ಶನಿವಾರಸಂತೆ, ಏ. 9: ಕೊಡಗಿನಿಂದ ಹಾಸನ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗಡಿಭಾಗದ ಹೇಮಾವತಿ ನದಿ ಸೇತುವೆ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರದ ದಿಮ್ಮಿಯನ್ನಿಟ್ಟು ಹಾಸನ ಜಿಲ್ಲೆಯ ಗ್ರಾಮಸ್ಥರು ಸಂಪರ್ಕ ಬಂದ್ಗೊಳಿಸಿದ್ದಾರೆ. ದಿನನಿತ್ಯದ ಅವಶ್ಯಕತೆಗಾಗಿ ಓಡಾಡಲು ಅಡ್ಡಿಯಾಗುತ್ತಿದ್ದು, ರಸ್ತೆ ಬಂದ್ ತೆರವುಗೊಳಿಸುವಂತೆ ಕೊಡಗು ಜಿಲ್ಲೆಯ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕೊಡ್ಲಿಪೇಟೆಯಿಂದ ಕೆಲಕೊಡ್ಲಿ ಗ್ರಾಮದ ಮೂಲಕ ಹಾಸನ ಜಿಲ್ಲೆಯ ಕಾಗನೂರುಗೆ ಸಂಪರ್ಕ ಕಲ್ಪಿಸಲು 2 ವರ್ಷಗಳ ಹಿಂದೆ ಹೇಮಾವತಿ ನದಿಗೆ ಅಡ್ಡಲಾಗಿ ನೂತನವಾಗಿ ಸೇತುವೆ ನಿರ್ಮಿಸಲಾಗಿದ್ದು, ಕಳೆದ 15 ದಿನಗಳ ಹಿಂದೆ ಹಾಸನ ಜಿಲ್ಲೆಯ ಗ್ರಾಮಸ್ಥರು ಸೇತುವೆ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರದ ದಿಮ್ಮಿಗಳನ್ನಿಟ್ಟು ರಸ್ತೆ ಸಂಪರ್ಕ ಬಂದ್ಗೊಳಿಸಿದ್ದಾರೆ. ಅದೇ ರೀತಿಯಲ್ಲಿ ಕೊಡ್ಲಿಪೇಟೆಯಿಂದ ಜನಾರ್ಧನಹಳ್ಳಿ, ನೀರುಗುಂದ ಮೂಲಕ ಹಾಸನದ ಬರ್ಕೂರಿಗೆ ಸಂಪರ್ಕ ಕಲ್ಪಿಸಲು ನೂತನವಾಗಿ ಹೇಮಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದ್ದು, ಇಲ್ಲಿಯೂ ಸಹ ಗ್ರಾಮಸ್ಥರು ಸೇತುವೆ ರಸ್ತೆಗೆ ಅಡ್ಡಲಾಗಿ ಮರದ ದಿಮ್ಮಿ ಮತ್ತು ಬೃಹತ್ ಗಾತ್ರದ ಕಲ್ಲಿನ ಚಪ್ಪಡಿಯನ್ನಿಟ್ಟು ರಸ್ತೆ ಸಂಪರ್ಕ ಬಂದ್ಗೊಳಿಸಿದ್ದಾರೆ.
ಕೊಡ್ಲಿಪೇಟೆಯಿಂದ ಕ್ಯಾತೆ ಮೂಲಕ ಹಾಸನದ ಯಸಳೂರು, ಚಿಂಗಡಹಳ್ಳಿ ರಸ್ತೆ, ಸುಬ್ರಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಕ್ಯಾತೆ ಗ್ರಾಮದ ಬಳಿ ಮಣ್ಣು ಸುರಿದು ರಸ್ತೆ ಸಂಪರ್ಕ ಬಂದ್ಗೊಳಿಸಿದ್ದಾರೆ. ಹಾಸನ ಜಿಲ್ಲೆಯ ಗ್ರಾಮಸ್ಥರು ಮೂರು ಕಡೆಗಳಲ್ಲಿ ರಸ್ತೆ ಬಂದ್ಗೊಳಿಸಿರುವುದರಿಂದ ಕೊಡಗು ಜಿಲ್ಲೆಯ ಕೊಡ್ಲಿಪೇಟೆ ಗ್ರಾಮದ ಜನರಿಗೆ ದಿನನಿತ್ಯದ ಅವಶ್ಯಕತೆ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಕೊಡ್ಲಿಪೇಟೆ ಗ್ರಾಮಸ್ಥರು ಆರೋಪಿಸಿದ್ದಾರೆ. ಕೊಡ್ಲಿಪೇಟೆ ಭಾಗದ ಹಲವಾರು ಜನರ ಕಾಫಿತೋಟ, ಗದ್ದೆಗಳು ಹಾಸನ ಭಾಗದ ಕಡೆಗಳಲ್ಲಿರುತ್ತದೆ. ರೈತರು ಮತ್ತು ಜನರು ದಿನನಿತ್ಯದ ಓಡಾಟಕ್ಕೆ ಇದೆ ರಸ್ತೆಗಳನ್ನು ಅವಲಂಭಿಸಿರುತ್ತಾರೆ. ಹಾಸನ ಜಿಲ್ಲೆಯಿಂದ ಕೊಡ್ಲಿಪೇಟೆಗೆ ಇದೆ ರಸ್ತೆಗಳ ಮೂಲಕ ತರಕಾರಿ ಇನ್ನಿತರ ವಸ್ತಗಳನ್ನು ಸಾಗಾಟ ಮಾಡುತ್ತಾರೆ. ಕೊಡ್ಲಿಪೇಟೆ ಭಾಗದ ಜನರು ಗರ್ಭಿಣಿಯರನ್ನು, ರೋಗಿಗಳನ್ನು ಇತರ ತುರ್ತು ಸೇವೆಗಾಗಿ ಹಾಸನ ಜಿಲ್ಲೆಯ ಆಸ್ಪತ್ರೆಯನ್ನು ಅವಲಂಭಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆ ಹಾಸನ ಗ್ರಾಮಸ್ಥರು ಮೂರು ಕಡೆಗಳಲ್ಲಿ ರಸ್ತೆಯನ್ನು ಬಂದ್ಗೊಳಿಸಿದ್ದರಿಂದ ತುರ್ತಾಗಿ ರೋಗಿಗಳನ್ನು ಹಾಸನದ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಈ ಭಾಗದ ಜನರು 25ರಿಂದ 30 ಕಿ.ಮೀ. ದೂರವನ್ನು ಬಳಸಿಕೊಂಡು ಹಾಸನಕ್ಕೆ ಹೋಗಬೇಕಾಗುತ್ತದೆ ಎಂದು ಹೇಳುತ್ತಾರೆ. ಹಾಸನ ಕಡೆಯಿಂದ ವಾಹನದಲ್ಲಿ ಬರುವ ತರಕಾರಿ ಮತ್ತು ಅಗತ್ಯ ವಸ್ತುಗಳು ತೆಗೆದುಕೊಂಡು ಹೋಗಲು ಕೊಡ್ಲಿಪೇಟೆಯಿಂದ ವಾಹನಗಳಲ್ಲಿ ಬಂದು ರಸ್ತೆ ಬಂದ್ ಆಗಿರುವ ಸ್ಥಳಕ್ಕೆ ಬರಬೇಕಾಗುತ್ತದೆ ಎಂದು ಕೊಡ್ಲಿಪೇಟೆ ಭಾಗದ ಜನರು ಹೇಳುತ್ತಾರೆ.