ದಶಕದ ಹಿಂದೆ ಹಾವಾಡಿಗರ ದೇಶ, ಕೊಳಚೆ ಕೊಂಪೆಯ ದೇಶ, ಮಾಲಿನ್ಯ ತಾಂಡವವಾಡುತ್ತಿರುವ ದೇಶ, ಗಲೀಜು ತುಂಬಿದ ಹಳ್ಳಿಗಳ ದೇಶ, ರೋಗ-ರುಜಿನಗಳಿಂದ ನಲುಗುತ್ತಿರುವವರ ದೇಶ. ಜಗತ್ತಿನ ಅನೇಕ ದೇಶಗಳಿಂದ ಟೀಕಿಸಿಕೊಳ್ಳುತ್ತಿದ್ದ, ವಿದೇಶಿಯರು ಪ್ರವಾಸ ಬರಲೇ ಹಿಂಜರಿಯುತ್ತಿದ್ದ, ಹಿಂದುಳಿದ ದೇಶವಾಗಿ ಪರಿಗಣಿತವಾಗಿದ್ದ ರಾಷ್ಟ್ರ. ಈಗ ಅದೇ ದೇಶದ ಮುಂದೆ ಜಗತ್ತಿನ ಪ್ರಬಲ ದೇಶಗಳು ಮಂಡಿಯೂರಿ ಕುಳಿತುಬಿಟ್ಟಿವೆ. ಕೊರೊನಾಕ್ಕೆ ನೀವು ನೀಡುತ್ತಿದ್ದೀರಲ್ಲ ಆ ಮಾತ್ರೆಗಳನ್ನು ನಮಗೂ ಕೊಟ್ಟು ನಮ್ ದೇಶ ಬಚಾವ್ ಮಾಡಿ ಎಂದು ಗೋಗರೆಯುತ್ತಿದೆ. ಈ ದೇಶಕ್ಕೆ ಕೊರೊನಾ ಬಂದರೆ ಸರ್ವನಾಶ ವಾದೀತು ಎಂದೆಲ್ಲಾ ಭಾವಿಸಿದ್ದ ಹಲವಾರು ದೇಶಗಳೇ ಈಗ ಕಕ್ಕಾಬಿಕ್ಕಿ ಯಾಗುವಂತೆ, ಈ ದೇಶ ಕಣ್ಣಿಗೆ ಕಾಣದ ಮಹಾಮಾರಿ ವಿರುದ್ಧ ಸಮರ ಸಾರಿ ವೈರಾಣುವಿಗೆ ಎಲ್ಲಾ ರೀತಿಯಿಂದಲೂ ಕಡಿವಾಣ ಹಾಕಿದೆ. ಜಗತ್ತಿನ ಹಲವು ರಾಷ್ಟ್ರಗಳ ಪಾಲಿಗೆ ಉಪೇಕ್ಷೆಯಾಗಿದ್ದ ಆದರೀಗ ಕೊರೊನಾ ಎದುರಿಸಿದ ಪರಿಯೇ ಅದ್ಭುತ ಎಂದು ಬಣ್ಣಿಸಿಕೊಳ್ಳುತ್ತಿರುವ ಈ ದೇಶವೇ ಭಾರತ.

.....

ವಿಶ್ವದಲ್ಲಿ ಎರಡನೇ ಅತ್ಯಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಭಾರತ ಈಗ ಕೊರೊನಾ ಹೋರಾಟದ ಸಂದರ್ಭ ಸಂಘಟಿತವಾಗಿ ಮೈಕೊಡವಿ ಮೇಲೆದ್ದಿದೆ. ಕೊರೊನಾ ಸೋಂಕು ವಿಶ್ವಕ್ಕೇ ತಗುಲಿ 105 ದಿನಗಳು ಕಳೆದಿದೆ. ಜಗತ್ತಿನ 210 ದೇಶಗಳಲ್ಲಿ ಕೊರೊನಾ ಅಟ್ಟಹಾಸ ತೋರಿದೆ. ಅಮೇರಿಕಾ, ಫ್ರಾನ್ಸ್, ಇಟಲಿ, ಚೀನಾ, ಜರ್ಮನಿ, ರಷ್ಯಾ ಸೇರಿದಂತೆ ವಿಶ್ವದ ಅಗ್ರಗಣ್ಯ ದೇಶಗಳಲ್ಲಿ ಸಾಲುಸಾಲಾಗಿ ಸೋಂಕಿತರ ಬಲಿ ಪಡೆದು ಗೆಲುವಿನ ನಗುವನ್ನು ಈ ರಕ್ಕಸಿ ವೈರಾಣು ಬೀರಿದೆ.

ಇಡೀ ಜಗತ್ತನ್ನೇ ಅತಿಕ್ರಮಿಸಿ ತನ್ನ ಪ್ರಾಬಲ್ಯ ತೋರುವ ಹುಂಬತನದಲ್ಲಿದ್ದ ಕೊರೊನಾಕ್ಕೆ ಭಾರತದಲ್ಲಿ ಹಿನ್ನಡೆಯಾಗಿದೆ. ಚೀನಾದ ಬಳಿಕ ಭಾರತದಲ್ಲಿ ಕೊರೊನಾ ಸೋಂಕು ಬಂದಲ್ಲಿ ಭಾರತ ಕೂಡ ಮತ್ತೊಂದು ಚೀನಾವಾಗುತ್ತೆ. ಜನರು ತೊಪತೊಪನೆ ಸಾವಿನ ಕೂಪಕ್ಕೆ ಬೀಳುತ್ತಾರೆ ಎಂದೆಲ್ಲಾ ಇಡೀ ಜಗತ್ತೇ ಭಾವಿಸಿತ್ತು ಆದರೆ ಆಗಿದ್ದೇನು ? ಭಾರತ ಉಳಿದ ದೇಶಗಳಿಗೆ ಹೋಲಿಸಿದರೆ ನಿರೀಕ್ಷಿತ ರೀತಿ ಯಲ್ಲಿ ಸಾವು, ಸೋಂಕಿನ ಪ್ರಮಾಣವನ್ನು ಆರಂಭಿಕ 100 ದಿನಗಳಲ್ಲಿ ಹೊಂದಲಿಲ್ಲ. ಹೀಗಾಗಿ ಜಗತ್ತಿನ ದಿಗ್ಗಜರೇ ಮೂಗಿನ ಮೇಲೆ ಬೆರಳಿಟ್ಟು ಭಾರತ ಅದೆಂಥಾ ಕಡಿವಾಣ ಹಾಕಿತೆಂದು ಪ್ರಶ್ನಿಸುವಂತಾಗಿದೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ನಡೆ ಇಡೀ ಜಗತ್ತಿನ ಗಮನ ಸೆಳೆದಿದೆ. ಬೇರೆಲ್ಲಾ ದೇಶಗಳಲ್ಲಿ ಕೈಗೊಂಡ ಆರೋಗ್ಯ ಯೋಜನೆಗಳ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ವಿಶ್ವ ಆರೋಗ್ಯ ಸಂಸ್ಥೆಯೇ ಭಾರತ ಸರಿಯಾದ ದಿಕ್ಕಿನಲ್ಲಿ ಹೆಜ್ಜೆಯಿಟ್ಟಿದೆ. ಉಳಿದ ದೇಶಗಳಿಗೆ ಭಾರತ ಮಾದರಿ ಎಂಬ ಪ್ರಶಂಸೆ ವ್ಯಕ್ತಪಡಿಸಿದೆ. ಭಾರತದ ಪ್ರಧಾನಿ ಕೊರೊನಾ ಸಂಹಾರಕ್ಕೆ ಜಾನ್ ಹೇಂ, ಜಹಾನ್ ಹೇಂ ಎಂದು ಆರೋಗ್ಯವೇ ಭಾಗ್ಯ ಎಂಬ ಪುರಾತನ ಮಂತ್ರ ಪಠಿಸಿ ಜನರನ್ನು ಮನೆಯೊಳಕ್ಕೆ ಇರುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.

....

ಯಾವಾಗ ಚೀನಾದ ವುಹಾನ್‍ನಲ್ಲಿ ಕೊರೊನಾ ಸೋಂಕಿನ ಪ್ರಕರಣ ವರದಿಯಾಯಿತೋ, ಜನವರಿಯಲ್ಲಿ ಅದು ಜಗತ್ತಿನ ಇತರ ದೇಶಗಳಿಗೆ ವ್ಯಾಪಿಸತೊಡಗಿತೋ ಭಾರತವೂ ಎಚ್ಚರಗೊಂಡಿತು. ಕೆಲವೇ ದಿನಗಳ ಸಮಯಾವಕಾಶದಲ್ಲಿ ವಿದೇಶದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಮೂಲದವರನ್ನು ಮರಳಿ ಭಾರತಕ್ಕೆ ಕರೆತರಲಾಯಿತು. ಬಹುತೇಕ ಭಾರತೀಯರು ವಾಪಾಸ್ಸಾಗಿದ್ದಾರೆ ಎಂಬುದು ಖಚಿತವಾದಂತೆ ಕೂಡಲೇ ಎಲ್ಲಾ ದೇಶಗಳಿಗೆ ಹಾರಾಟ ನಡೆಸುತ್ತಿದ್ದ ವಿಮಾನಗಳನ್ನು ಭುವಿಗಿಳಿಸಲಾಯಿತು. ವಿಮಾನ ಸಂಚಾರಕ್ಕೆ ಲಾಕ್ ಮಾಡಲಾಯಿತು. ಮಾರ್ಚ್ 22 ರಂದು ಜನತಾ ಕಫ್ರ್ಯೂವಿನ ಮೂಲಕ ಭಾರತೀಯರನ್ನು ಮೊದಲ ಬಾರಿಗೆ ಮುಂದಿನ ಕರಾಳ ದಿನಗಳು ಅಥವಾ ಸವಾಲಿನ ದಿನಗಳಿಗೆ ಸಜ್ಜುಗೊಳಿಸಲಾಯಿತು.

ಕೊರೊನಾ ಸೋಂಕು ಹೇಗೆಲ್ಲಾ ವ್ಯಾಪಿಸಬಹುದು ಎಂಬ ನಿರೀಕ್ಷೆ ಇಲ್ಲದ ಹಿನ್ನೆಲೆಯಲ್ಲಿ ಒಂದೇ ಬಾರಿಗೆ ವಾರಗಟ್ಟಲೆ ಲಾಕ್‍ಡೌನ್ ಮಾಡಲಾಗುತ್ತದೆ ಎಂಬ ಘೋಷಣೆ ಮಾಡಿ ಭಾರತೀಯರನ್ನು ಆತಂಕಕ್ಕೆ ದೂಡದೇ ಹಂತ-ಹಂತವಾಗಿ ದೇಶದ ಜನತೆಯ ವಿಶ್ವಾಸ ಪಡೆಯುತ್ತಲೇ ಲಾಕ್‍ಡೌನ್ ಅಗತ್ಯದ ತಿಳುವಳಿಕೆ ನೀಡುತ್ತಲೇ ದೇಶದ ಜನತೆಯನ್ನು ಮನೆಯೊಳಕ್ಕೆ ಕೂರಿಸುವ ಪ್ರಯೋಗ ಮಾಡಲಾಯಿತು. ಅದು ಯಶಸ್ವಿಯಾಯಿತು ಕೂಡ.

....

ಒಮ್ಮೆ ಯೋಚಿಸಿಕೊಳ್ಳಿ. ಅರ್ಧ ಲೀಟರ್ ಉಚಿತ ಹಾಲಿಗೆ ಎರಡು ಕಿ.ಮೀ. ಸರದಿ ಸಾಲಿನಲ್ಲಿ ಮೂರು ಗಂಟೆ ಮೈಗಂಟಿಕೊಂಡೇ ನಿಲ್ಲುವ ಜನರಿರುವ ಈ ದೇಶದಲ್ಲಿ, ಕೊರೊನಾ ಸೋಂಕು ತಡೆಯಲು ಎಲ್ಲರೂ ದೂರ ದೂರ ನಿಂತುಕೊಳ್ಳಿ, ಅಂತರ ಕಾಪಾಡಿಕೊಳ್ಳಿ ಎಂದರೆ ಜನ ಕೇಳುತ್ತಿದ್ದರೆ ? ನಿಮ್ಮ ಜೀವ ಉಳಿಸಿಕೊಳ್ಳಲು ಹೆಲ್ಮೆಟ್ ಧರಿಸಿ, ಸೀಟ್ ಬೆಲ್ಟ್ ಹಾಕಿಕೊಳ್ಳಿ ಎಂಬ ನಿಯಮ ಜಾರಿಗೆ ತಂದರೂ ಅದನ್ನು ಪಾಲಿಸಲೇ 1 ವರ್ಷದಿಂದ ಹಿಂದೆ-ಮುಂದೆ ನೋಡುತ್ತಿರುವ ಜನತೆಯ ದೇಶವಿದು. ಬೇರೆ ಕೆಲವು ದೇಶಗಳಂತೆ ನಿಮ್ಮ ಜೀವ ನಿಮ್ಮ ಹೊಣೆ. ಸರ್ಕಾರ ನಿಮ್ಮ ಜೀವಕ್ಕೆ ಹೊಣೆಯಲ್ಲ. ಕಾನೂನು ಪಾಲಿಸದೇ ಇದ್ದರೆ ಸರ್ಕಾರಕ್ಕೆ ಏನೂ ಆಗಬೇಕಾಗಿಲ್ಲ, ಹಾಳಾಗಿ ಹೋಗಿ ಎಂಬ ನಿಲುವಿನ ದೇಶ ಭಾರತ ಅಲ್ಲವೇ ಅಲ್ಲ. ಆದರೆ ನಡೆದದ್ದೇ ಬೇರೆ, ಕಷ್ಟಗಳೇನೇ ಇರಲಿ. ಬಹುತೇಕ ಭಾರತೀಯರು ತೆಪ್ಪಗೆ ಮನೆಯಲ್ಲಿಯೇ ಉಳಿದರು. ಲಾಕ್‍ಡೌನ್‍ಗೆ ನಿಜವಾದ ಅರ್ಥ ನೀಡಿದರು.

ಕೊನೇ ಹನಿ.

........

ಗಾಬರಿಯಾಗಬೇಡಿ.. ನಾನಿದ್ದೇನೆ ನಿಮ್ಮ ಜತೆ, ದೇಶ ಮತ್ತು ದೇಶವಾಸಿಗಳ ಜೀವರಕ್ಷಣೆ ನನ್ನ ಹೊಣೆ ಎಂಬಂತೆ ಪ್ರಧಾನಿ ಮಹಾಮಾರಿ ವಿರುದ್ಧ ಗುಡುಗಿದ್ದಾರೆ. ಹೈಡ್ರಾಕ್ಸಿಕ್ರೋರೋಕ್ಸಿನ್ ಎಂಬ ಔಷಧಿಯಿಂದ ರೋಗಿಗಳು ಗುಣಮುಖವಾಗುತ್ತಿದ್ದಾರೆ. ಹೀಗಾಗಿಯೇ ವಿಶ್ವದ ದೊಡ್ಡಣ್ಣ ಅಮೇರಿಕಾ ಸೇರಿದಂತೆ ಪ್ರಮುಖ ದೇಶಗಳು ನಮಗೂ ಇದೇ ಔಷಧಿ ಕೊಡಿ ಎಂದು ಮಂಡಿಯೂರಿ ಕೋರುವಂತಾಗಿದೆ.