ಸೋಮವಾರಪೇಟೆ, ಏ. 11: ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಡ ಕುಟುಂಬಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಹಾಲು ವಿತರಿಸಿದರು.
ಇಲ್ಲಿನ ಪ.ಪಂ. ವ್ಯಾಪ್ತಿಯಲ್ಲಿರುವ ವೆಂಕಟೇಶ್ವರ ಬ್ಲಾಕ್‍ನಲ್ಲಿ ಹಾಲು ವಿತರಣೆಗೆ ಚಾಲನೆ ನೀಡಿದ ರಂಜನ್, ಪ್ರತಿ ಮನೆಗೂ ತೆರಳಿ ಹಾಲು ವಿತರಿಸಿ ಕೊರೊನಾ ಸೋಂಕು ಹಿನ್ನೆಲೆ ಲಾಕ್‍ಡೌನ್ ಆದೇಶ ಜಾರಿಯಲ್ಲಿದ್ದು, ಯಾರೂ ಕೂಡ ಮನೆಯಿಂದ ಹೊರ ಬರದಂತೆ ಮನವಿ ಮಾಡಿದರು.
ನಂತರ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ವಿವಿಧ ಬಡಾವಣೆಗೆ ತೆರಳಿ ಸುಮಾರು 715 ಲೀಟರ್‍ನಷ್ಟು ಹಾಲನ್ನು ವಿತರಿಸಿದರು. ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜು, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪ.ಪಂ. ಸದಸ್ಯರಾದ ಮಹೇಶ್, ನಳಿನಿ ಗಣೇಶ್, ಪಿ.ಕೆ. ಚಂದ್ರು, ಮುಖ್ಯಾಧಿಕಾರಿ ರಮೇಶ್, ಆರೋಗ್ಯ ನಿರೀಕ್ಷಕ ಉದಯಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.