ಸುಂಟಿಕೊಪ್ಪ, ಏ. 10: ಸುಂಟಿಕೊಪ್ಪ ಪಟ್ಟಣದಲ್ಲಿ ತರಕಾರಿಗಳನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಸುಳಿವು ದೊರೆತ ಮೇರೆ ಪಂಚಾಯಿತಿ ಪಿಡಿಓ ಹಾಗೂ ಸುಂಟಿಕೊಪ್ಪ ಠಾಣಾಧಿಕಾರಿ ತರಕಾರಿ ಅಂಗಡಿಗಳಿಗೆ ಖುದ್ದು ತೆರಳಿ ಪರಿಶೀಲಿಸಿ ಜಿಲ್ಲಾಡಳಿತ ದರದಲ್ಲಿ ತರಕಾರಿ ಮಾರಾಟ ಮಾಡದಿರುವುದನ್ನು ಮನಗಂಡು ನಿಗದಿತ ದರದಲ್ಲಿ ಮಾರಾಟ ಮಾಡದಿದ್ದರೆ ಪರವನಾಗಿ ರದ್ದುಗೊಳಿಸುವುದಾಗಿ ಎಚ್ಚರಿಸಿದರು.

ಅಧಿಕಾರಿಗಳು ಶುಕ್ರವಾರ ತರಕಾರಿ ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಿ ಮುಂದೆ ಹೆಚ್ಚಿನ ದರದಲ್ಲಿ ತರಕಾರಿ ಮಾರಾಟಗೊಳಿಸಿದರೆ ಪರವನಾಗಿಯನ್ನು ರದ್ದುಗೊಳಿಸುವ ಎಚ್ಚರಿಕೆ ನೀಡಿದರು. ಶುಕ್ರವಾರ ತರಕಾರಿ ಜಿಲ್ಲಾಡಳಿತ ನೀಡುವ ದರಕ್ಕಿಂತ ಕಡಿಮೆಯಲ್ಲಿ ಲಭಿಸಿದ್ದು ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿತು.

ಪಂಚಾಯಿತಿ ಪಿಡಿಓ ವೇಣುಗೋಪಾಲ್ ಹಾಗೂ ಸುಂಟಿಕೊಪ್ಪ ಠಾಣಾಧಿಕಾರಿ ಬಿ.ತಿಮ್ಮಪ್ಪ ಪೊಲೀಸ್ ಸಿಬ್ಬಂದಿಗಳು, ಪಂಚಾಯಿತಿ ಸಿಬ್ಬಂದಿಗಳಾದ ಪುನೀತ್, ಶ್ರೀನಿವಾಸ್ ತೆರಳಿ ಪರಿಶೀಲಿಸಿದರು.