ಮಡಿಕೇರಿ, ಏ. 10: ಉಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮಡಿಕೇರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ವಿ.ವಿ. ಮಲ್ಲಾಪುರ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಹಾಗೂ ಅಪರ ಸಿವಿಲ್ ನ್ಯಾಯಾಧೀಶ ಮನು ಅವರುಗಳು ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ ವಾಸಿಸುತ್ತಿರುವ ಹೊರ ರಾಜ್ಯದ ವಲಸೆ ಕಟ್ಟಡ ಕಾರ್ಮಿಕರಿಗೆ ಕೊರೊನಾ ವೈರಾಣುವಿನಿಂದ ಹರಡಿರುವ ಸಾಂಕ್ರಾಮಿಕ ರೋಗವನ್ನು ತಡೆಯಲು ಸರ್ಕಾರ ತೆಗೆದುಕೊಂಡ ಕ್ರಮಗಳು ತಲುಪಿರುವುದನ್ನು ಪರಿಶೀಲನೆ ನಡೆಸಿದರು.

ನಗರದ ರಾಣಿಪೇಟೆ, ಪುಟಾಣಿನಗರ, ಕಾನ್ವೆಂಟ್ ಜಂಕ್ಷನ್, ಮಾರ್ಕೆಟ್ ರಸ್ತೆ, ಖಾಸಗಿ ಬಸ್ ನಿಲ್ದಾಣದ ಬಳಿ ವಾಸಿಸುತ್ತಿರುವ ಕಟ್ಟಡ ಕಾರ್ಮಿಕರಿಗೆ ಪಡಿತರ, ಊಟ ಹಾಗೂ ಅಗತ್ಯ ವಸ್ತುಗಳು ದೊರೆಯುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಕಾರ್ಮಿಕ ಇಲಾಖೆ, ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಕಾರ್ಮಿಕರಿಗೆ ಮಾಸ್ಕ್, ಸಾನಿಟೈಸರ್ ಹಾಗೂ ಸಾಬೂನು ವಿತರಣೆ ಮಾಡಲಾಯಿತು. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಮಡಿಕೇರಿ ತಾಲೂಕು ತಹಶೀಲ್ದಾರ್ ಹಾಗೂ ನಗರ ಸಭೆಯ ಪೌರಾಯುಕ್ತರು ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.