ವೀರಾಜಪೇಟೆ, ಏ. 10: ಕೊರೊನಾ ವೈರಸ್‍ನ ಹಬ್ಬುವ ಭೀತಿಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮುಂದುವರೆದಿರುವುದರಿಂದ ಗೋಣಿಕೊಪ್ಪ ತರಕಾರಿ ಮಾರುಕಟ್ಟೆ ಹಾಗೂ ತರಕಾರಿ ವ್ಯಾಪಾರವನ್ನು ಗೋಣಿಕೊಪ್ಪಲಿನ ಆರ್.ಎಂ.ಸಿ. ಯಾರ್ಡ್‍ಗೆ ಇಂದಿನಿಂದ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ನಂದೀಶ್ ತಿಳಿಸಿದ್ದಾರೆ.

ಖಾಸಗಿ ಬಸ್ಸು ನಿಲ್ದಾಣದ ಅರ್ಹ ಬಸ್ಸು ಕಾರ್ಮಿಕರುಗಳಿಗೆ ಪಡಿತರ ಕಿಟ್‍ಗಳನ್ನು ವಿತರಿಸಲಾಗುವುದು. ಕಾರ್ಮಿಕರುಗಳು ಗುರುತಿನ ಚೀಟಿ ತೋರಿಸಿ ತಾಲೂಕು ಕಚೇರಿಯ ಪರಿಹಾರ ವಿಭಾಗದಿಂದ ಪಡೆದುಕೊಳ್ಳಬಹುದು. ಇಂದು ಬಾಳುಗೊಡುವಿನ ಏಕಲವ್ಯ ಹಾಗೂ ಆರ್ಜಿ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಗಳ ಕ್ವಾರಂಟೈನ್‍ಗೆ ಭೇಟಿ ನೀಡಿ ಅಲ್ಲಿ ದಾಖಲಾದ ಕಾರ್ಮಿಕರುಗಳನ್ನು ವಿಚಾರಿಸ ಲಾಯಿತು. ಕಾರ್ಮಿಕರುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪಡಿತರ ಸಾಮಾಗ್ರಿಗಳನ್ನು ವಿತರಿಸಲಾಗಿದೆ ಎಂದು ನಂದೀಶ್ ತಿಳಿಸಿದರು.

ಈ ಎರಡು ಶಾಲೆಗಳ ಕ್ವಾರಂಟೈನ್‍ನಲ್ಲಿ ಹೊರ ಜಿಲ್ಲೆಯ 57ಮಂದಿ ಕಾರ್ಮಿಕರಿದ್ದು ಇವರೆಲ್ಲರೂ ಕೇರಳದಿಂದ ಕೆಲಸವಿಲ್ಲದೆ ಕರ್ನಾಟಕಕ್ಕೆ ವಾಪಸಾಗಿದ್ದರಿಂದ ಎಲ್ಲರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.