ಹೆಬ್ಬಾಲೆ, ಏ.9 : ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆ ಸಾಕಾನೆ ಶಿಬಿರದ ಆದಿವಾಸಿ ಕುಟುಂಬಗಳಿಗೆ ಅರಣ್ಯ ಇಲಾಖೆ ವತಿಯಿಂದ ದಿನಸಿ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಯಿತು.
ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತೊಂದರೆಗೆ ಸಿಲುಕಿರುವ ಸಾಕಾನೆಗಳ ಕಾವಾಡಿಗರು,ಮಾವುತರ ಕುಟುಂಬಗಳಿಗೆ ಆಹಾರಕ್ಕೆ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ ಮಡಿಕೇರಿ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಅವರು 60 ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಸಾಕಾನೆಗಳ ಮಾವುತರು,ಕಾವಾಡಿಗರು ತಮ್ಮ ಆರೋಗ್ಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಯಾರೂ ಮನೆಯಿಂದ ಹೊರಗೆ ಹೋಗದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಅಕ್ಕಿ, ಬೇಳೆ, ಈರುಳ್ಳಿ, ಆಲೂಗೆಡ್ಡೆ, ಅಡುಗೆ ಎಣ್ಣೆ, ಉಪ್ಪು ಸೇರಿದಂತೆ ಇನ್ನಿತರ ಸಾಮಗ್ರಿಗಳ ಆಹಾರ ಕಿಟ್‍ಗಳನ್ನು ಜನರು ಪಡೆದುಕೊಂಡರು.
ಈ ಸಂದರ್ಭ ಸೋಮವಾರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ವೀರಾಜಪೇಟೆ ತಾಲೂಕಿನ ಸಹಾಯಕ ಅರಣ್ಯ ಸಂಕ್ಷಣಾಧಿಕಾರಿ ದಯಾನಂದ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್, ದುಬಾರೆ ಉಪ ವಲಯ ಅರಣ್ಯಾಧಿಕಾರಿ ರಂಜನ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.