ಮಡಿಕೇರಿ, ಏ. 9: ಬಿಳಿ ಕಾಂಡ ಕೊರಕದ ಹಾರಾಟವು ಏಪ್ರಿಲ್‍ನಿಂದ ಶುರುವಾಗಲಿದ್ದು, ಪ್ರೌಢ ಕೀಟವು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ಹೊಸ ಜೀವನ ಚಕ್ರವು ಪ್ರಾರಂಭಗೊಳ್ಳಲು ಅನುಕೂಲವಾದ ಸಮಯವಾಗಿರುತ್ತದೆ. ಆದುದರಿಂದ ಬೆಳೆಗಾರರು ಈ ಕೆಳಗೆ ಸೂಚಿಸಿರುವ ಹತೋಟಿ ಕ್ರಮಗಳನ್ನು ತಕ್ಷಣವೇ ಅನುಸರಿಸಬೇಕೆಂಬ ಸಲಹೆಯನ್ನು ನೀಡಲಾಗಿದೆ.
ಹೂ ಮಳೆ ಬಂದ ಪ್ರದೇಶಗಳಲ್ಲಿ ಬೆಳೆಗಾರರು ಪೂರ್ತಿ ತೋಟದಲ್ಲಿ ಕೀಟ ಬಾದಿತ ಗಿಡಗಳನ್ನು ಹುಡುಕಿ, ಕಿತ್ತು ನಾಶ ಮಾಡಬೇಕು. ಆ ನಂತರ ಕ್ಲೋರೋಫೈರಿಫಾಸ್ 50 ಇ.ಸಿ ಮತ್ತು ಸೈಪರ್ ಮತ್ರಿನ್ 5 ಇ.ಸಿ ಹೊಂದಿರುವ ಕೀಟನಾಶಕವನ್ನು 200 ಲೀಟರ್ ನೀರಿಗೆ 240 ಮಿ.ಲೀ. ಪ್ರಮಾಣದಲ್ಲಿ 200 ಮಿ.ಲೀ. ಅಂಟು ದ್ರಾವಣದ ಜೊತೆಗೆ ಬೆರೆಸಿ ಮುಖ್ಯ ಕಾಂಡ ಮತ್ತು ದಪ್ಪ ರೆಂಬೆಗಳ ಮೇಲೆ ಸಿಂಪಡಿಸಬೇಕು. ಈ ಸಿಂಪಡಣೆಯು, ಬಿಳಿ ಕಾಂಡಕೊರಕದ ಹೊಸ ಜೀವನ ಚಕ್ರವು ಶುರುವಾಗುವುದನ್ನು ತಡೆಗಟ್ಟುವಲ್ಲಿ ಉಪಯುಕ್ತವಾಗುತ್ತದೆ.
ಹೂ ಮಳೆ ಬಂದಿರದ ಪ್ರದೇಶಗಳಲ್ಲಿ ಕೀಟ ಬಾದಿತ ಗಿಡಗಳನ್ನು ಬಾಡಿದ ಗಿಡಗಳೊಂದಿಗೆ ಹುಡುಕುವುದು ಕಷ್ಟಕರವಾಗಿರುತ್ತದೆ. ಆದುದರಿಂದ ಬೆಳೆಗಾರರು, ಕ್ಲೋರೋಫೈರಿಫಾಸ್ 50 ಇ.ಸಿ ಮತ್ತು ಸೈಪರ್ ಮೆತ್ರಿನ್ 5 ಇ.ಸಿ ಹೊಂದಿರುವ ಕೀಟನಾಶಕವನ್ನು 200 ಲೀಟರ್ ನೀರಿಗೆ 240 ಮಿ.ಲೀ ಪ್ರಮಾಣದಲ್ಲಿ 200 ಮಿ.ಲೀ ಅಂಟುದ್ರಾವಣದ ಜೊತೆಗೆ ಬೆರೆಸಿ ಮುಖ್ಯ ಕಾಂಡ ಮತ್ತು ದಪ್ಪ ರೆಂಬೆಗಳ ಮೇಲೆ ಸಿಂಪಡಿಸಬೇಕು. ಹೂ ಮಳೆ ಬಂದ ನಂತರ ಪೂರ್ತಿ ತೋಟದಲ್ಲಿ ಕೀಟ ಬಾಧಿತ ಗಿಡಗಳನ್ನು ಹುಡುಕಿ, ಕಿತ್ತು ನಾಶ ಮಾಡಬೇಕು.
ಇದಲ್ಲದೆ ಕಡಿಮೆ ಕೀಟ ಬಾಧಿತ ಅಥವಾ ಚೇತರಿಸಿಕೊಳ್ಳಬಹುದಾದ ಗಿಡಗಳ ಮುಖ್ಯ ಕಾಂಡ ಮತ್ತು ದಪ್ಪ ರೆಂಬೆಗಳನ್ನು ನಾನ್ವೋವೇನ್ ಫ್ಯಾಬ್ರಿಕ್ ಪಟ್ಟಿಯಿಂದ ಅಂತರ ಬಿಡದಂತೆ ಸುತ್ತಬೇಕು. ಅಂತಹ ಪಟ್ಟಿಯಿಂದ ಸುತ್ತಿದ ಕೀಟಬಾಧಿತ ಗಿಡಗಳಿಗೆ ಕ್ಲೋರೋಫೈರಿಫಾಸ್ 50 ಇ.ಸಿ ಮತ್ತು ಸೈಪರ್ ಮೆತ್ರಿನ್ 5 ಇ.ಸಿ ಹೊಂದಿರುವ ಕೀಟನಾಶಕವನ್ನು 200 ಲೀಟರ್ ನೀರಿಗೆ 240 ಮಿ.ಲೀ ಪ್ರಮಾಣದಲ್ಲಿ 200 ಮಿ.ಲೀ ಅಂಟುದ್ರಾವಣದ ಜೊತೆಗೆ ಬೆರೆಸಿ ಮುಖ್ಯ ಕಾಂಡ ಮತ್ತು ದಪ್ಪ ರೆಂಬೆಗಳ ಮೇಲೆ ಸಿಂಪಡಿಸಬೇಕು. ಈ ಕ್ರಮದಿಂದ ಪ್ರೌಢ ಕೀಟಗಳು ಹೊರಬರುವುದನ್ನು ತಡೆಗಟ್ಟಬಹುದು ಮತ್ತು ಕೀಟ ಬಾಧಿತ ಗಿಡಗಳನ್ನು ಉಳಿಸಿಕೊಳ್ಳಬಹುದು.
ಈ ಕ್ರಮಗಳನ್ನು ಏಪ್ರಿಲ್ ಎರಡನೇ ವಾರದೊಳಗಾಗಿ ಮುಗಿಸಬೇಕು ಎಂದು ಚೆಟ್ಟಳ್ಳಿ ಕಾಫಿ ಸಂಶೋಧನ ಉಪ ಕೇಂದ್ರದ ಕೀಟಶಾಸ್ತ್ರ ವಿಭಾಗದ ವತಿಯಿಂದ ತಿಳಿಸಲಾಗಿದೆ.