ಎಲ್ಲರಿಗೂ ಬಹುತೇಕ ಸಂದರ್ಭಗಳಲ್ಲಿ ಹಣ ಬೇಕೇ ಬೇಕು. ಆದರೆ ಕೊರೊನಾ ಪೀಡಿತ ದಿನಗಳ ಈ ಸಂದಿಗ್ಧ ಸಮಯದಲ್ಲಿ ಮಾತ್ರ ಹಣ ನೀಡುವವರ ಯೋಚನೆಯೇ ಆಗುವುದಿಲ್ಲ.
ಹೌದು. ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 1 ಸಾವಿರದಷ್ಟ್ಟು ಬ್ಯಾಂಕರ್‍ಗಳ ಸಮಸ್ಯೆ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಕೊರೊನಾ ಸೋಂಕಿತ ವ್ಯಕ್ತಿಯೇನಾದರೂ ಬ್ಯಾಂಕ್‍ಗಳಲ್ಲಿ ನಗದು ನೀಡಿ ಹೋದರೆ ಅದು ಒಂದೇ ಬ್ಯಾಂಕ್‍ನೊಳಗಡೆ 5 ಮಂದಿಯ ಕೈ ಬದಲಿಸುವ ಸಂದರ್ಭ ಆ ಸೋಂಕು ಎಲ್ಲರಿಗೂ ತಗುಲುವ ಸಾಧ್ಯತ ಇದ್ದೇ ಇದೆ. ಇತರೆಲ್ಲಾ ಕೊರೊನಾ ಸಮರ ಸೈನಿಕರಂತೆ ನಮ್ಮ ಹೆಮ್ಮೆಯ ಬ್ಯಾಂಕ್ ಸಿಬ್ಬಂದಿಗಳು ಕೂಡ ದಿನನಿತ್ಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾ ಲಾಕ್‍ಡೌನ್ ಸಂದರ್ಭವೂ ಆರ್ಥಿಕ ಮುಗ್ಗಟ್ಟು ಜನತೆಗೆ ಉಂಟಾಗದಂತೆ ಸೇವೆ ತೋರಿದ್ದಾರೆ. ವಿಮೆ ಇಲ್ಲದೆ ಜೀವಭದ್ರತೆಯೇ ಇಲ್ಲದೆ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ ಆರ್ಥಿಕ ಸೇನಾನಿಗಳ ವ್ಯಥೆಯ ಕಥೆ ಇಲ್ಲಿದೆ.
ಕೊಡಗು ಜಿಲ್ಲೆಯ ಆರ್ಥಿಕ ವ್ಯವಸ್ಥೆಯಲ್ಲಿ ಹಲವಾರು ದಶಕಗಳಿಂದ ಬ್ಯಾಂಕ್‍ಗಳು ಪ್ರಮುಖ ಪಾತ್ರ ವಹಿಸುತ್ತಲೇ ಬಂದಿದೆ. ಕಾಫಿ, ಕರಿಮೆಣಸು ಸೇರಿದಂತೆ ಕೃಷಿಪರ ಜಿಲ್ಲೆಯಾದ ಕೊಡಗಿನಲ್ಲಿ ಬ್ಯಾಂಕ್‍ಗಳು ಗ್ರಾಹಕ ಸ್ನೇಹಿಯಾಗಿಯೇ ಖ್ಯಾತಿ ಹೊಂದಿದೆ.
ಕೊಡಗಿನಲ್ಲಿ ಪ್ರಸ್ತುತ 12 ರಾಷ್ಟ್ರೀಕೃತ ಬ್ಯಾಂಕ್‍ಗಳ 104 ಶಾಖೆಗಳಿದೆ. ಈ ಪೈಕಿ ಪಟ್ಟಣ ಪ್ರದೇಶದಲ್ಲಿ 37, ಗ್ರಾಮೀಣ ಪ್ರದೇಶಗಳಲ್ಲಿ 71 ಶಾಖೆಗಳಿದೆ. ಖಾಸಗಿ ರಂಗದ 8 ಬ್ಯಾಂಕ್‍ಗಳಿಗೆ ಸೇರಿದ 25 ಶಾಖೆಗಳ ಪೈಕಿ 16 ಪಟ್ಟಣ ಮತ್ತು 4 ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ. ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಪ್ರಾದೇಶಿಕ ಕಛೇರಿ ಸೇರಿದಂತೆ 26 ಶಾಖೆಗಳಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 5 ಪಟ್ಟಣ , 12 ಗ್ರಾಮೀಣ ಪ್ರದೇಶದ ಶಾಖೆ ಸೇರಿದಂತೆ 17 ಕಡೆ ಕಾರ್ಯನಿರ್ವಹಿಸುತ್ತಿದೆ. ಕ್ಯಾಸ್‍ಕ್ಯಾಡ್ ಮತ್ತು ಕೆ.ಎಸ್.ಎಫ್.ಸಿ.ಯ 4 ಶಾಖೆಗಳು ಜಿಲ್ಲೆಯಲ್ಲಿದೆ.
ಹೀಗೆ ಈ ಎಲ್ಲಾ ಬ್ಯಾಂಕ್‍ಗಳೂ ಸೇರಿದಂತೆ ಜಿಲ್ಲೆಯಲ್ಲಿ 24 ಬ್ಯಾಂಕ್‍ಗಳ 176 ಶಾಖೆಗಳಿದ್ದು 62 ಪಟ್ಟಣ, 114 ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಸೇರಿ ಏನಿಲ್ಲವೆಂದರೂ 1 ಸಾವಿರದಷ್ಟು ಸಿಬ್ಬಂದಿಗಳು ಇನ್ನಷ್ಟೂ ಬ್ಯಾಂಕ್‍ಗಳಲ್ಲಿ ಸೇರಿಕೊಂಡಂತೆ ಕೆಲಸ ನಿರ್ವಹಿಸುತ್ತಿದ್ದಾರೆ.
ಲಾಕ್‍ಡೌನ್ ಸಂದರ್ಭ ಕೊಡಗಿನ ಗ್ರಾಮೀಣ ಪ್ರದೇಶದ ಜನತೆಗೆ ಉತ್ತಮ ಸೇವೆ ನೀಡಬೇಕೆಂಬ ಉದ್ದೇಶದಿಂದ ಬ್ಯಾಂಕಿಂಗ್ ಸಿಬ್ಬಂದಿಗಳು ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗಮನಾರ್ಹ ಎಂದರೆ ಪ್ರಸ್ತುತ ಕೊಡಗಿನ ಬ್ಯಾಂಕ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಪೈಕಿ ಶೇ. 90 ರಷ್ಟು ಮಂದಿ ಬೇರೆ ರಾಜ್ಯಗಳಿಂದ ಬಂದವರು. ಹೀಗಿದ್ದರೂ ಲಾಕ್‍ಡೌನ್ ಸಂದರ್ಭ ಈ ಸಿಬ್ಬಂದಿಗಳು ಸುರಕ್ಷತೆ ಬಯಸಿ ತಮ್ಮೂರಿಗೆ ತೆರಳದೇ ಕೊಡಗಿನಲ್ಲಿಯೇ ಗ್ರಾಹಕರಿಗೆ ಆರ್ಥಿಕ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.
ಬಹುತೇಕರಿಗೆ ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ತಂಗಲು ಮನೆಗಳಿಲ್ಲ. ಬಹುತೇಕ ಬ್ಯಾಂಕಿಂಗ್ ಸಿಬ್ಬಂದಿಗಳು ಪಕ್ಕದ ಪಟ್ಟಣ ಪ್ರದೇಶಗಳಿಂದ ಬ್ಯಾಂಕ್ ಗಳಿಗೆ ದಿನನಿತ್ಯ ಪ್ರಯಾಣಿಸುವವರು. ಆದರೆ, ಲಾಕ್‍ಡೌನ್ ಎಂಬುದು ಈ ಸಿಬ್ಬಂದಿಗಳ ಪಾಲಿಗೆ ಹೇಳಿಕೊಳ್ಳಲಾಗದ ನರಕ ಸದೃಶ ಪರಿಸ್ಥಿತಿ ತಂದೊಡ್ಡಿದೆ. ಬ್ಯಾಂಕ್‍ಗೆ ಸಮಯಕ್ಕೆ ಸರಿಯಾಗಿ ಹೋಗದೇ ಇದ್ದರೆ, ಗ್ರಾಹಕರ ಬೈಗುಳ ಕೇಳಬೇಕು. ಸರಿಯಾದ ಸಮಯಕ್ಕೆ ಹೋಗೋಣ ಎಂದರೆ ಸಾರಿಗೆ ಸಮಸ್ಯೆ. ಹಳ್ಳಿಗಳಿಗೆ ಹೋಗಲೂ ಸಾಕಷ್ಟು ಪರದಾಡಬೇಕಾದ ದುಸ್ಥಿತಿ. ಅನೇಕರು ಬ್ಯಾಂಕ್ ಹತ್ತಿರವಿರುವ ಗ್ರಾಹಕರ ಮನೆ ಮಿತ್ರರ ಮನೆಯಲ್ಲಿ ಲಾಕ್‍ಡೌನ್ ಸಂದರ್ಭದ ವಿಶೇಷ ಅತಿಥಿಗಳಾಗಿ ಆಶ್ರಯ ಪಡೆದಿದ್ದಾರೆ. ಎಷ್ಟು ದಿನ ಎಂದು ಇತರರಿಗೆ ಹೊರೆಯಾಗಿರೋದು ಎಂಬ ಪ್ರಶ್ನೆಗೆ ಲಾಕ್‍ಡೌನ್ ಯಾವಾಗ ತೆರವಾಗಲಿದೆ ಎಂಬ ಉತ್ತರ ದೊರಕುತ್ತಿಲ್ಲ.
ಲಾಕ್‍ಡೌನ್ ಸಂದರ್ಭದಲ್ಲಿಯೂ ಬ್ಯಾಂಕಿಂಗ್ ಸಿಬ್ಬಂದಿಗಳು ಜಿಲ್ಲೆಯ 150 ಎಟಿಎಂಗಳೂ ಸೇರಿದಂತೆ ಯಾವುದೇ ಬ್ಯಾಂಕ್‍ಗಳಲ್ಲಿಯೂ ಹಣಕಾಸಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತೆ ವಹಿಸಿದ್ದಾರೆ. ಹೀಗಾಗಿಯೇ ಎಲ್ಲಿಯೂ ಎಟಿಎಂಗಳಲ್ಲಿ ಹಣವಿಲ್ಲ ಎಂಬ ದೂರುಗಳು ಬಂದಿಲ್ಲ. ಜತೆಗೆ, ಗ್ರಾಮೀಣ ಪ್ರದೇಶದ ಗ್ರಾಹಕರ ಅನುಕೂಲಕ್ಕಾಗಿ ಜಿಲ್ಲೆಯ 79 ಕಡೆಗಳಲ್ಲಿ ಬ್ಯಾಂಕ್ ಮಿತ್ರ ಎಂಬ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿರುವ ಸಿಬ್ಬಂದಿಗಳೂ ಲಾಕ್‍ಡೌನ್ ಸಂದರ್ಭವೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಕೊಡಗು ಲೀಡ್ ಬ್ಯಾಂಕ್ ಮುಖ್ಯಸ್ಥ ಆರ್. ಕೆ. ಬಾಲಚಂದ್ರ.
ಲಾಕ್‍ಡೌನ್ ಸಂದರ್ಭ ಬಫರ್ ಜೋನ್ ಆಗಿದ್ದ ಕೊಂಡಂಗೇರಿಯಲ್ಲಿದ್ದ ಕಾಪೆರ್Çೀರೇಶನ್ ಬ್ಯಾಂಕ್ 15 ದಿನ ಸ್ಥಗಿತಗೊಂಡಿದ್ದು ಬಿಟ್ಟಂತೆ ಬೇರೆಲ್ಲೂ ಬ್ಯಾಂಕಿಂಗ್ ಸೇವೆ ನಿಲುಗಡೆಯಾಗಿಲ್ಲ. ಪ್ರಧಾನಿಗಳ ಸೂಚನೆಯಂತೆ ಜಿಲ್ಲೆಯಲ್ಲಿನ 1,20,000 ಜನ್‍ಧನ್ ಖಾತೆಗಳ ಪೈಕಿ ಶೇ. 60 ರಷ್ಟು ಮಹಿಳೆಯರಾಗಿದ್ದು ಅವರ ಖಾತೆಗಳಿಗೆ ಹಣ ಜಮಾ ಮಾಡಲಾಗಿದೆ ಎಂದೂ ಬಾಲಚಂದ್ರ ಮಾಹಿತಿ ನೀಡಿದರು. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಜಿಲ್ಲೆಯಲ್ಲಿ 43,575 ಮಂದಿಯಿದ್ದು ಇವರಿಗೆ ಸಂದಾಯವಾಗಬೇಕಾದ 8.71 ಕೋಟಿ ರೂ. ಹಣವನ್ನು ಖಾತೆಗೆ ಜಮಾ ಮಾಡುವ ಪ್ರಕ್ರಿಯೆಯೂ ಪ್ರಾರಂಭವಾಗಿದೆ ಎಂದೂ ಬಾಲಚಂದ್ರ ತಿಳಿಸಿದರು.
ಸರ್ಕಾರಿ ಇಲಾಖೆಗಳಿಗೂ ಎಲ್ಲಿಯೂ ಆರ್ಥಿಕ ಕೊರತೆಯಾಗದಂತೆ ಬ್ಯಾಂಕಿಂಗ್ ಸಿಬ್ಬಂದಿ ಗಮನ ನೀಡಿದ್ದಾರೆ. ಪಾಸ್‍ಬುಕ್ ಎಂಟ್ರಿ ಬಿಟ್ಟರೆ ಬಾಕಿ ಎಲ್ಲಾ ಸೇವೆಯನ್ನೂ ಆರೋಗ್ಯ ತುರ್ತು ಪರಿಸ್ಥಿತಿಯ ಈ ದಿನಗಳಲ್ಲಿಯೂ ಯಶಸ್ವಿಯಾಗಿ ನೀಡುತ್ತಾ ಬಂದಿದ್ದೇವೆ. ಲಾಕ್‍ಡೌನ್ ಅವಧಿ ಸಡಿಲಗೊಳಿಸಿದ ಸಂದರ್ಭ ಎಲ್ಲಾ ಬ್ಯಾಂಕ್‍ಗಳಲ್ಲಿಯೂ ಹೆಚ್ಚಿನ ಗ್ರಾಹಕರು ಒಮ್ಮೆಗೇ ಬರುತ್ತಿದ್ದಾರೆ. ಈ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೂ ಆದ್ಯತೆ ನೀಡಲಾಗಿದೆ. ಕೆಲವೊಮ್ಮೆ ಸಮಯ ಮೀರಿತೆಂದು, ವಿಳಂಬವಾಯಿತೆಂದು ಗ್ರಾಹಕರೂ ತಾಳ್ಮೆ ಕಳೆದುಕೊಂಡು ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ ಸಂದರ್ಭ ಬೇಸರ ತರಿಸಿದರೂ ಈ ದಿನಗಳಲ್ಲಿ ತಾಳ್ಮೆ ಅತ್ಯಂತ ಮುಖ್ಯ ಎಂದು ಸಿಬ್ಬಂದಿಗಳಿಗೆ ತಿಳಿಹೇಳಲಾಗಿದೆ ಎಂದು ಬಾಲಚಂದ್ರ ಮಾಹಿತಿ ನೀಡಿದರು.
ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ನೆಟ್‍ವರ್ಕ್ ಇಲ್ಲದೆ ಸರ್ವರ್ ಸಿಗದೇ ಅನೇಕ ಬಾರಿ ಆನ್‍ಲೈನ್ ವ್ಯವಸ್ಥೆ ಕೈಕೊಟ್ಟಿದೆ. ಕೆಲವು ಗ್ರಾಹಕರು ಇದನ್ನು ಅರ್ಥಮಾಡಿಕೊಳ್ಳದೇ ಎಗರಿ ಬೀಳುತ್ತಾರೆ ಎಂಬುದು ಬ್ಯಾಂಕ್ ಸಿಬ್ಬಂದಿಯೋರ್ವರ ನೋವಿನ ಮಾತು.
200 ರೂಪಾಯಿ ಸಣ್ಣ ಮೊತ್ತವಾಗಿದ್ದರೂ ಹಲವರ ಪಾಲಿಗೆ ಲಾಕ್‍ಡೌನ್ ಸಂದರ್ಭ ಇದುವೇ ಬಹಳ ದೊಡ್ಡ ಮೊತ್ತವಾಗಿದೆ. ಹೀಗಾಗಿ ಸಣ್ಣ ಮೊತ್ತ ಪಡೆಯಲೂ ಬರುವ ಗ್ರಾಹಕನಿಗೂ ಬ್ಯಾಂಕ್‍ಗಳಲ್ಲಿ ಮಹತ್ವ ನೀಡಲಾಗುತ್ತಿದೆ ಎಂದರು ಬ್ಯಾಂಕ್ ವ್ಯವಸ್ಥಾಪಕರೋರ್ವರು.
ಕೊಡಗು ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಯಾರಿಗೂ ತೆರಳಲು ಅವಕಾಶ ಇಲ್ಲದಿರುವುದೂ ಬ್ಯಾಂಕಿಂಗ್ ಸಿಬ್ಬಂದಿಗಳ ಪೈಕಿ ಕೆಲವರಿಗೆ ಸಮಸ್ಯೆಯಾಗಿದೆ. ಹುಣಸೂರು, ಪಿರಿಯಾಪಟ್ಟಣಗಳಿಂದ ಕೊಡಗಿಗೆ ಬರುತ್ತಿದ್ದವರೂ, ಪೆರಾಜೆಯಂತ ಶಾಖೆಗಳಿಗೆ ಕೊಡಗಿನಿಂದ ತೆರಳುವವರಿಗೂ ಇದು ಸಂಕಷ್ಟ ತಂದೊಡ್ಡಿದೆ.
ಕೊನೇ ಹನಿ : ಕೊರೊನಾ ಸಂದರ್ಭ ಕಾರ್ಯನಿರ್ವಹಿಸುತ್ತಿರುವವ ಸಮರ ಸೈನಿಕರನ್ನು ಹಾಡಿ ಹೊಗಳಲಾಗುತ್ತಿದೆ. ಅಂಥವರಿಗೆ 50 ಲಕ್ಷ ರೂ. ವೈಯಕ್ತಿಕ ವಿಮೆ ಕೂಡ ಮಾಡಲಾಗಿದೆ. ಆದರೆ ಈ ವಿಮಾ ವ್ಯಾಪ್ತಿಗೆ ಬ್ಯಾಂಕಿಂಗ್ ಸಿಬ್ಬಂದಿಗಳನ್ನು ಸೇರ್ಪಡೆ ಮಾಡದ ಅಸಮಾಧಾನ ಸಿಬ್ಬಂದಿಗಳಲ್ಲಿದೆ. ನಗದು ಅಮಾನ್ಯಕರಣವಾದಲ್ಲಿಂದ ಹಗಲೂ ರಾತ್ರಿ ಜನರ ಸೇವೆಗೆ ಕಟಿಬದ್ಧರಾಗಿರುವ ಬ್ಯಾಂಕಿಂಗ್ ಕ್ಷೇತ್ರದವರನ್ನು ಇನ್ನೂ ಸರ್ಕಾರ ಪರಿಗಣಿಸಲಿಲ್ಲವಲ್ಲ ಎಂಬ ಮನದ ನೋವು ಇವರಲ್ಲಿದೆ. ಕೊರೊನಾ ಸೋಂಕಿರುವಾತ ಬ್ಯಾಂಕ್‍ನಲ್ಲಿ ನಗದು ಚಲಾವಣೆ ಮಾಡಿದ್ದೇ ಆದಲ್ಲಿ ಕ್ಯಾಶಿಯರ್‍ನಿಂದ ಮೊದಲ್ಗೊಂಡು ಇತರ ನಾಲ್ವರಿಗೂ ಆ ಸೋಂಕು ಹಬ್ಬುತ್ತದೆ. ಇಂಥ ಅಪಾಯ ವಿದ್ದರೂ ಬ್ಯಾಂಕಿಂಗ್ ಕ್ಷೇತ್ರದ ಸಿಬ್ಬಂದಿಗಳು ಗ್ರಾಹಕರಿಗಾಗಿ ದುಡಿಯುತ್ತಲೇ ಇದ್ದಾರೆ. ಕೊರೊನಾ ಸಮರ ವೀರರಂತೆ.