ಮಡಿಕೇರಿ, ಏ. 13: ವಿಶ್ವದೆಲ್ಲೆಡೆ ಕೊರೊನಾ ವೈರಸ್ ಹರಡುತ್ತಿದ್ದು; ಕೊಡಗು ಜಿಲ್ಲೆಯಲ್ಲೂ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದೆ. ಕೊರೊನಾ ಆತಂಕದ ನಡುವೆ ಮಳೆಗಾಲ ಕೂಡ ಸಮೀಪಿಸುತಲಿದ್ದು; ಎದುರಾಗಬಹುದಾದ ಆಪತ್ತನ್ನು ಎದುರಿಸಲು ಆರಕ್ಷಕರು ಸಜ್ಜಾಗುತ್ತಿದ್ದಾರೆ.ಹೌದು., ಕೊರೊನಾ ವೈರಸ್ ಕಾಲಿಡುತ್ತಿದ್ದಂತೆ ದೇಶವೇ ಲಾಕ್‍ಡೌನ್ ಆಗಿದೆ. ಲಾಕ್‍ಡೌನ್ ಆದ ಕೂಡಲೇ ದೇಶದ ಜನತೆಯ ರಕ್ಷಣೆಯ ಜವಾಬ್ದಾರಿಯ ಹೊಣೆಗಾರಿಕೆ ಸಿಕ್ಕಿದ್ದು; ಪೊಲೀಸರಿಗೆ ಮನೆಯಿಂದ ಜನರು ಹೊರಬಾರದಂತೆ ನಿಗಾವಹಿಸುವದು, ರಸ್ತೆಗಳಲ್ಲಿ ಜನ, ವಾಹನ ಸಂಚಾರವನ್ನು ತಡೆಯುವದು, ಕೊರೊನಾ ಸೋಂಕಿತರ ಮನೆಗಳಿಗೆ ತೆರಳಿ ಅವರನ್ನು ಕರೆತರುವದು, ಗಡಿ ಪ್ರದೇಶಗಳನ್ನು, ಆಸ್ಪತ್ರೆಗಳನ್ನು ನಿಷೇಧಿತ ಪ್ರದೇಶವನ್ನು ಕಾವಲು ಕಾಯುವದು ಸೇರಿದಂತೆ ಮಹತ್ತರ ಜವಾಬ್ದಾರಿ ಪೊಲೀಸರ ಹೆಗಲಿನ ಮೇಲಿದೆ. ಈ ಆತಂಕದ ನಡುವೆ ಕೊಡಗಿನಲ್ಲಿ ಮತ್ತೊಂದು ಭೀತಿ ಕಾಡಲಾರಂಭಿಸಿದೆ.ಕಳೆದ ಎರಡೂ ವರ್ಷ ಪ್ರಕೃತಿ ವಿಕೋಪದಿಂದ ತತ್ತರಿಸಿದ ಕೊಡಗಿನಲ್ಲಿ ಇನ್ನೇನು ಮಳೆಗಾಲ ಪ್ರಾರಂಭವಾಗಲಿದೆ ಎನ್ನುವಾಗಲೇ ಒಂದು ರೀತಿಯ ಆತಂಕ ಸೃಷ್ಟಿಯಾಗುತ್ತಿದೆ. (ಮೊದಲ ಪುಟದಿಂದ) ಮುಂದೆ ಏನಾಗಬಹುದೋ ಎಂಬ ಚಿಂತೆ ಕಾಡುತ್ತಿದೆ. ಇದರ ಬೆನ್ನಲ್ಲೇ ಕೊರೊನಾ ಲಾಕ್‍ಡೌನ್ ಕರ್ತವ್ಯದಲ್ಲೇ ನಿರತರಾಗಿರುವ ಪೊಲೀಸರು ಮುಂದೆ ಎದುರಾಗಬಹುದಾದ ಪ್ರಕೃತಿ ವಿಕೋಪ ಎದುರಿಸಲು ಸಜ್ಜಾಗುತ್ತಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸರಿಗೆ ಈ ಬಗ್ಗೆ ತರಬೇತಿ ನೀಡಲಾಗುತ್ತಿದೆ. ವಿಕೋಪ ಸಂಭವಿಸಿದಾಗ ಆಪತ್ತಿನಲ್ಲಿ ಸಿಲುಕಿಕೊಂಡ ವ್ಯಕ್ತಿಗಳನ್ನು ಸಂರಕ್ಷಿಸುವ ಬಗ್ಗೆ; ಮೃತದೇಹಗಳನ್ನು ಹೊರತೆಗೆದು ಸಾಗಿಸುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಜಿಲ್ಲಾ ಮೀಸಲು ಶಶಸ್ತ್ರ ಪಡೆಯ ನಿರೀಕ್ಷಕ ರಾಚಯ್ಯ ಅವರ ನೇತೃತ್ವದಲ್ಲಿ ತರಬೇತಿ ನೀಡಲಾಗುತ್ತಿದೆ.

ಬಹುತೇಕ ಪೊಲೀಸ್ ಸಿಬ್ಬಂದಿಗಳು ಕೊರೊನಾ ಲಾಕ್‍ಡೌನ್ ವ್ಯವಸ್ಥೆಯಡಿ ಕರ್ತವ್ಯದಲ್ಲಿದ್ದಾರೆ. ಸದ್ಯಕ್ಕೆ ಕೇಂದ್ರದಲ್ಲಿ ಇರುವ ಪೊಲೀಸ್ ಸಿಬ್ಬಂದಿಗಳನ್ನು ಬಳಸಿಕೊಂಡು ತರಬೇತಿ ನೀಡಲಾಗುತ್ತಿದೆ ಎಂದು ರಾಚಯ್ಯ ಮಾಹಿತಿ ನೀಡಿದರು. ಒತ್ತಡ, ಕಾರ್ಯಕ್ಷಮತೆ ನಡುವೆಯೂ ಎಲ್ಲಾ ರೀತಿಯ ವ್ಯವಸ್ಥೆಗಳಿಗೆ ಎದೆಯೊಡ್ಡಿ ಸಾಗುತ್ತಿರುವ ಪೊಲೀಸ್ ಇಲಾಖೆಯ ಈ ಸೇವೆಯನ್ನು ಶ್ಲಾಘಿಸಲೇಬೇಕಿದೆ. - ಸಂತೋಷ್