ಸೋಮವಾರಪೇಟೆ, ಮಾ.13 : ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಆರೋಪಿಗಳ ಪತ್ತೆಗೆ ಅಬಕಾರಿ ಇಲಾಖೆ ಶೋಧಕಾರ್ಯ ನಡೆಸುತ್ತಿದೆ.

ಪೆರಾಜೆ ಗ್ರಾಮದ ನಿವಾಸಿಗಳಾದ ಹೆಚ್.ಎಲ್. ದಾಮೋಧರ್ ಮತ್ತು ಹೆಚ್.ಎಂ. ನಂಜಪ್ಪ ಇವರುಗಳಿಗೆ ಸೇರಿದ ಮನೆ ಹಾಗೂ ಅಡಿಕೆ ತೋಟದ ಮೇಲೆ ಅಧಿಕಾರಿಗಳು ಕಳೆದ ತಾ. 10ರಂದು ಧಾಳಿ ನಡೆಸಿದ್ದು, ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟಕ್ಕೆಂದು ಸಂಗ್ರಹಿಸಿ ಇಡಲಾಗಿದ್ದ 30 ಲೀಟರ್ ಗೇರುಹಣ್ಣಿನ ಪುಳಿಗಂಜಿ ಮತ್ತು ಪರಿಕರಗಳನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಲಾಗಿತ್ತು.

ಕಾರ್ಯಾಚರಣೆ ಸಂದರ್ಭ ಆರೋಪಿಗಳು ಪರಾರಿಯಾಗಿದ್ದು, ಸ್ಥಳೀಯರ ಮಾಹಿತಿಯ ಮೇರೆ ಪ್ರಾರಂಭದಲ್ಲಿ ಎಫ್‍ಐಆರ್‍ನಲ್ಲಿ ಮೂಲೆಮಜಲು ನಿವಾಸಿಗಳು ಎಂದು ನಮೂದಿಸಲಾಗಿತ್ತು. ಆದರೆ ಆರೋಪಿಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಲಾಗಿದ್ದು, ದಾಮೋಧರ್ ಮತ್ತು ನಂಜಪ್ಪ ಅವರುಗಳು ಮೂಲೆಮಜಲಿಗೆ ಸೇರಿದವರಲ್ಲ ಎಂಬದು ತಿಳಿದುಬಂದಿದೆ. ಪರಾರಿಯಾದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಬಕಾರಿ ಇಲಾಖೆಯ ಉಪ ನಿರೀಕ್ಷಕ ಬಿ.ಎಸ್. ಲೋಕೇಶ್ ತಿಳಿಸಿದ್ದಾರೆ.