ಮಡಿಕೇರಿ, ಏ. 8: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮಡಿಕೇರಿ (ಪಿ.ಎಲ್.ಡಿ.) ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19ಗೆ ರೂ. 2 ಲಕ್ಷ ದೇಣಿಗೆಯನ್ನು ನೀಡಲಾಯಿತು.

ಬ್ಯಾಂಕ್‍ನ ಅಧ್ಯಕ್ಷ ಮನು ಮುತ್ತಪ್ಪ, ಉಪಾಧ್ಯಕ್ಷ ರಮೇಶ್ ಮುದ್ದಯ್ಯ, ನಿರ್ದೇಶಕ ಮನು ಮಹೇಶ್, ರ್ಯಾಲಿ ಮಾದಯ್ಯ ಹಾಗೂ ಬ್ಯಾಂಕ್‍ನ ವ್ಯವಸ್ಥಾಪಕ ಟಿ.ಎ. ಚಂದ್ರಶೇಖರ್ ಅವರ ಉಪಸ್ಥಿತಿಯಲ್ಲಿ ಸಹಕಾರ ಸಂಘದ ಉಪನಿಬಂಧಕ ಸಲೀಂ ಅವರಿಗೆ ರೂ. 2 ಲಕ್ಷವನ್ನು ಹಸ್ತಾಂತರಿಸಲಾಯಿತು.

ನಿವೃತ್ತ ಪೊಲೀಸ್‍ನಿಂದ ದೇಣಿಗೆ

ಮಡಿಕೇರಿಯ ನಿವೃತ್ತ ಪೊಲೀಸ್ ಸಿಬ್ಬಂದಿ ಎಂ.ಕೆ. ಕಾವೇರಪ್ಪ ಅವರು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ರೂ. 25,000 ದೇಣಿಗೆ ನೀಡಿದರು. ರೂ. 25,000 ಚೆಕ್ ಅನ್ನು ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಹಾಗೂ ಇತರರು ಹಾಜರಿದ್ದರು. ಪೊಲೀಸ್ ಇಲಾಖೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದ ಕಾವೇರಪ್ಪ ಈ ಬಗ್ಗೆ ಪ್ರತಿಕ್ರಿಯಿಸಿ, ತಾವು ಜರ್ಮನ್ ಶೆಪರ್ಡ್ ನಾಯಿಗಳನ್ನು ಸಾಕಿದ್ದು, ಅದರ ಮರಿಗಳನ್ನು ಮಾರಿ ದೊರೆತ ಹಣವನ್ನು ಜನರ ಸೇವೆಗಾಗಿ ನೀಡಿರುವುದಾಗಿ ತಿಳಿಸಿದರು. ತಮ್ಮ ಪತ್ನಿಯೊಡನೆ ಈ ಬಗ್ಗೆ ಚರ್ಚಿಸಿ ‘ಶಕ್ತಿ’ಯ ಮೂಲಕ ಈ ದೇಣಿಗೆಯನ್ನು ಜಿಲ್ಲಾಧಿಕಾರಿಗೆ ತಲುಪಿಸಲು ತೀರ್ಮಾನಿಸಿದ್ದು, ಸಮಾಜಕ್ಕೆ ತನ್ನದೊಂದು ಪುಟ್ಟ ಕಾಣಿಕೆಯಿದು ಎಂದರು.

ಮಾಜಿ ಸೈನಿಕರ ಸಂಘದಿಂದ ನೆರವು

ಪ್ರಸ್ತುತದ ಕೊರೊನಾ ಪರಿಸ್ಥಿತಿಯ ಹಿನ್ನೆಲೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಟಿ. ಶೆಟ್ಟಿಗೇರಿಯ ಮಾಜಿ ಸೈನಿಕರ ಸಂಘ ಸ್ಪಂದಿಸಿ ಆರ್ಥಿಕ ಸಹಾಯ ನೀಡಿದೆ.

ಇಂದು ಸಂಘದ ಪದಾಧಿಕಾರಿ ಗಳು ರೂ. 20 ಸಾವಿರದ ಚೆಕ್‍ಅನ್ನು ಜಿಲ್ಲಾಡಳಿತದ ಮೂಲಕ ಹಸ್ತಾಂತರಿಸಿ ದರು. ಉಪವಿಭಾಗಾಧಿಕಾರಿ ಜವರೇಗೌಡ ಅವರಿಗೆ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್, ಕಾರ್ಯದರ್ಶಿ ಉಳುವಂಗಡ ಗಣಪತಿ, ಖಜಾಂಚಿ ಚಂಗುಲಂಡ ಸತೀಶ್, ಸಹಕಾರ್ಯ ದರ್ಶಿ ಅಪ್ಪಚಂಗಡ ಮೋಟಯ್ಯ ಅವರು ಚೆಕ್ ನೀಡಿದರು. ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಷಣ್ಮುಗ ಹಾಜರಿದ್ದರು.

ಮುಂದೂಡಿಕೆ: ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ತಾ. 11 ರಂದು ನಿಗದಿಯಾ ಗಿತ್ತು. ಇದೀಗ ಇದನ್ನು ಮುಂದೂಡಿ ರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.