ಮಡಿಕೇರಿ, 10: ಕೃಷಿ ಪ್ರಧಾನವಾಗಿರುವ ಕೊಡಗು ಜಿಲ್ಲೆ ಬಹುತೇಕ ಮಳೆಯಾಧಾರಿತವಾದ ಬೆಳೆಗಳಿಂದ ಕೂಡಿದೆ. ಅದರಲ್ಲೂ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬು ಪ್ರಮುಖವಾಗಿ ಕಾಫಿ ಬೆಳೆಯಾಗಿದೆ. ಕಾಫಿಗೆ ಫೆಬ್ರವರಿ ಅಂತ್ಯದಿಂದ ಈ ಅವಧಿಯಲ್ಲಿ ಮುಂದಿನ ಫಸಲಿಗಾಗಿ ಈ ಸಂದರ್ಭದಲ್ಲಿ ಮಳೆ ಅನಿವಾರ್ಯವೂ ಆಗಿದೆ. ಪ್ರಸ್ತುತ ಬೇಸಿಗೆಯ ಈ ಸಂದರ್ಭದಲ್ಲಿ ಕಾಫಿ ಫಸಲಿಗೆ ಹೂಮಳೆ ಇಲ್ಲದಿದ್ದಲ್ಲಿ ಇದು ಮುಂದಿನ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವದು ಖಚಿತ. ಈ ಕಾರಣದಿಂದಾಗಿ ಈ ಅವಧಿಯಲ್ಲಿ ಬೆಳೆಗಾರರು ತೀರಾ ಕ್ರಿಯಾಶೀಲರಾಗಿರುತ್ತಾರೆ. ಮಳೆಯಾಗದಿದ್ದಲ್ಲಿ ಕಾಫಿ ಕುಯಿಲಿನ ಬಳಿಕ ಗಿಡಗಳ ಕಪಾತು, ಮರದ ನೆರಳು ತೆಗೆಯುವದು ಸೇರಿದಂತೆ, ನೀರಿನ ಲಭ್ಯತೆಗೆ ಅನುಸಾರವಾಗಿ ಕೆರೆ, ತೋಡು, ನದಿ ಮೂಲಗಳನ್ನು ಆಶ್ರಯಿಸಿ ತೋಟಗಳಿಗೆ ನೀರು ಹಾಯಿಸುವ ಕಾಯಕದಲ್ಲಿ ತೊಡಗಿರುವದು ಸಹಜ. ಒಂದು ವೇಳೆ ನೈಸರ್ಗಿಕವಾಗಿ ಈ ಸಂದರ್ಭದಲ್ಲಿ ಅಡ್ಡಮಳೆಯಾದಲ್ಲಿ ಒಂದು ರೀತಿಯ ನಿರಾಳತೆ ಬೆಳೆಗಾರರದ್ದು.
ಪ್ರಸಕ್ತ ವರ್ಷ ಕೊರೊನಾ ಎಂಬ ಮಹಾಮಾರಿಯಿಂದಾಗಿ ಎಲ್ಲವೂ ಬುಡಮೇಲಾಗಿದೆ. ದೇಶವ್ಯಾಪಿಯಾಗಿ ಎದುರಾಗಿರುವ ಈ ದುರಂತ ಕಥೆಯನ್ನು ಮೆಟ್ಟಿ ನಿಲ್ಲುವ ಪ್ರಯತ್ನವಾಗಿ ಲಾಕ್ಡೌನ್ ಘೋಷಣೆಯಾಗಿದೆ. ಇದರಿಂದಾಗಿ ಕಾರ್ಮಿಕರ ಅಲಭ್ಯತೆ, ಡೀಸಲ್ ಸಿಗದ ಪರಿಸ್ಥಿತಿಯಂತಹ ಕಾರಣಗಳು ಬೆಳೆಗಾರರಿಗೆ ಪೆಟ್ಟು ನೀಡಿದಂತಾಗಿದೆ. ಇದಲ್ಲದೆ ಕೈಗೆ ಬಂದಿರುವ ಪ್ರಸಕ್ತ ಅವಧಿಯ ಫಸಲನ್ನು ಮಾರಾಟ ಮಾಡುವದೂ ದುಸ್ತರವಾಗಿದೆ.ಇಂತಹ ಹತ್ತು - ಹಲವು ಸನ್ನಿವೇಶಗಳ ನಡುವೆ ಕಳೆದ ಕೆಲವು ಸಮಯದಿಂದ ಜಿಲ್ಲೆಯ ಹಲವೆಡೆ ನೈಸರ್ಗಿಕವಾಗಿ ಮಳೆಯಾಗುತ್ತಿದೆ. ಕೆಲವೆಡೆಗಳಲ್ಲಿ ವಿಶೇಷವಾಗಿ ಚೆಯ್ಯಂಡಾಣೆ, ನಾಪೋಕ್ಲು, ನೆಲಜಿ ವಿಭಾಗಗಳಲ್ಲಿ ಹಲವಾರು ದಿನಗಳ ಹಿಂದೆಯೇ ಮಳೆಯಾಗಿದ್ದು; ಅಲ್ಲಿನ ವಾತಾವರಣ ಒಂದಷ್ಟು ತಂಪಾಗಿತ್ತು. ಮಳೆ ಬಿದ್ದಿರುವಂತಹ ಕೆಲವು ಪ್ರದೇಶಗಳ ವ್ಯಾಪ್ತಿಯಲ್ಲಿಯೇ ಮತ್ತೆ ಮತ್ತೆ ಹೆಚ್ಚು ಮಳೆಯಾಗುತ್ತಿದ್ದರೆ; ಮಳೆಯ ತೀರಾ ಅನಿವಾರ್ಯತೆ ಎದುರಾಗಿರುವ ಇನ್ನು ಕೆಲವೆಡೆಗಳಲ್ಲಿ ಕೇವಲ ಮಳೆಯ ಸಿಂಚನವಾಗಿದ್ದು; ಇದು ಅಂತಹ ಪ್ರದೇಶಗಳ ಬೆಳೆಗಾರರಿಗೆ ಪ್ರಹಾರ ನೀಡಿದಂತಾಗಿದೆ.
ಕೆಲವಾರು ಕಡೆಗಳಲ್ಲಿ ಕೇವಲ 10-15 ಸೆಂಟ್ನಷ್ಟು ಮಾತ್ರ ಮಳೆಯಾಗಿದ್ದು; ಇಲ್ಲಿನ ಬೆಳೆಗಾರರು ಆಗಸವನ್ನು ದಿಟ್ಟಿಸುವಂತಾಗಿದೆ. ಕೊರೊನಾ ಆತಂಕ ಒಂದು ಕಡೆಯಾದರೆ; ಮತ್ತೊಂದು ಕಡೆ ಕಾಫಿಯನ್ನೇ ಅವಲಂಬಿತವಾಗಿರುವದು ಮುಂದಿನ ಭವಿಷ್ಯ ಹೇಗೆ ಎಂಬ ಚಿಂತೆಯನ್ನೂ ಎದುರಿಸುವಂತಾಗಿದೆ.
ಪ್ರಸ್ತುತ ಯಾವ ಯಾವ ವಿಭಾಗಗಳಲ್ಲಿ ಎಷ್ಟೆಷ್ಟು ಮಳೆಯಾಗಿದೆ ಎಂಬ ನಿಖರ ಮಾಹಿತಿ ದೊರೆತಿಲ್ಲವಾದರೂ; ‘ಶಕ್ತಿ’ಗೆ ಜನತೆಯ ಮೂಲದಿಂದ ತಿಳಿದು ಬಂದ ಮಾಹಿತಿಯ ಪ್ರಕಾರ ನಾಪೋಕ್ಲು ವಿಭಾಗದ ಗ್ರಾಮಗಳಿಗೆ ಹೆಚ್ಚು ಮಳೆಯಾಗಿದೆ. ಈ ವ್ಯಾಪ್ತಿಯಲ್ಲಿ ಸುಮಾರು ಐದಾರು ಇಂಚಿಗಿಂತಲೂ ಅಧಿಕ ಮಳೆ ಈ ಬೇಸಿಗೆಯ ಅವಧಿಯಲ್ಲಿ ಈ ತನಕದ ವೇಳೆಗಾಗಲೇ ಸುರಿದಿದೆ. ಕಟ್ಟೆಮಾಡು, ಮೂರ್ನಾಡು, ಮಡಿಕೇರಿ,