ಮಡಿಕೇರಿ, ಏ. 15: ಜಾಗತಿಕ ಮಟ್ಟದಲ್ಲಿ ಸವಾಲಾಗಿರುವ ಕೊರೊನಾ ಸೋಂಕಿನಿಂದ ಕೊಡಗು ಜಿಲ್ಲೆಯನ್ನು ರಕ್ಷಿಸುವ ದಿಸೆಯಲ್ಲಿ; ಕೊಡಗು ಪೊಲೀಸರು, ಗೃಹರಕ್ಷಕರು, ಜಿಲ್ಲಾ ಶಸಸ್ತ್ರದಳ ಸೇರಿದಂತೆ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ ಒಂದು ಸಾವಿರ ಮಂದಿ ಶ್ರಮಿಸುತ್ತಿದ್ದಾರೆ. ಈ ಪೈಕಿ ಮೂವರು ಡಿವೈಎಸ್‍ಪಿಗಳು, ಪೊಲೀಸ್ ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳ ಸಹಿತ 35 ಮಂದಿ ಹಾಗೂ 600 ಪೊಲೀಸರು, 105 ಗೃಹರಕ್ಷಕ ಸಿಬ್ಬಂದಿ, 200 ಮಂದಿ ಶಸಸ್ತ್ರ ಪಡೆ ಪೊಲೀಸರು, 2 ಕೆಎಸ್‍ಆರ್‍ಪಿ ತುಕಡಿ ಮುಂಜಾಗ್ರತಾ ವ್ಯವಸ್ಥೆಯಲ್ಲಿ ತೊಡಗಿದೆ.

ಪೊಲೀಸರು ವಾರದ ಏಳು ದಿವಸಗಳಲ್ಲಿ 24 ಗಂಟೆಯೂ ಪ್ರತಿನಿತ್ಯ ಸರದಿಯಲ್ಲಿ ಕರ್ತವ್ಯನಿರತರಾಗಿದ್ದಾರೆ. ಹೊರ ಜಿಲ್ಲೆ, ರಾಜ್ಯ, ಹೊರ ದೇಶಗಳಿಂದ ಬಂದು ಹೋಗುವವರ ಬಗ್ಗೆಯೂ ಮಾಹಿತಿ ಕಲೆಹಾಕುವದ ರೊಂದಿಗೆ; ಪ್ರಸ್ತುತ ಜಾರಿಗೊಂಡಿರುವ ವ್ಯಾಪಾರ ವಹಿವಾಟು ಸೇರಿದಂತೆ; ಆರೋಗ್ಯ ಸಿಬ್ಬಂದಿಗಳ ಜತೆಯಲ್ಲಿ ಗೃಹಬಂಧನದಲ್ಲಿರುವವರ ಕುರಿತಾಗಿಯೂ ಅಗತ್ಯ ಭದ್ರತೆ ನೋಡಿಕೊಳ್ಳುತ್ತಿದ್ದಾರೆ.

ಜಾಲತಾಣದತ್ತ ಚಿತ್ತ : ಸಾಮಾಜಿಕ ಜಾಲತಾಣಗಳಲ್ಲಿ ಅನವಶ್ಯಕ ವದಂತಿ ಹಬ್ಬಿಸುವದು ಸೇರಿದಂತೆ ಸರಕಾರ, ಸಮಾಜ, ಯಾವದೇ ಮತಧರ್ಮಗಳ ವಿರುದ್ಧ ಪಿತೂರಿ, ಅಪಪ್ರಚಾರದಲ್ಲಿ ತೊಡಗುವವರ ವಿರುದ್ಧವೂ ಕಣ್ಣಿಟ್ಟಿರುವ ಪೊಲೀಸರು; ಕಾನೂನು ಉಲ್ಲಂಘಿಸುವವರ ವಿರುದ್ಧವೂ ಕ್ರಮ ಜರುಗಿಸಲು ಮುಂದಾಗಿದೆ. ಕೆಲವರ ಮೊಬೈಲ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದು; ಇನ್ನು ಕೆಲವರಿಗೆ ಎಚ್ಚರಿಕೆ ಸಂದೇಶ ನೀಡಿ; ಮೊಬೈಲ್‍ಗಳನ್ನು ಹಿಂತಿರುಗಿಸಿದೆ.

ಸ್ವಯಂಘೋಷಣೆ : ಹೊರ ರಾಜ್ಯ ಅಥವಾ ಜಿಲ್ಲೆಗಳಿಂದ ಕೊಡಗಿಗೆ ಬರುವವರು; ಚೆಕ್‍ಪೋಸ್ಟ್‍ಗಳಲ್ಲಿ ಪೊಲೀಸ್ ಇಲಾಖೆಗೆ ಸ್ವಯಂಘೋಷಣಾ ಪತ್ರದೊಂದಿಗೆ; ಇಲ್ಲಿಗೆ ಬರುತ್ತಿರುವ ಉದ್ದೇಶ, ಸೀಮಿತ ಕೆಲಸದೊಂದಿಗೆ ಸಕಾರಣವಿರುವ ವಿವರವಿರುವ ಮಾಹಿತಿ ನೀಡಿ ಬರುವಂತೆ ಕ್ರಮಕೈಗೊಳ್ಳಲಾಗಿದೆ. ಇಂತಹವರಿಗೆ ಗಡಿ ಪ್ರವೆÉೀಶಿಸುವ ಮುನ್ನ ಪೊಲೀಸರು ಸ್ವಯಂ ಘೋಷಣೆ ಪತ್ರ ಪಡೆದು ಮುದ್ರೆ ಹಾಕಿ ಕಳುಹಿಸುತ್ತಿದ್ದಾರೆ.

ದಂಧೆ ವಿರುದ್ಧ ಕಟ್ಟೆಚ್ಚರ : ಈ ಮೊದಲು ಪೊಲೀಸ್ ಇಲಾಖೆಯಿಂದ ವಿವಿಧ ಕಾರಣ ನೀಡಿ ತುರ್ತು ಸೇವೆಗಾಗಿ ವಾಹನ ಪಾಸ್ ಪಡೆದಿರುವವರು; ಕಾನೂನು ಬಾಹಿರ ದಂಧೆಗಳನ್ನು ನಡೆಸುತ್ತಿರುವ ದೂರುಗಳ ಬಗ್ಗೆ ಕಣ್ಣಿಟ್ಟಿರುವ ಪೊಲೀಸರು; ಗೋಮಾಂಸ ಇತ್ಯಾದಿ ಕೃತ್ಯ ಸಂಬಂಧ ಕಠಿಣ ಕ್ರಮಕ್ಕೆ ಮುಂದಾಗಿದೆ.

ಕಠಿಣ ಕ್ರಮದ ಎಚ್ಚರಿಕೆ : ಈಗಾಗಲೇ ಕೊಡಗಿನ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ಭದ್ರತೆ ಕಲ್ಪಿಸಿದ್ದರೂ; ಜಿಲ್ಲೆಯೊಳಗೆ ಅಲ್ಲಲ್ಲಿ ಗೋಮಾಂಸ ಸಾಗಾಟ ಕುರಿತು ಸುಳಿವು ಲಭಿಸಿರುವ ಹಿನ್ನೆಲೆ; ಅಲ್ಲಲ್ಲಿ ಸಂಶಯಾಸ್ಪದ ವ್ಯಕ್ತಿಗಳ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಕೈಗೊಳ್ಳಲಾಗುತ್ತಿದೆ. ಇಂತಹವರ ವಿರುದ್ಧ ಅಕ್ರಮ ದಂಧೆಯ ಜೊತೆಗೆ ಕೊರೊನಾ ಸಂಬಂಧ ನಿರ್ಬಂಧ ಉಲ್ಲಂಘನೆಯ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವದು ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.