ಸಿದ್ದಾಪುರ, ಏ. 11: ಕ್ಷುಲ್ಲಕ ವಿಚಾರಕ್ಕೆ ಗ್ರಾಮ ಪಂಚಾಯಿತಿಯಿಂದ ಮಾರಾಟ ಮಾಡುವ ತರಕಾರಿ ಮಾರಾಟಕ್ಕೆ ಗ್ರಾಮ ಪಂಚಾಯಿತಿ ಸದಸ್ಯರುಗಳೆ ಆಕ್ಷೇಪಣೆ ವ್ಯಕ್ತಪಡಿಸಿರುವ ಪ್ರಸಂಗ ವಾಲ್ನೂರಿನಲ್ಲಿ ನಡೆದಿದೆ. ವಾಲ್ನೂರು, ತ್ಯಾಗತ್ತೂರು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗ್ಗದ ದರದ ರೀತಿಯಲ್ಲಿ ತರಕಾರಿ ಮಾರಾಟ ಮಾಡಲು ಸ್ವಯಂ ಸೇವಕರಿಗೆ ಅವಕಾಶವನ್ನು ನೀಡಲಾಗಿತ್ತು.

ಗ್ರಾಮದ ಸ್ವಯಂ ಸೇವಕ ಯುವಕರು ಗ್ರಾಮಗಳಲ್ಲಿ ತರಕಾರಿ ವ್ಯಾಪಾರಗಳನ್ನು ಮಾಡುತಿದ್ದರು. ಆದರೆ ವಾಲ್ನೂರು ಗ್ರಾಮದ ವಾರ್ಡ್ ಒಂದರಲ್ಲಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರುವ ವ್ಯಕ್ತಿ ಹಾಗೂ ಕೆಲವು ಗ್ರಾಮ ಪಂಚಾಯಿತಿ ಸದಸ್ಯರುಗಳು ಒಂದು ಪಕ್ಷದ ಯುವಕರಿಗೆ ತರಕಾರಿ ಮಾರಾಟ ಮಾಡಲು ಪಂಚಾಯಿತಿ ಅವಕಾಶ ನೀಡಿದೆ ಎಂದು ಆಕ್ಷೇಪಣೆ ವ್ಯಕ್ತಪಡಿಸಿದರು.

ಅಲ್ಲದೇ ವಾಲ್ನೂರು ಗ್ರಾಮದ ವಾರ್ಡ್ ಒಂದರಲ್ಲಿ ತರಕಾರಿ ಮಾರಾಟ ಮಾಡದಂತೆ ಒತ್ತಾಯಿಸಿದ್ದಾರೆ ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಗೊಂದಲ ಏರ್ಪಟ್ಟಿದ್ದು ಈ ವಿಚಾರ ತಿಳಿದ ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಭೇಟಿ ನೀಡಿ ಈ ಬಗ್ಗೆ ಸಂಧಾನ ನಡೆಸಿದ್ದಾರೆ.