ವೀರಾಜಪೇಟೆ, ಏ.9: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರಂತರ ಶುಚಿತ್ವ ಕಾಪಾಡಲು ಆದ್ಯತೆ ನೀಡಬೇಕು. ಕೊರೊನಾ ವೈರಸ್ ಹರಡದಂತೆ ಎಲ್ಲಾ ರೀತಿಯಿಂದಲೂ ಮುಂಜಾಗ್ರತೆ ವಹಿಸಬೇಕು. ಔಷಧಿಗಳ ಸಿದ್ಧ ದಾಸ್ತಾನಿನೊಂದಿಗೆ ತಾಲೂಕಿನಿಂದ ಆಸ್ಪತ್ರೆಗೆ ಬರುವ ಇತರ ಎಲ್ಲಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೀರಾಜಪೇಟೆ ಸಮುಚ್ಚಯ ನ್ಯಾಯಾಲಯಗಳ ನ್ಯಾಯಾಧೀಶರುಗಳು ಆಸ್ಪತ್ರೆಯ ವೈದ್ಯರುಗಳಿಗೆ ಸಲಹೆ ನೀಡಿದರು.

ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಇಲ್ಲಿನ ಸಿವಿಲ್ ಜಡ್ಜ್ ನ್ಯಾಯಾಧೀಶರಾದ ಡಿ.ಆರ್. ಜಯಪ್ರಕಾಶ್ ಹಾಗೂ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಧೀಶರಾದ ಕೋನಪ್ಪ ರೆಡ್ಡಿ ಅವರು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿರ್ಮಿಸಿರುವ ಕೊರೊನಾ ವಾರ್ಡ್‍ನ್ನು ಖುದ್ದು ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಮಾಸ್ಕ್, ಸ್ಯಾನಿಟೈಸರ್‍ಗಳು ದಾಸ್ತಾನಿರಿಸಬೇಕು. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ವೈದ್ಯರುಗಳು, ದಾದಿಯರು ಹಾಗೂ ಸಹಾಯಕರು ಎಲ್ಲಾ ರೀತಿಯಲ್ಲಿಯೂ ಕರ್ತವ್ಯ ನಿಷ್ಠೆಯನ್ನು ಪಾಲಿಸಬೇಕು ಎಂದು ಜಯಪ್ರಕಾಶ್ ಹೇಳಿದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಮಾತನಾಡಿ ಆಸ್ಪತ್ರೆಯಲ್ಲಿ ಎಲ್ಲಾ ಔಷಧಿಗಳು ದಾಸ್ತಾನಿನಲ್ಲಿದೆ. ಮಾಸ್ಕ್ ಹಾಗೂ ಸ್ಯಾನಿಟೈಸರ್‍ನ ಕೊರತೆ ಇದೆ. ಆಸ್ಪತ್ರೆಯ ಎಲ್ಲಾ ವೈದ್ಯರುಗಳು ಇತರ ಸಿಬ್ಬಂದಿಗಳು ಕೊರೊನಾ ವೈರಸ್ ಹರಡದಂತೆ ಲಾಕ್‍ಡೌನನ್ನು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ ಎಂದರು.

ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಹಿನೆÀ್ನಲೆಯಲ್ಲಿ ಹತ್ತು ದಿನಗಳ ಹಿಂದೆ ಜ್ವರ ತಪಾಸಣೆಯ ಪ್ರತ್ಯೇಕ ಘಟಕವನ್ನು ಆರಂಭಿಸಲಾಗಿದ್ದು ಇಲ್ಲಿಯ ತನಕ ಒಟ್ಟು 293 ರೋಗಿಗಳನ್ನು ತಪಾಸಣೆಗೊಳಪಡಿಸಲಾಗಿದೆ ಎಂದು ವಿಶ್ವನಾಥ್ ಸಿಂಪಿ ತಿಳಿಸಿದರು.