ಸೋಮವಾರಪೇಟೆ, ಏ. 15 : ಕೊರೊನಾ ಲಾಕ್ ಡೌನ್ ಹಿನ್ನೆಲೆ ಮದ್ಯದ ಅಂಗಡಿಗಳು ಬಂದ್ ಆಗಿರುವ ಪ್ರಸ್ತುತತೆಯಲ್ಲಿ ತಾಲೂಕಿನ ಅಬಕಾರಿ ಮತ್ತು ಪೊಲೀಸ್ ಇಲಾಖೆ ಯ ನಡುವೆ ಮದ್ಯಕ್ಕಾಗಿ ನಡು ರಸ್ತೆಯಲ್ಲೇ ಜಟಾಪಟಿ ನಡೆದಿರುವ ಘಟನೆ ಆಲೂರುಸಿದ್ದಾಪುರದಿಂದ ವರದಿಯಾಗಿದೆ. ಆಲೂರುಸಿದ್ದಾಪುರದ ಮುಖ್ಯರಸ್ತೆಯ ಬದಿಯಲ್ಲಿರುವ ಪೆಟ್ರೋಲ್ ಬಂಕ್ ಮತ್ತು ಮದ್ಯ ಮಾರಾಟ ಮಳಿಗೆಯ ಸಂಕೀರ್ಣದಲ್ಲಿ ಲಾಕ್ ಡೌನ್ ಆದಾಗಿನಿಂದಲೂ ನಿರಂತರವಾಗಿ ಮದ್ಯ ಸರಬರಾಜು ಆಗುತ್ತಿರುವ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ದೊರೆತಿದ್ದು, ಆ ಮೇರೆಗೆ ಇಂದು ಅಬಕಾರಿ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿದ ಸಂದರ್ಭ ಸೋಮವಾರಪೇಟೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಕಾರ್ಯಾಚರಣೆಗೆ ಅಡ್ಡಿಪಡಿಸಿದರು ಎನ್ನಲಾಗಿದ್ದು, ಎರಡು ಇಲಾಖಾ ಸಿಬ್ಬಂದಿಗಳ ನಡುವೆ ನಡು ರಸ್ತೆಯಲ್ಲೇ ಮದ್ಯದ ವಿಷಯದಲ್ಲಿ ಜಟಾಪಟಿ ನಡೆದಿದೆ.

ಇತ್ತಲಿಂದ ಪೊಲೀಸ್ ಸಿಬ್ಬಂದಿಗಳು ಅತ್ತಲಿಂದ ಅಬಕಾರಿ ಸಿಬ್ಬಂದಿಗಳ ನಡುವೆ ತಳ್ಳಾಟ ನೂಕಾಟ ನಡೆದಿದ್ದು, ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾತನ ವಿಷಯದಲ್ಲಿ ಇತ್ತಂಡಗಳು ಹೊಡೆದಾಡಿಕೊಂಡಿದ್ದಾರೆ. ತಳ್ಳಾಟದ ನಡುವೆ ಖಾಕಿ ಸಮವಸ್ತ್ರ ಧರಿಸಿದ್ದ ಸಿಬ್ಬಂದಿ ರಸ್ತೆಗೆ ಉರುಳಿ ಬಿದ್ದಿರುವ ದೃಶ್ಯಗಳು ಸ್ಥಳೀಯರ ಮೊಬೈಲ್‍ಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.