ಮಡಿಕೇರಿ, ಏ. 9: ಸದ್ಯಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಕೊರೊನಾ ವಿರುದ್ಧ ಹೋರಾಟಕ್ಕೆ ಆಪದ್ಭಾಂಧವನಾಗಿದೆ. ಭಾರತದಲ್ಲಿ ಕೊರೊನಾ ಪೀಡಿತರಿಗೆ ಈ ಮಾತ್ರೆಯೇ ಪ್ರಮುಖ ಔಷಧಿಯಾಗಿದೆ. ಇದೀಗ ವಿಶ್ವ ಮಟ್ಟದಲ್ಲಿ ಈ ಮಾತ್ರೆಗೆ ಅಧಿಕ ಬೇಡಿಕೆಯಿದೆ. ಈ ಮಾತ್ರೆಯನ್ನು ಅಧಿಕವಾಗಿ ತಯಾರಿಸುತ್ತಿರುವದು ಭಾರತ ಮಾತ್ರ. ಪ್ರಸಕ್ತ ಕೊರೊನಾಗೆ ಯಾವದೇ ವ್ಯಾಕ್ಸಿನ್ ಲಭ್ಯವಿಲ್ಲ. ಎಲ್ಲವೂ ಕೇವಲ ಸಂಶೋದನಾ ಮಟ್ಟದಲ್ಲಿದ್ದು “ಇದಮಿತ್ಥಂ” ಎಂದು ಯಾವದೂ ಪರಿಹಾರ ದೊರಕಿಸುವಲ್ಲಿ ಖಾತರಿಗೊಂಡಿಲ್ಲ. ಹೀಗಾಗಿ ಮಲೇರಿಯಾ ಚಿಕಿತ್ಸೆಗೆ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಅನಿವಾರ್ಯವೆನಿಸಿದೆ. ಈ ಮಾತ್ರೆಯಲ್ಲಿ ಹೃದ್ರೋಗಿಗಳಿಗೆ ಆಪತ್ತಿದೆ ಎನ್ನುವ ಮುನ್ನೆಚ್ಚರಿಕೆಯೂ ಇದೆÀ. ಹಾಗಾಗಿ ಬಲು ಎಚ್ಚರಿಕೆಯಿಂದ ಇದನ್ನು ಬಳಸಲಾಗುತ್ತಿದೆ.ಭಾರತ ತನ್ನ ದೇಶದ ಸೋಂಕಿತರ ಹಿತದೃಷ್ಟಿಯಿಂದ ಈ ಮಾತ್ರೆಯ ರಫ್ತನ್ನು ನಿಷೇಧಿಸಿತ್ತು. ಇದರಿಂದ ಅಸಮಾಧಾನಗೊಂಡ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾನು ಪ್ರತೀಕಾರ ತೀರಿಸುವದಾಗಿ ಮುನ್ನೆಚ್ಚರಿಕೆಯಿತ್ತರು. ತನ್ನ ದೇಶದಲ್ಲಿ ಸೋಂಕು ತಡೆಯಲು ಸಕಾಲಿಕ ಕ್ರಮ ಕೈಗೊಳ್ಳಲು ಅಸಾಧ್ಯವೆನಿಸಿದಾಗ ಅಮೇರಿಕಾ ಅಧ್ಯಕ್ಷರು ಸಮತೋಲನ ಕಳೆದುಕೊಂಡವರಂತೆ ಈ ಹೇಳಿಕೆಯಿತ್ತರು. ಅವರ ಈ ಹೇಳಿಕೆಗೆ ಮುನ್ನವೇ ಭಾರತ ರಫ್ತು ನಿರ್ಬಂಧ ಸಡಿಲಿಸಿದ್ದು ಯಾವಾಗ ತನ್ನ ದೇಶಕ್ಕೆ ಈ ಮಾತ್ರೆಯನ್ನು ಭಾರತ ಕಳುಹಿಸಿದೆ ಎಂದು ಗೊತ್ತಾಯಿತೋ ಡೊನಾಲ್ಡ್ ಟ್ರಂಪ್ ತನ್ನ ನಿಲುವನ್ನು ಬದಲಿಸಿ ಭಾರÀತದ ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಲು ಪಾರ್ರಂಭಿಸಿದರು.

ಟ್ರಂಪ್ ಕೇಳಿದ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಮಲೇರಿಯಾ ರೋಗದ ವಿರುದ್ಧವಾಗಿ ಹೋರಾಡಲು ರೋಗಿಗೆ ಕೊಡಲಾಗುತ್ತದೆ. ಭಾರತದಲ್ಲಿ ಮಲೇರಿಯಾ ವಿರುದ್ಧದ ಹೋರಾಟದ ಭಾಗವಾಗಿ ಈ ಮಾತ್ರೆಗಳನ್ನು ತಯಾರು ಮಾಡಲಾಗುತ್ತದೆ. ಭಾರತದಲ್ಲಿ ಮಲೇರಿಯಾ ರೋಗದ ವಿರುದ್ಧ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಭಾರೀ ಪರಿಣಾಮಕಾರಿ ಎಂದು ಸಾಬೀತಾಗಿದ್ದು, ಲುಪಸ್ ಎರಿಥೆಮಾಟೋಸಸ್ ಹಾಗೂ ಸಂಧಿವಾತಕ್ಕೂ ಈ ಮಾತ್ರೆ

(ಮೊದಲ ಪುಟದಿಂದ) ಔಷಧಿಯಾಗಿ ಕೆಲಸ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಈ ಮಾತ್ರೆಯನ್ನು ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತದೆ.

ಇತರ ದೇಶಗಳ ಕೈಹಿಡಿದ ಭಾರತ

ಮಲೇರಿಯಾ ಔಷಧ ಸೇರಿದಂತೆ 14 ಔಷಧಗಳ ಮೇಲೆ ಭಾರತ, ರಫ್ತು ನಿರ್ಬಂಧವನ್ನು ತೆರವುಗೊಳಿಸಿದೆ. ಕೋವಿಡ್‍ನಿಂದ ಸಂಕಷ್ಟದಲ್ಲಿರುವ ದೇಶಗಳ ಕೈಹಿಡಿಯಲು, ಆದ್ಯತೆಯ ಮೇರೆಗೆ ಮಲೇರಿಯಾ ಔಷಧ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪೂರೈಸಲು ನಿರ್ಧರಿಸಿದೆ.

30 ರಾಷ್ಟ್ರಗಳಿಗೆ ರಫ್ತು : ಆದರೆ, ಭಾರತ ಕೇವಲ ಅಮೇರಿಕಾವನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳದೆ, ಇಡೀ ವಿಶ್ವ ಸಮುದಾಯಕ್ಕೆ ನೆರವು ನೀಡಲು ಮುಂದಾಗಿದೆ. ಆರಂಭದಲ್ಲಿ ಭಾರತವು ಕೋವಿಡ್‍ನಿಂದ ತತ್ತರಿಸಿರುವ ಅಮೇರಿಕಾ ಸೇರಿದಂತೆ 30 ರಾಷ್ಟ್ರಗಳಿಗೆ ಮಲೇರಿಯಾ ಔಷಧವನ್ನು ರಫ್ತು ಮಾಡಲು ಮುಂದಾಗಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಸೇರಿದಂತೆ ಒಟ್ಟು 24 ಮಾತ್ರೆಗಳನ್ನು ಭಾರತ ರಫ್ತು ಮಾಡಲು ನಿರ್ಬಂಧ ಸಡಿಲಿಸಿದೆ. ರಫ್ತಾಗುತ್ತಿರುವ ಇತರ ಔಷಧಗಳ ಪೈಕಿ ಪ್ಯಾರಾಸಿಟಮಾಲ್, ನಿಯೋಮೈಸಿನ್, ಎರಿಥ್ರೋಮೈಸಿನ್, ಟಿನಿಡಾಝೋಲ್, ಮೆಟ್ರೋನಿಡಝೋಲ್, ಅಸಿಕ್ಲೋವಿರ್, ವಿಟಮಿನ್‍ಬಿಎಸ್, ಪ್ರೊಜೆಸ್ಟ್ರೋನ್ ಮುಂತಾದವು ಪ್ರಮುಖವಾಗಿವೆ.

10 ಕೋಟಿ ಮಾತ್ರೆಗಳ ಉತ್ಪಾದನೆ

ಹೈಡ್ರಾಕ್ಸಿಕ್ಲೋರೋಕ್ವಿನ್ ಬೃಹತ್ ಉತ್ಪಾದನಾ ಕಂಪೆನಿಗಳಾದ ಇಫ್ಕಾ ಲ್ಯಾಬೋರೇಟರೀಸ್ ಮತ್ತು ಝ್ಯಾಡಸ್ ಕ್ಯಾಡಿಲಾ ಕಂಪನಿಗಳು 10 ಕೋಟಿ ಮಾತ್ರೆಗಳ ಉತ್ಪಾದನೆಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರ್ಡರ್‍ಪಡೆದುಕೊಂಡಿವೆ. ಈ ಔಷಧವನ್ನು ಉತ್ಪಾದಿಸುವಲ್ಲಿ ಇಡೀ ಜಗತ್ತಿನಲ್ಲೇ ಭಾರತ ಮುಂಚೂಣಿಯಲ್ಲಿದ್ದು, ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ನೇರವಾಗಿ ಕೊರೊನಾ ನಾಶಕ್ಕೆ ರಾಮಬಾಣವಲ್ಲದಿದ್ದರೂ ಪರೋಕ್ಷವಾಗಿ ಸದ್ಯದ ಮಟ್ಟಿಗೆ ಏಕೈಕ ಔಷಧಿಯಾಗಿ ಉಳಿದಿದೆ.

-ಜಿ. ರಾಜೇಂದ್ರ