ಮಡಿಕೇರಿ, ಏ. 12: ಜಾಗತಿಕ ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ಕೊಡಗು ಜಿಲ್ಲಾಡಳಿತ ತೆಗೆದುಕೊಂಡಿರುವ ನಿರ್ಬಂಧಗಳನ್ನು; ಇದೀಗ ಬೇಕರಿ ತಿಂಡಿ, ಸ್ಥಳೀಯವಾಗಿ ಲಭಿಸುವ ಮೀನು ಮತ್ತು ಮಾಂಸ ಮಾರಾಟ ಸಂಬಂಧ ಸಡಿಲಗೊಳಿಸಲಾಗಿದೆ. ಈ ಬಗ್ಗೆ ಸಂಬಂಧಿಸಿದ ವ್ಯಾಪಾರಿಗಳಿಗೆ ಕೆಲವು ಷರತ್ತುಗಳೊಂದಿಗೆ ವಾರದಲ್ಲಿ ಮೂರು ದಿವಸ ವಹಿವಾಟು ನಡೆಸಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಅವಕಾಶ ಕಲ್ಪಿಸಿ ಮರು ಆದೇಶ ಹೊರಡಿಸಿದ್ದಾರೆ.ಆ ಮೇರೆಗೆ ಜಿಲ್ಲಾಡಳಿತ ಸ್ಪಂದಿಸಿ ನಿರ್ಬಂಧ ಸಡಿಲಿಕೆಯೊಂದಿಗೆ ಹೊಸ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಕುರಿ, ಕೋಳಿ, ಮೇಕೆ, ಹಂದಿ ಮಾಂಸ ಮತ್ತು ಸ್ಥಳೀಯ ಮೀನುಗಳನ್ನು ಮಾತ್ರ ಪ್ರಸ್ತುತ ಜಾರಿಯಲ್ಲಿರುವಂತೆ ವಾರದಲ್ಲಿ 3 ದಿನ (ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ) ಬೆ. 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಿ ಆದೇಶಿಸಿದೆ. ಮೀನು, ಮಾಂಸ ಮಾರಾಟ ಮಾಡುವ ಅಂಗಡಿಗಳಲ್ಲಿ ಶುಚಿತ್ವವನ್ನು ಕಾಪಾಡಲು ಮತ್ತು ಗ್ರಾಹಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಖರೀದಿಸಲು ಸೂಚಿಸಿದೆ. ಈ ಬಗ್ಗೆ ಸಂಬಂಧಪಟ್ಟ ನಗರಸಭೆ, ಪಟ್ಟಣ ಪಂಚಾಯಿತಿಗಳು ಮತ್ತು ಗ್ರಾಮ ಪಂಚಾಯಿತಿಗಳು ಎಚ್ಚರ ವಹಿಸುವದು ಅಗತ್ಯವೆಂದು ಅವರು ನಿರ್ದೇಶನ ನೀಡಿದ್ದಾರೆ.ಬೇಕರಿಗೆ ಅವಕಾಶ : ಬೇಕರಿ ಮತ್ತು ಕಾಂಡಿಮೆಂಟ್ಸ್‍ಗಳಿಗೆ ಬೇಕರಿ ಪದಾರ್ಥಗಳನ್ನು ಮಾರಾಟ ಮಾಡಲು ಮತ್ತು ಬೇಕರಿ ಪದಾರ್ಥಗಳನ್ನು ತಯಾರಿಸುವ ಉದ್ಯಮಗಳನ್ನು ಕನಿಷ್ಟ ಸಿಬ್ಬಂದಿ, ಕಾರ್ಮಿಕರೊಂದಿಗೆ ಹೆಚ್ಚಿನ ಶುಚಿತ್ವ ಮತ್ತು ನೈರ್ಮಲ್ಯದೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಡೆಸಲು ಅನುಮತಿ ನೀಡಿ ಆದೇಶಿಸಿಸಲಾಗಿದೆ.ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿರುವ ಎಲ್ಲಾ ಬೇಕರಿ ಮತ್ತು ಕಾಂಡಿಮೆಂಟ್ಸ್‍ಗಳಿಗೆ ಬೇಕರಿ ಪದಾರ್ಥಗಳನ್ನು ಪಾರ್ಸಲ್ ಮೂಲಕ ಮಾತ್ರ ಮಾರಾಟ ಮಾಡಲು ಅವಕಾಶ ನೀಡಿದೆ. ಯಾವುದೇ ಕಾರಣಕ್ಕೂ ಬೇಕರಿಯಲ್ಲಿ ಕುಳಿತು ಸೇವಿಸಲು ಅವಕಾಶವಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಲಾಕ್ ಡೌನ್ ಕಾರಣ ಬೇಕರಿ ಉದ್ಯಮವನ್ನು ಸ್ಥಗಿತಗೊಳಿಸಿದ್ದು, ಬೇಕರಿ ಮಾಲೀಕರು ಹಳೆಯ ಮತ್ತು ಕೆಟ್ಟುಹೋದ ಪದಾರ್ಥಗಳನ್ನು ಗ್ರಾಹಕರಿಗೆ ಮಾರಾಟ ಮಾಡಬಾರದು ಎಂದು ನಿರ್ದೇಶಿಸಲಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ತೀವ್ರ ನಿಗಾವಹಿಸುವುದು ಮತ್ತು ತಮ್ಮ ವ್ಯಾಪ್ತಿಯಲ್ಲಿ ಪ್ರತೀ ಬೇಕರಿಗಳಿಗೆ ಭೇಟಿ ನೀಡಿ ಪರಿಶೀಲಿಸುವುದು. ಕೆಟ್ಟುಹೋದ ಪದಾರ್ಥಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ದೂರು ಸಲ್ಲಿಸುವುದು. ತಕ್ಷಣವೇ ದೂರಿನ ಬಗ್ಗೆ ಅಧಿಕಾರಿಗಳು ಕ್ರಮ ವಹಿಸುವಂತೆಯೂ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ನಗರಸಭೆ, ಪಟ್ಟಣ ಪಂಚಾಯತಿಗಳು ಮತ್ತು ಗ್ರಾಮ ಪಂಚಾಯತಿಗಳು ಆರೋಗ್ಯ ನಿರೀಕ್ಷಕರ ಮೂಲಕ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ದರ ನಿಗದಿ :ಕೊಡಗು ಜಿಲ್ಲೆಯಲ್ಲಿ ಮೀನು ಮತ್ತು ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಜಿಲ್ಲಾಡಳಿತ ಚೇಂಬರ್ ಆಫ್ ಕಾಮರ್ಸ್‍ನೊಂದಿಗೆ ಸಮಾಲೋಚನೆ ನಡೆಸಿ ಕುರಿ ಮಾಂಸ ಪ್ರತಿ ಕೆ.ಜಿ.ಗೆ ರೂ. 600, ಕೋಳಿಮಾಂಸ ರೂ.180, ಹಂದಿಮಾಂಸ ರೂ. 220, ಕಾಟ್ಲಾ ಮೀನು ರೂ. 200 ರಂತೆ ಕೆ.ಜಿ. ಪ್ರಮಾಣಕ್ಕೆ ದರ ನಿಗದಿಯೊಂದಿಗೆ ಮಾರಾಟಕ್ಕೆ ಆದೇಶ ಮಾಡಲಾಗಿದೆ. ಈ ಮೇಲಿನ ದರಗಳಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.