ನಾಪೆÇೀಕ್ಲು, ಏ. 14: ಏ. 14ರಂದು ವಿಷು ಹಬ್ಬ. ವರುಣ ದೇವನ ಕೃಪೆಯಿಂದ ಇಳೆ ತಂಪಾಗಿ, ಮರ ಗಿಡಗಳು ಹಚ್ಚ ಹಸುರಿನಿಂದ ಕಂಗೊಳಿಸುವ ಸಮಯ. ಆ ದಿನ ಕೊಡಗಿನಲ್ಲಿ ಭೂಮಿ ತಾಯಿಯನ್ನು ಪೂಜಿಸಿ ಮುಂದಿನ ವರ್ಷದ ಕೃಷಿಗಾಗಿ ಭತ್ತದ ಗದ್ದೆಯಲ್ಲಿ ಉಳುಮೆ ಆರಂಭಿಸುವ ಸುದಿನ ಕೂಡ ಆಗಿದೆ. ವಿಷು ಹಬ್ಬದಂದು ಎತ್ತುಗಳ ಸಹಾಯ ದಿಂದ ಉಳುಮೆ ಆರಂಭಿಸಿದರೆ ಅದು ಕೈಲು ಮುಹೂರ್ತ ಹಬ್ಬದವರೆಗೂ ನಿರಂತರವಾಗಿ ನಡೆಯುತ್ತದೆ. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಯಂತ್ರಗಳ ಸಹಾಯದಿಂದ ಕೃಷಿ ಮಾಡುವ ಕಾರಣ ಹಾಗೂ ಹೆಚ್ಚಿನ ಜನ ಕೃಷಿಯನ್ನು ತ್ಯಜಿಸಿರುವ ಕಾರಣ ಕೃಷಿಯ ಆರಂಭದ ದಿನವನ್ನು ಕಾಣಲು ಸಾಧ್ಯವಿಲ್ಲ.
ಅಪರೂಪಕ್ಕೆ ಎಂಬಂತೆ ಕಕ್ಕಬ್ಬೆ ಸಮೀಪದ ಅಮ್ಮಂಗೇರಿಯಲ್ಲಿ ಶ್ರೀ ಇಗ್ಗುತ್ತಪ್ಪ ದೇವರ ಜ್ಯೋತಿಷ್ಯ ಕುಟುಂಬದ ಕಣಿಯರ ನಾಣಯ್ಯ ತಮ್ಮ ಗದ್ದೆಯಲ್ಲಿ ಉಳುಮೆ ಮಾಡುವದರ ಮೂಲಕ ಸಾಂಪ್ರದಾಯಿಕ ಕೃಷಿಗೆ ಚಾಲನೆ ನೀಡಿದರು.
ತಮ್ಮ 72ನೇ ಇಳಿ ವಯಸ್ಸಿನ ಲ್ಲಿಯೂ ಸಾಂಪ್ರದಾಯಿಕ ಕೃಷಿಯನ್ನು ನಡೆಸಿಕೊಂಡು ಬಂದಿರುವ ನಾಣಯ್ಯ ಇತರರಿಗೆ ಮಾದರಿ ಯಾಗಿದ್ದಾರೆ. ಯಾಂತ್ರೀಕರಣದಿಂದ ಒಂದೆರಡು ದಿನಗಳನ್ನು ಭತ್ತದ ಉಳುಮೆ ಮತ್ತು ನಾಟಿ ಕಾರ್ಯ ಮುಗಿಸಬಹುದು. ಆದರೆ ಎತ್ತುಗಳಿಂದ ಉಳುಮೆ ಮಾಡಿದರೆ 2-3 ತಿಂಗಳು ನಿರಂತರವಾಗಿ ಭತ್ತದ ಗದ್ದೆಗಳಲ್ಲಿ ಶ್ರಮಿಸಬೇಕಾಗುತ್ತದೆ.
ಹಿಂದಿನಿಂದಲೂ ಎತ್ತುಗಳ ಸಹಾಯದಿಂದಲೇ ಭತ್ತದ ಕೃಷಿ ಮಾಡುತ್ತಾ ಬಂದಿದ್ದೇನೆ. ಕೃಷಿಯಿಂದ ಮನೆ ಮಂದಿಗೆಲ್ಲ ಉತ್ತಮ ಅಕ್ಕಿಯ ಅನ್ನ, ದನಗಳಿಗೆ ಹುಲ್ಲು ದೊರೆಯುತ್ತಿದೆ. ಕೆಲಸ ಮಾಡುವ ದರಿಂದ ಆರೋಗ್ಯವಾಗಿದ್ದೇನೆ ಎನ್ನುತ್ತಾರೆ ಕಣಿಯರ ನಾಣಯ್ಯ.
-ಪಿ.ವಿ.ಪ್ರಭಾಕರ್