ಪೊನ್ನಂಪೇಟೆ, ಏ. 10: ಎತ್ತೊಂದನ್ನು ಖರೀದಿಸಲು ತೆರಳಿದ್ದ ವ್ಯಕ್ತಿಯೊಬ್ಬರು ಕಳೆದ ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈ ಕುರಿತು ಎಲ್ಲೆಡೆ ಹುಡುಕಾಡಿದರೂ ಯಾವುದೇ ಸುಳಿವು ಲಭಿಸದಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ವೀರಾಜಪೇಟೆ ಸಮೀಪದ ಬೇಟೋಳಿ ಗುಂಡಿಕೆರೆ ನಿವಾಸಿಯಾಗಿದ್ದ ಎಂ.ಎಂ.ಮೂಸ (65) ಎಂಬವರೇ ಕಳೆದ ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದಾರೆ. ಇವರು ಕಾಣೆಯಾಗಿರುವ ಕುರಿತು ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯವಸಾಯಗಾರರಾಗಿದ್ದ ಎಂ.ಎಂ.ಮೂಸ ಅವರು ತಾ. 7ರಂದು ಬೆಳಿಗ್ಗೆ ಗುಂಡಿಕೆರೆಯ ತಮ್ಮ ಮನೆಯಿಂದ ಹೊರಟಿದ್ದಾರೆ. ಮಧ್ಯಾಹ್ನ ನಂತರ ಬಿಟ್ಟಂಗಾಲ ಸಮೀಪದ ಕೊಳತ್ತೋಡು ಗ್ರಾಮದ ಮುರುವಂಡ ರಾಜ ಎಂಬವರಿಗೆ ಸೇರಿದ್ದ ಎತ್ತೊಂದನ್ನು ರೂ.18000 ಹಣಕ್ಕೆ ಖರೀದಿಸಿ ಅದೇ ಎತ್ತಿನೊಂದಿಗೆ ಕಾಲ್ನಡಿಗೆಯಲ್ಲಿ ಮರಳಿದ್ದಾರೆ ಎನ್ನಲಾಗಿದೆ.
ಕೊಳತ್ತೋಡಿನಿಂದ ಹೊರಟ ಎಂ.ಎಂ.ಮೂಸ ಅವರು ರಾತ್ರಿಯಾದರೂ ಮನೆಗೆ ತಲುಪಲಿಲ್ಲ. ಕಾಲ್ನಡಿಗೆಯಲ್ಲೇ ಬರುವುದರಿಂದ ತಡರಾತ್ರಿಯಾದರೂ ಮನೆಗೆ ಬರುತ್ತಾರೆಂಬ ಭರವಸೆಯೊಂದಿಗೆ ಕಾದು ಕುಳಿತ ಮನೆಯವರಿಗೆ, ಬುಧವಾರ ಬೆಳಗಿನ ಜಾವದವರೆಗೂ ಮೂಸ ಅವರು ಮನೆ ಸೇರದಿರುವುದು ಸಂಶಯ ಮೂಡಿಸುತ್ತದೆ. ಇದರಿಂದ ಆತಂಕಗೊಂಡ ಮನೆಯವರು, ಸಂಬಂಧಿಕರಿಗೆ ವಿಷಯ ತಿಳಿಸಿದಾಗ ಮೂಸ ಅವರನ್ನು ಹುಡುಕಲು ಆರಂಭಿಸಲಾಯಿತು. ಈ ವೇಳೆ ಯಾವುದೇ ಸುಳಿವು ದೊರೆಯದಿದ್ದಾಗ ವೀರಾಜಪೇಟೆ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.
ದೂರು ದಾಖಲಿಸಿಕೊಂಡ ಪೊಲೀಸರು ಮೂಸ ಅವರಿಗೆ ಎತ್ತು ಮಾರಾಟ ಮಾಡಿದವರನ್ನು ವಿಚಾರಿಸಿದಾಗ, ಹಣ ಪಡೆದು ಎತ್ತು ನೀಡಿದ್ದು ನಿಜ. ಮಂಗಳವಾರ ಮಧ್ಯಾಹ್ನದ ನಂತರ ಎತ್ತಿನೊಂದಿಗೆ ಅವರು ಇಲ್ಲಿಂದ ತೆರಳಿರುತ್ತಾರೆ. ನಂತರದ ಬೆಳವಣಿಗೆ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಅನುಮಾನದ ಮೇಲೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೂ ಯಾವುದೇ ಸುಳಿವು ದೊರೆತಿಲ್ಲ ಎನ್ನಲಾಗಿದೆ. ಮೂಸ ಅವರು ಸಾಧು ಸ್ವಭಾವದವರಾಗಿದ್ದು, ಗ್ರಾಮದಲ್ಲಿ ಉತ್ತಮ ಗುಣನಡತೆಯ ಅಭಿಪ್ರಾಯ ಹೊಂದಿದವ ರಾಗಿದ್ದಾರೆ. ಅವರು ನಿಗೂಢವಾಗಿ ನಾಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೂಸ ಅವರು ಮನೆಯಿಂದ ತೆರಳಿ 4 ದಿನಗಳಾದರೂ ಮರಳಿ ಬಾರದಿರುವುದು ಮನೆಯವರ ಆತಂಕವನ್ನು ಹೆಚ್ಚು ಮಾಡಿದೆ. ಇದೀಗ ಅನ್ನ-ನೀರು ಬಿಟ್ಟು ಮೂಸ ಅವರಿಗಾಗಿ ಕಾಯುತ್ತಿರುವ ಪತ್ನಿ ಮತ್ತು ಮಕ್ಕಳು, ಮೂಸ ಅವರು ಜೀವಂತವಾಗಿ ಮರಳಿ ಬರುತ್ತಾರೆಂಬ ಭರವಸೆಯೊಂದಿಗೆ ದಿನದೂಡುತ್ತಿದ್ದಾರೆ.
ಮೂಸ ಅವರು ಹಣ ನೀಡಿ ಖರೀದಿಸಿದ್ದ ಎತ್ತು ಕೂಡ ಅವರೊಂದಿಗೆ ನಾಪತ್ತೆಯಾಗಿದ್ದು, ಪ್ರಕರಣವನ್ನು ಮತ್ತಷ್ಟು ಸಂಶಯದಿಂದ ನೋಡುವಂತಾಗಿದೆ. ಪೊಲೀಸರು ಸೂಕ್ತ ತನಿಖೆಯನ್ನು ತೀವ್ರಗತಿಯಲ್ಲಿ ನಡೆಸಿದರೆ ಪ್ರಕರಣವನ್ನು ಬೇಗನೆ ಭೇದಿಸಬಹುದು ಎಂಬದು ಗುಂಡಿಕೆರೆ ಗ್ರಾಮಸ್ಥರ ಅನಿಸಿಕೆಯಾಗಿದೆ.