ಮಡಿಕೇರಿ, ಏ. 12: ಕೊಡಗು ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಇಂದು ಈಸ್ಟರ್ ಅನ್ನು ಸಾಂಪ್ರದಾಯಿಕವಾಗಿ ಆಚರಿಸಿದರು. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿರಲಿಲ್ಲವಾದ್ದರಿಂದ ಕ್ರೈಸ್ತ ಬಂಧುಗಳು ತಮ್ಮ ತಮ್ಮ ಮನೆಗಳಲ್ಲಿ ಪೂಜೆ, ಪ್ರಾರ್ಥನೆ ನೆರವೇರಿಸಿದರು.
ಮೈಸೂರಿನ ಧರ್ಮಾಧ್ಯಕ್ಷರಾದ ಡಾ. ವಿಲಿಯಂ ಅವರು ಖಾಸಗಿ ವಾಹಿನಿಯೊಂದರಲ್ಲಿ ಎಲ್ಲರ ಪರವಾಗಿ ಸರ್ವರ ಒಳಿತಿಗಾಗಿ ಪೂಜೆ ನೆರವೇರಿಸಿದರು. ವೀರಾಜಪೇಟೆ ಚರ್ಚ್‍ನ ಧರ್ಮಗುರು ಮದಲೈ ಮುತ್ತು ಅವರು ಚರ್ಚ್‍ನಲ್ಲಿ ಸಲ್ಲಿಸಿದ ಪ್ರಾರ್ಥನೆಯನ್ನು ವಾಟ್ಸಾಪ್ ಮೂಲಕ ಕ್ರೈಸ್ತ ಬಾಂಧವರಿಗೆ ಕಳುಹಿಸಿದರು. ಅದನ್ನು ಕಣ್ತುಂಬಿಕೊಂಡ ಸಮುದಾಯ ಬಾಂಧವರು ಕೊರೊನಾ ನಾಶವಾಗಬೇಕು; ಸರ್ವರಿಗು ಒಳಿತಾಗಬೇಕೆಂಬ ಸಂಕಲ್ಪದೊಂದಿಗೆ ಪ್ರಾರ್ಥಿಸಿದರು.
ಬಳಿಕ ಊಟೋಪಚಾರದಲ್ಲಿ ತೊಡಗಿಸಿಕೊಂಡರು; ಈಸ್ಟರ್ ಪ್ರಯುಕ್ತ ವಿಶೇಷ ತೀರ್ಥ ಪ್ರಸಾದವನ್ನು ಎಲ್ಲಾ ಚರ್ಚ್‍ಗಳಲ್ಲಿ ಇರಿಸಲಾಗಿದ್ದು; ತಾ. 13 ರಂದು (ಇಂದು) ಅದನ್ನು ಕ್ರೈಸ್ತ ಸಮುದಾಯದ ಮಂದಿ ಪಡೆದುಕೊಳ್ಳಲಿದ್ದಾರೆ ಎಂದು ಕ್ರೈಸ್ತ ಸಮುದಾಯದ ಪ್ರಮುಖ ಕೆ.ಟಿ. ಬೇಬಿ ಮ್ಯಾಥ್ಯೂ ‘ಶಕ್ತಿ’ಗೆ ತಿಳಿಸಿದ್ದಾರೆ.