ಮಡಿಕೇರಿ, ಏ. 12: ‘ನಾನು 1920ರ ಹೊತ್ತಿನಲ್ಲಿ ಒಂದು ನೂರು ವರ್ಷದ ಹಿಂದೆ ಜನಿಸಿದ್ದಾಗ; ಜನರಿಗೆ ಪ್ಲೇಗ್ ಕಾಯಿಲೆಯೊಂದಿಗೆ; ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿತ್ತು ಎಂದು ನನ್ನ ತಂದೆಯವರಿಂದ ಕೇಳಿದ್ದೆ. ಅನಂತರದಲ್ಲಿ ಬದುಕಿನ ಉದ್ದಕ್ಕೂ ಹಲವಷ್ಟು ಸಾಮಾಜಿಕ ತೊಂದರೆಗಳ ಬಗ್ಗೆ ಕಂಡು ಕೇಳಿದ್ದೆನಾದರೂ; ಇಂತಹದೊಂದು ‘ಕೊರೊನಾ’ ಬಗ್ಗೆ ಊಹಿಸಿಯೇ ಇರಲಿಲ್ಲ.’ ಇದು ಆರೂರು ಸಿದ್ದಾಪುರ ನಿವಾಸಿ; ಇಂದಿಗೆ ಶತಾಯುಷಿಯಾಗಿ 101ನೇ ವಸಂತಕ್ಕೆ ಪದಾರ್ಪಣೆಗೊಂಡಿರುವ ಜೆ.ಸಿ. ಸಿದ್ಧಮಲ್ಲಯ್ಯ ಅವರ ಅನುಭವದ ಮಾತು.ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ; ಪೂರ್ವಾಶ್ರಮದ ತೀರ್ಥರೂಪರಾಗಿರುವ ಆಲೂರು ಸಿದ್ದಾಪುರ ಗ್ರಾಮದ ಕೃಷಿಕ ಕುಟುಂಬದ ಜೆ.ಸಿ. ಸಿದ್ಧಮಲ್ಲಯ್ಯ ಅವರನ್ನು ‘ಶಕ್ತಿ’ ಮಾತನಾಡಿಸಿದಾಗ; ಅತೀವ ಕಾಳಜಿಯೊಂದಿಗೆ ಪ್ರತಿಕ್ರಿಯೆ ನೀಡಿದರು. ಪ್ರಸ್ತುತ ಪರಿಸ್ಥಿತಿ ನಡುವೆ; ಮಕ್ಕಳೆಲ್ಲರೂ ಸೇರಿ ಜನ್ಮದಿನವನ್ನು ಮುಂದಿನ ನವೆಂಬರ್ನಲ್ಲಿ ಸಂಭ್ರಮದಿಂದ ಆಚರಿಸುವ ಮಾತನಾಡುತ್ತಿದ್ದಾರೆ; ಆ ಶಿವ ಅಲ್ಲಿಯ ತನಕ ಆಯುಷ್ಯ ನೀಡುವನೊ.., ಗೊತ್ತಿಲ್ಲ; ಆದರೆ ಈ ಕೊರೊನಾ ರೋಗದಿಂದ ನಮ್ಮ ದೇಶ ಹಾಗೂ ಮನುಕುಲವನ್ನು ಕಾಪಾಡಿದರೆ ಸಾಕು ಎಂದು ಶತಾಯುಷಿ ಅಪೇಕ್ಷಿಸಿದರು.ಶಾಂತಮಲ್ಲಿಕಾರ್ಜುನ ಶ್ರೀಗಳ ಸಹಿತ ಏಳು ಮಂದಿ ಪುತ್ರರು ಹಾಗೂ ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿರುವ ಸಿದ್ಧಮಲ್ಲಯ್ಯ; ಓರ್ವ ಪುತ್ರ ಹಾಗೂ ಪುತ್ರಿಯ ಅಗಲಿಕೆಯೊಂದಿಗೆ; ಮೂರು ವರ್ಷ ಹಿಂದೆ 93ರ ಇಳಿವಯಸ್ಸಿನ ಮಡದಿಯನ್ನು ಕಳೆದುಕೊಂಡಿದ್ದಾರೆ. ತಮ್ಮ ಬದುಕಿನಲ್ಲಿ ತುಂಬು ಕುಟುಂಬದೊಳಗೆ; ಅರಮೇರಿ ಶ್ರೀಗಳು; ನಿವೃತ್ತ ಅಧಿಕಾರಿ ಜಿ.ಎಸ್. ವಿರೂಪಾಕ್ಷಯ್ಯ ಸೇರಿದಂತೆ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳೊಂದಿಗೆ ಅವಿಭಕ್ತ ಕೌಟುಂಬಿಕ ಜೀವನ ಪಯಣ ಮುಂದುವರೆಸಿದ್ದಾರೆ.
ಹಿಂದಿನ ಕಾಲದಲ್ಲಿ ಕಣ್ಣು ಕಾಯಿಸಿದ್ದಷ್ಟು ಗದ್ದೆ ತುಂಬ ಭತ್ತದ ಬೆಳೆ, ಹಟ್ಟಿ ತುಂಬಾ ದನಗಳು; ನಿತ್ಯವೂ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಸಹಿತ ಪೌಷ್ಠಿಕ ಆಹಾರ ಉಂಡ ಜೀವವಿದು ಎಂದು ತಮ್ಮ ದೀರ್ಘಾಯುಷ್ಯದ ಗುಟ್ಟನ್ನು ಅವರು ‘ಶಕ್ತಿ’ಯೊಂದಿಗೆ ಹಂಚಿಕೊಂಡರು. ಎಲ್ಲರಿಗೂ ಆ ದೇವರು ಒಳ್ಳೆಯದು ಮಾಡಲಿ ಎಂದು ತುಂಬುಮನದಿಂದ ಹರಸಿದರು. ಈ ಶತಾಯುಷಿಗೆ ಇಂದು ಅರಮೇರಿ ಶ್ರೀಗಳೊಂದಿಗೆ; ಶನಿವಾರಸಂತೆ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ಕುಟುಂಬದವರು ಶುಭಾಶಯದೊಂದಿಗೆ ಕುಶಲೋಪರಿ ಹಂಚಿಕೊಂಡರು.