮದ್ಯ ತುಂಬಿದ ಪ್ಲಾಸ್ಟಿಕ್ ಬಾಟಲಿ ಯನ್ನು ಎಸೆದು ಪರಾರಿಯಾಗಿದ್ದಾರೆ. ಕುಡಿಯಲು ಬಂದವರು ಸಹ ಪೊಲೀಸರನ್ನು ಕಂಡು ಓಡಿ ಹೋಗಿದ್ದಾರೆ. ಸ್ಥಳದಲ್ಲೇ ಇದ್ದ ಹಾಲೇಶನನ್ನು ಬಂಧಿಸಿ ಕಳ್ಳಭಟ್ಟಿ ಸಾರಾಯಿ ಹಾಗೂ ತಯಾರು ಮಾಡಲು ಉಪಯೋಗಿಸುತ್ತಿದ್ದ ಪುಳಿಗಂಜಿ ಪಾತ್ರೆಗಳನ್ನು ವಶಪಡಿಸಿ ಕೊಂಡು ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಕೃಷ್ಣ ನಾಯಕ್ ಕಲಂ 32, 34 ಕೆಇ ಆಕ್ಟ್ ರೀತಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಕೃಷ್ಣ ನಾಯಕ್, ಪ್ರೊಬೇಷನರಿ ಠಾಣಾಧಿಕಾರಿ ಮಂಜುನಾಥ, ಎ.ಎಸ್.ಐ.ಗಳಾದ ಗೋವಿಂದ್, ಶಿವಲಿಂಗ, ಸಿಬ್ಬಂದಿಗಳಾದ ಡಿಂಪಲ್, ಶಫೀರ್, ಇತರರು ಪಾಲ್ಗೊಂಡಿದ್ದರು.