ಮಡಿಕೇರಿ, ಏ. 9: ವೀರಾಜಪೇಟೆಯಿಂದ ಮಾಕುಟ್ಟಕ್ಕಾಗಿ ಕಣ್ಣೂರಿಗೆ ಸೇರುವ ರಸ್ತೆ ನಡುವೆ ಕೂಟುಹೊಳೆಯಲ್ಲಿ ಸೇತುವೆ ನಿರ್ಮಾಣವೊಂದಕ್ಕೆ ಅಡ್ಡಿ- ಆತಂಕ ಎದುರಾಗಿ ಈ ಕಾಮಗಾರಿಯು ಕಳೆÉದ ಹಲವು ವರ್ಷಗಳಿಂದ ಸ್ಥಗಿತಗೊಂಡಿತ್ತು. ಇದೀಗ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಈ ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿ ಹಸಿರು ನಿಶಾನೆ ತೋರಿದೆ.ಕರ್ನಾಟಕ ವನ್ಯ ಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅವರು ಈ ಕುರಿತು ಖಚಿತಪಡಿಸಿದ್ದಾರೆ. ವೀರಾಜಪೇಟೆಯಿಂದ 26 ಕಿ. ಮೀ ದೂರದಲ್ಲಿರುವ ಕೂಟುಹೊಳೆ ಸೇತುವೆಯು ಬ್ರ್ರಿಟಿಷ್ ಕಾಲದ್ದಾಗಿದ್ದು ಇದು ಜೀರ್ಣಾವಸ್ಥೆಯಲ್ಲಿದೆ. ಕೇರಳ ಸರಕಾರವು ಕಣ್ಣ್ಣೂರು- ಕೂಟುಹೊಳೆ ರಸ್ತೆಯನ್ನು ರೂ. 217 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಕಾಮಗಾರಿ ನಡೆಸುವಾಗ ಕೂಟುಹೊಳೆÉ ಸೇತುವೆಯ ಪುನರ್ ನಿರ್ಮಾಣಕ್ಕೆ ರೂ. 16 ಕೋಟಿ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿತು. ಈ ಸೇತುವೆ ಜಾಗವು ಕೊಡಗಿನ ಬ್ರಹ್ಮಗಿರಿ ಅರಣ್ಯ ವನ್ಯಧಾಮ ಪ್ರದೇಶದ ಪರಿವ್ಯಾಪ್ತಿಯಲ್ಲಿ ಬರುವದರಿಂದ ಕೇರಳ ಸರಕಾರವು ಅನುಮತಿ ಪಡೆಯದೆ ನಿರ್ಮಾಣ ಮಾಡುವದು ವನ್ಯಜೀವಿ ಕಾಯ್ದೆಗೆ ವಿರೋಧವಾಗಿದೆ ಎಂದು ಆಗ ಕರ್ನಾಟಕ ಅರಣ್ಯ ವನ್ಯಜೀವಿ ಇಲಾಖೆಯಿಂದ ಆಕ್ಷೇಪಣೆ ವ್ಯಕ್ತಗೊಂಡು ಕೆಲಸ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಸರಕಾರವು ರಾಷ್ಟ್ರೀಯ ವನ್ಯ ಜೀವಿ ಮಂಡಳಿಯ ಮೊರೆ ಹೋಯಿತು. ಇದೀಗ ಮಂಡಳಿಯು ಕರ್ನಾಟಕ ಅರಣ್ಯ ಇಲಾಖೆಯ ತಕರಾರನ್ನು ಇತ್ಯರ್ಥಗೊಳಿಸಿದ್ದು ಸೇತುವೆ ನಿರ್ಮಾಣಕ್ಕೆ ಕೇರಳ ಸರಕಾರಕ್ಕೆ ಅನುಮತಿ ನೀಡಿದೆ. ಈ ರಸ್ತೆ- ಸೇತುವೆಯು ಕೇರಳ, ವೀರಾಜಪೇಟೆ, ಮೈಸೂರು ಸಂಪರ್ಕಕ್ಕೆ ಕೊಂಡಿಯಾಗಿದೆ. ಅಲ್ಲದೆ ಕಣ್ಣೂರು ವಿಮಾನ ನಿಲ್ದಾಣಕ್ಕೂ ಸನಿಹ ಸಂಪರ್ಕ ಕಲ್ಪಿಸುತ್ತದೆ.