ಪ್ರಚೋದನಾಕಾರಿ ಹೇಳಿಕೆ: ಬಂಧನಕ್ಕೆ ಆಗ್ರಹ ಬೆಂಗಳೂರು, ಏ. 10: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ, ಎಂಎಲ್ಸಿ ಎಂ.ಸಿ. ವೇಣುಗೋಪಾಲ್ ಅವರನ್ನೊಳಗೊಂಡ ಕಾಂಗ್ರೆಸ್ ನಿಯೋಗವು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಬೆಂಗಳೂರಿನ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಭೇಟಿ ಮಾಡಿತು. ಕೊರೊನಾ ಸೋಂಕು ಹರಡಿಕೆ ಸಂಬಂಧ ವದಂತಿಗಳನ್ನು ಹಬ್ಬಿಸುವುದರ ಜತೆಗೆ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಕೋಮು ಸಾಮರಸ್ಯ ಹಾಳುಗೆಡವಲು ಯತ್ನಿಸುತ್ತಿದ್ದು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಮಾಜಿ ಸಚಿವರಾದ ಬಸನಗೌಡ ಪಾಟೀಲ್ ಯತ್ನಾಳ್, ಎಂ.ಪಿ. ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ ವಿರುದ್ಧ ಐಪಿಸಿ ಕಲಂ 153 ಂ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಅವರನ್ನು ತಕ್ಷಣ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರವಾಗಿ ಮನವಿ ಸಲ್ಲಿಸಿದರು.
ತಬ್ಲಿಘಿಗಳ ವಿರುದ್ಧ ಪಾಕಿಸ್ತಾನ ಆಕ್ರೋಶ
ಲಾಹೋರ್, ಏ. 10: ಧಾರ್ಮಿಕ ಸಭೆಯನ್ನು ಆಯೋಜಿಸಿ ಸಾವಿರಾರು ಮಂದಿ ಸೇರಿ, ದೇಶಾದ್ಯಂತ ಕೊರೊನಾ ವೈರಸ್ ಅಧಿಕಗೊಳ್ಳಲು ಕಾರಣರಾದ ತಬ್ಲಿಘಿಗಳ ವಿರುದ್ಧ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿರುವುದು ಭಾರತದಲ್ಲಿ ಅಷ್ಟೇ ಅಲ್ಲ. ಇವರ ಕೃತ್ಯಕ್ಕೆ ಇಸ್ಲಾಂ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲೇ ಆಕ್ರೋಶ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ರೈವಿಂಡ್ ಮರ್ಕಜ್‍ನಲ್ಲಿ ಕೂಡ ಕಳೆದ ತಿಂಗಳು ತಬ್ಲಿಘಿಗಳ ಧಾರ್ಮಿಕ ಸಭೆ ನಡೆದಿದೆ. ಅದೂ ಸ್ಥಳೀಯ ಪಂಜಾಬ್ ಸರ್ಕಾರದ ಎಚ್ಚರಿಕೆ ಹಾಗೂ ವಿರೋಧವನ್ನೂ ಧಿಕ್ಕರಿಸಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಟೀಕೆ ಕೇಳಿಬಂದಿದೆ. ಅಲ್ಲಿನ ಡಾನ್ ಪತ್ರಿಕೆಯ ವರದಿಯ ಪ್ರಕಾರ, ಪಾಕಿಸ್ತಾನ ಪಂಜಾಬ್ ವಿಶೇಷ ವಿಭಾಗದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಮಾ. 10 ರಂದು ನಡೆದ ತಬ್ಲಿಘಿಗಳ ಈ ಸಭೆಯಲ್ಲಿ ಕನಿಷ್ಟ 70,000-80,000 ಜನರು ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿದ್ದ 40 ರಾಷ್ಟ್ರಗಳಿಂದ ಬಂದಿದ್ದ ಸುಮಾರು 3,000 ಜನರು ಅಂತರರಾಷ್ಟ್ರೀಯ ವಿಮಾನ ಸೌಲಭ್ಯಗಳಿಲ್ಲದೇ ತಮ್ಮ ದೇಶಕ್ಕೆ ತೆರಳಲಾಗದೇ ಪಾಕಿಸ್ತಾನದಲ್ಲೇ ಉಳಿದಿದ್ದಾರೆ. ಹೀಗಾಗಿ ಅಲ್ಲಿಯೂ ಇವರ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನದಲ್ಲಿ 4196 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, 60 ಸಾವು ಸಂಭವಿಸಿವೆ. ಜಮಾಅತ್‍ನಲ್ಲಿ ಭಾಗಿಯಾಗಿದ್ದ ನೂರಾರು ತಬ್ಲಿಘಿಗಳಿಗೆ ಸೋಂಕು ದೃಢಪಟ್ಟಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 10,263 ಜನರನ್ನು ಪಂಜಾಬ್ ಪ್ರಾಂತ್ಯದ 36 ಜಿಲ್ಲೆಗಳಲ್ಲಿ ಕ್ವಾರಂಟೈನ್‍ನಲ್ಲಿರಿಸಲಾಗಿದ್ದರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇನ್ನೂ ಸಾವಿರಾರು ಮಂದಿಗಾಗಿ ಶೋಧ ಕಾರ್ಯ ನಡೆದಿದೆ. ತಬ್ಲಿಘಿ ಸಭೆಯಲ್ಲಿ ಭಾಗಿಯಾಗಿದ್ದವರ ಪೈಕಿ 539 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ 404 ರೈವಿಂಡ್ ಮರ್ಕಜ್‍ನಿಂದ ಬಂದುದು ಎಂದು ವರದಿಯಾಗಿವೆ.
ಪ್ರಧಾನಿ ಮೋದಿ ವಿರುದ್ಧ ಪಿತೂರಿ ಆರೋಪ
ನವದೆಹಲಿ, ಏ. 10: ತಬ್ಲಿಘಿ ಜಮಾಅತ್ ಕಾರ್ಯಕ್ರಮದ ಆಯೋಜಕರ ವಿರುದ್ಧ ಮುಸ್ಲಿಂ ನಾಯಕರೇ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೊರೊನಾ ಭೀತಿಯ ನಡುವೆ, ಸರ್ಕಾರದ ಆದೇಶವನ್ನೂ ಲೆಕ್ಕಿಸದೇ ಕಾರ್ಯಕ್ರಮ ನಡೆಸಿದ್ದಕ್ಕೆ ತಬ್ಲಿಘಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ತಬ್ಲಿಘಿ ಜಮಾಅತ್‍ನ ಬಗ್ಗೆ ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಬೋರ್ಡ್‍ನ ಅಧ್ಯಕ್ಷ ವಾಸೀಮ್ ರಿಜ್ವಿ ಮಾತನಾಡಿದ್ದು, ದೆಹಲಿಯ ನಿಜಾಮುದ್ದೀನ್ ಮರ್ಕಜ್‍ನಲ್ಲಿ ಧಾರ್ಮಿಕ ಸಭೆ ಆಯೋಜಿಸಿದ್ದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದೇ ವೇಳೆ ತಬ್ಲಿಘಿ ಜಮಾಅತ್ ವಿರುದ್ಧ ಗಂಭೀರ ಆರೋಪ ಮಾಡಿರುವ ವಾಸೀಮ್ ರಿಜ್ವಿ, ದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಪಿತೂರಿ ಇದಾಗಿದೆ. ತಬ್ಲಿಘಿ ಜಮಾಅತ್‍ನಿಂದ ದೇಶದಲ್ಲಿ ಅಸ್ಥಿರತೆ ಯತ್ನ ನಡೆದಿದೆ. ಅಲ್ಲದೆ, ವೈದ್ಯಕೀಯ ಸಿಬ್ಬಂದಿಗಳ ಸ್ಥೈರ್ಯ ಕುಗ್ಗಿಸುವ ರೀತಿ ನಡೆದುಕೊಂಡಿದ್ದಾರೆ.ಇಂತಹವರಿಗೆ ಕಾನೂನಾತ್ಮಕ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
ಗೃಹ ಸಚಿವರನ್ನೇ ಪ್ರಶ್ನಿಸಿದ ಪೊಲೀಸರು!
ಬೆಂಗಳೂರು, ಏ. 10: ಲಾಕ್‍ಡೌನ್ ಸಮಯದಲ್ಲಿ ಪರಿಸ್ಥಿತಿ ಅರಿಯಲು, ಪಾಸ್‍ಗಳ ದುರುಪಯೋಗ ಪತ್ತೆ ಹಚ್ಚಲು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಂಡ ನಗರ ಪ್ರದಕ್ಷಿಣೆ ಹಾಕುತ್ತಿದ್ದರು. ಈ ಸಮಯದಲ್ಲಿ ಕರ್ನಾಟಕ - ತಮಿಳುನಾಡು ಗಡಿ ಭಾಗ ಸೇರುವ ಅತ್ತಿಬೆಲೆ ಚೆಕ್‍ಪೋಸ್ಟ್ ಬಳಿ ಬಂದಾಗ ಅಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಒಳಬರುವ ಹಾಗೂ ಹೊರ ಹೋಗುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಈ ಸಮಯದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಪೊಲೀಸರು ತಡೆದಿದ್ದಾರೆ. ಆಶ್ಚರ್ಯಕರ ಸಂಗತಿ ಎಂದರೆ; ಪೊಲೀಸರು ತಕ್ಷಣ ಬಂದು ಬಸವರಾಜ ಬೊಮ್ಮಾಯಿ ಅವರನ್ನು ‘ಯಾರು ನೀವು, ಎಲ್ಲಿ ಹೋಗುತ್ತಿದ್ದೀರಿ?’ ಎಂದು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳಿದ್ದಾರೆ. ಬೊಮ್ಮಾಯಿ ಅವರು ಒಂದು ಕ್ಷಣ ಗಲಿಬಿಲಿಯಾಗಿದ್ದಾರೆ. ‘ನಮ್ಮ ಪೊಲೀಸರಿಗೆ ನಾನು ಯಾರು ಎಂಬದು ತಿಳಿದಿಲ್ಲವೆ?’ ಎಂದುಕೊಂಡು ‘ನೀವು ಯಾರು’ ಎಂದು ಪ್ರಶ್ನಿಸುವಷ್ಟರಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಂದೀಪ್ ಪಾಟೀಲ್, ಗೃಹ ಸಚಿವರ ಸಹಾಯಕ್ಕೆ ಧಾವಿಸಿದ್ದಾರೆ. ನಂತರ ಪೊಲೀಸರು ಯಾರು ಎಂದು ವಿವರ ಪಡೆದಾಗ ಆ ಪೊಲೀಸರು ತಮಿಳುನಾಡು ಪೊಲೀಸರಾಗಿದ್ದರು. ರಾಜ್ಯಕ್ಕೆ ಸೇರಿದ ಅತ್ತಿಬೆಲೆ ಗಡಿಯ ಒಳಪ್ರವೇಶಿಸಿ ಬ್ಯಾರಿಕೇಡ್ ನಿರ್ಮಿಸಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಕೂಡಲೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‍ಪಿ ರವಿ ಡಿ. ಚನ್ನಣ್ಣನವರ್ ಅವರನ್ನು ಕರೆದ ಗೃಹ ಸಚಿವರು, ಕರ್ನಾಟಕದ ಗಡಿಯೊಳಗೆ ತಮಿಳುನಾಡು ಪೊಲೀಸರು ಹೇಗೆ ಬಂದರು ಎಂಬದರ ಬಗ್ಗೆ ಪ್ರಶ್ನಿಸಿದ್ದಾರೆ. ಕೂಡಲೇ ತಮಿಳುನಾಡು ಪೊಲೀಸರನ್ನು ಹೊರಹಾಕಿ; ಕರ್ನಾಟಕ ಪೊಲೀಸ್ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸುವಂತೆ ಸೂಚಿಸಿದ್ದಾರೆ.
ದೇಶದಲ್ಲಿ ಕೇವಲ ಶೇ. 0.2 ರಷ್ಟು ಸೋಂಕು
ನವದೆಹಲಿ, ಏ. 10: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಲಾಕ್‍ಡೌನ್ ನಂತಹ ಕಠಿಣ ಕ್ರಮಗಳು ಕೊರೊನಾ ಹರಡುವುದನ್ನು ಬಹುತೇಕ ನಿರ್ಬಂಧಿಸಿವೆ. 130 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ನಿತ್ಯ 400 ರಿಂದ 500 ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ದೆಹಲಿಯ ಮರ್ಕಜ್ ಜಮಾಅತ್ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆ ಪ್ರಕರಣಗಳನ್ನು ಹೊರತುಪಡಿಸಿದರೆ, ಭಾರತ ಅತ್ಯಂತ ಕಡಿಮೆ ಸೋಂಕಿನ ಪ್ರಮಾಣ ಹೊಂದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಗರ್‍ವಾಲ್ ತಿಳಿಸಿದ್ದಾರೆ. ಕೊರೊನಾ ವೈರಸ್ ಸೋಂಕು ಹರಡುವ ಪ್ರಮಾಣ ಭಾರತದಲ್ಲಿ ಅತ್ಯಂತ ಕಡಿಮೆ ಇದೆ. ಗುರುವಾರ ಸುಮಾರು 16,002 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದ್ದು ಈ ಪೈಕಿ ಕೇವಲ ಶೇ. 0.2 ರಷ್ಟು ಮಾತ್ರ ಸೋಂಕು ದೃಢಪಟ್ಟ ಪ್ರಕರಣಗಳಾಗಿವೆ. ಸಂಗ್ರಹಿಸಿದ ಮಾದರಿಗಳನ್ನು ಆಧರಿಸಿ ನಡೆಸಿದ ಪರೀಕ್ಷೆಯಲ್ಲಿ ಸೋಂಕಿನ ಪ್ರಮಾಣ ಅತ್ಯಂತ ಕನಿಷ್ಟ ಪ್ರಮಾಣದಲ್ಲಿದೆ ಎಂದು ಅಗರ್‍ವಾಲ್ ಹೇಳಿದ್ದಾರೆ.
10ನೇ ತರಗತಿ ಪರೀಕ್ಷೆ ಮೇಗೆ ಮುಂದೂಡಿಕೆ
ಬೆಂಗಳೂರು, ಏ. 10: ರಾಜ್ಯದಲ್ಲಿ ಲಾಕ್‍ಡೌನ್ ವಿಸ್ತರಣೆ ಸಾಧ್ಯತೆಯ ಹಿನ್ನೆಲೆ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯನ್ನು ರಾಜ್ಯ ಶಿಕ್ಷಣ ಮಂಡಳಿ ಮೇ ತಿಂಗಳಿಗೆ ಮುಂದೂಡಿದೆ. ಪಿಯುಸಿ ಪರೀಕ್ಷೆಯನ್ನು ಮೇ ತಿಂಗಳಿಗೆ ಮುಂದೂಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಪ್ರಕಟಿಸಿದ್ದಾರೆ. ಲಾಕ್‍ಡೌನ್ ತೆರವುಗೊಳಿಸಿ, ಜನಜೀವನ ಸಹಜ ಸ್ಥಿತಿಗೆ ಬಂದ ನಂತರ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಮೇ ತಿಂಗಳಲ್ಲಿ ಪ್ರಕಟಿಸಲಾಗುವುದು. ಮಕ್ಕಳು ಪರೀಕ್ಷೆಗಾಗಿ ಸಿದ್ಧಗೊಳ್ಳಲು ಸಾಧ್ಯವಾಗುವಂತೆ ಒಂದು ವಾರಕ್ಕೆ ಮುನ್ನ ಪರೀಕ್ಷಾ ದಿನಾಂಕ ಪ್ರಕಟಿಸಲಾಗುವುದು ಎಂದು ಸಚಿವ ಸುರೇಶ್‍ಕುಮಾರ್ ಹೇಳಿದ್ದಾರೆ.