ಮಡಿಕೇರಿ, ಏ. 14: ಶೂನ್ಯ ಬಡ್ಡಿದರದ ಬೆಳೆ ಸಾಲ ವಿತರಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸಹಕಾರ ಇಲಾಖೆ ಮೂಲಕ ಮಾರ್ಚ್ 30 ರಂದು ಹೊರಡಿಸಿರುವ ಹೊಸ ಸುತ್ತೋಲೆಯನ್ನು ರೈತರ ಹಿತದೃಷ್ಟಿಯಿಂದ ಪರಿಷ್ಕರಿಸುವುದಾಗಿ ರಾಜ್ಯ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಭರವಸೆ ನೀಡಿರುವುದಾಗಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಪಿ. ಬಾಂಡ್ ಗಣಪತಿ ಅವರು ತಿಳಿಸಿದ್ದಾರೆ.ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಅವರು ಇತ್ತೀಚೆಗೆ ಹೊರಡಿಸಿದ್ದ ಹೊಸ ಆದೇಶದಿಂದಾಗಿ ಜಿಲ್ಲೆಯ ರೈತರು ಹಾಗೂ ಸಹಕಾರ ಸಂಘಗಳಿಗೆ ತೊಂದರೆಯಾಗುತಿತ್ತು. ಇದನ್ನು ಮನಗಂಡು ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಅಧ್ಯಕ್ಷರುಗಳ ತುರ್ತು ಸಭೆ ಕರೆದು ಈ ಬಗ್ಗೆ ತೀರ್ಮಾನಿಸಿ ನೂತನ ಆದೇಶದ ಪರಿಷ್ಕರಣೆಗೆ ಕೇಂದ್ರ ಸಹಕಾರ ಬ್ಯಾಂಕ್‍ನ ಪರವಾಗಿ ಮನವಿ ಸಲ್ಲಿಸಲಾಗಿತ್ತು.ರಾಜ್ಯದ ಮುಖ್ಯಮಂತ್ರಿಗಳು, ಸಹಕಾರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಹಾಗೂ ಅಪೆಕ್ಸ್ ಬ್ಯಾಂಕ್‍ನ ಅಧ್ಯಕ್ಷರಿಗೂ ಈ ಬಗ್ಗೆ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿತ್ತು ಎಂದು ಬಾಂಡ್ ಗಣಪತಿ ತಿಳಿಸಿದ್ದಾರೆ.

ಇದರಂತೆ ಸಹಕಾರ ಸಚಿವರೊಂದಿಗೆ ದೂರವಾಣಿ ಮೂಲಕವೂ ಚರ್ಚಿಸಲಾಗಿದ್ದು, ಇದೀಗ ಹಿಂದಿನ ಸುತ್ತೋಲೆಯನ್ನು ವಾಪಾಸ್ಸು ಪಡೆದು ಪರಿಷ್ಕøತ ಆದೇಶ ಹೊರಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಶಾಸಕ ಕೆ.ಜಿ. ಬೋಪಯ್ಯ ಅವರು ಕೂಡ ಡಿಸಿಸಿ ಬ್ಯಾಂಕ್‍ನ ಮನವಿಯಂತೆ ಸಂಬಂಧಿಸಿದವರೊಂದಿಗೆ ವ್ಯವಹರಿಸಿದ್ದಾರೆ.

ರೈತರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಹೊಸ ಆದೇಶ ಬಂದ ತಕ್ಷಣ ಎಲ್ಲಾ ಸಹಕಾರ ಬ್ಯಾಂಕ್‍ಗಳಿಗೆ ಮಾಹಿತಿ ನೀಡಲಾಗುವುದು ಎಂದು ಬಾಂಡ್ ಗಣಪತಿ ತಿಳಿಸಿದ್ದಾರೆ.