ಗೋಣಿಕೊಪ್ಪಲು, ಏ. 14: ಸೂಕ್ತ ದಾಖಲಾತಿ ಇಲ್ಲದ ಕಾರಣ ಮರಣ ಹೊಂದಿದ ವ್ಯಕ್ತಿಯ ಮೃತ ಶರೀರವನ್ನು ಗಡಿ ದಾಟಿಸಲು ಪೆÇಲೀಸರು ನಿರಾಕರಿಸಿದ ಘಟನೆ ಇಂದು ಆನೆಚೌಕೂರು ಗೇಟ್‍ನಲ್ಲಿ ನಡೆದಿದೆ. ಮೂಲತಃ ದಕ್ಷಿಣ ಕೊಡಗಿನ ಕೋತೂರು ಗ್ರಾಮದವರಾದ ಒಕ್ಕಲಿಗರ ರಾಮಕೃಷ್ಣ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ರಾಮಕೃಷ್ಣ ಅವರು ಮೂಲತಃ ಕೊಡಗಿನವರಾಗಿದ್ದರೂ ಹಾಲಿ ಹುಣಸೂರಿನ ರತ್ನಪುರಿ ಭಾಗದಲ್ಲಿ ನೆಲೆಸಿದ್ದರಿಂದ ಕೊಡಗಿಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳು ಅವರ ಬಳಿ ಇರಲಿಲ್ಲ. ರಾಮಕೃಷ್ಣ ಅವರು ನಿಧನ ಹೊಂದಿದ ಕಾರಣ ಅವರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರಾದ ಕೋತೂರಿನಲ್ಲಿ ನಡೆಸಲು ನಿರ್ಧರಿಸಿದ ಕುಟುಂಬಸ್ಥರು, ಮೃತ ಶರೀರವನ್ನು ಇಂದು ಬೆಳಿಗ್ಗೆ ಆನೆಚೌಕೂರು ಮೂಲಕ ಕೋತೂರಿಗೆ ತರುತ್ತಿದ್ದ ಸಂದರ್ಭದಲ್ಲಿ ಪೆÇಲೀಸರು ತಪಾಸಣೆ ನಡೆಸಿ ಯಾವುದೇ ದಾಖಲಾತಿ ಇಲ್ಲದ್ದರಿಂದ ಮೃತದೇಹವನ್ನು ವಾಪಸ್ ಕಳುಹಿಸಿದ್ದಾರೆ. ಇದರಿಂದಾಗಿ ಹುಣಸೂರು ಸಮೀಪದ ಬನ್ನಿಕುಪ್ಪೆಯಲ್ಲಿ ರಾಮಕೃಷ್ಣ ಅವರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ತಿಳಿದುಬಂದಿದೆ.

- ಎನ್.ಎನ್ ದಿನೇಶ್