ಸೋಮವಾರಪೇಟೆ, ಮಾ. 8: ಆಟೋ ಚಾಲನೆಯೊಂದಿಗೆ ಸಾರ್ವಜನಿಕ ಸೇವೆಯಲ್ಲೂ ತೊಡಗಿಸಿಕೊಂಡು ಪೊಲೀಸ್ ಇಲಾಖೆಯಿಂದ ‘ಪೊಲೀಸ್ ಮಿತ್ರ’ ಎಂಬ ಸನ್ಮಾನಕ್ಕೆ ಭಾಜನರಾಗಿದ್ದ ಸಮೀಪದ ಕಾನ್ವೆಂಟ್ ಬಾಣೆ ನಿವಾಸಿ ಹಸನಬ್ಬ (62) ಅವರು ತಾ. 8ರಂದು ನಿಧನರಾದರು.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ನಗರದ ಯಾವದೇ ಬಾವಿ, ಹೊಳೆ ಕೆರೆ ಸೇರಿದಂತೆ ಜಲಪಾತಗಳಲ್ಲಿ ಮೃತ ದೇಹ ಇದ್ದರೆ ಸ್ಥಳಕ್ಕೆ ಹಾಜರಾಗಿ ಶವವನ್ನು ಮೇಲೆತ್ತುತ್ತಿದ್ದ ಆಟೋ ಚಾಲಕ ಹಸನಬ್ಬ ಅವರು ಕಳೆದ ಕೆಲ ಸಮಯದಿಂದ ಅನಾರೋಗ್ಯ ಕ್ಕೀಡಾಗಿದ್ದು ಇಂದು ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದರು.

ನಗರದ ಮಹದೇಶ್ವರ ಬ್ಲಾಕಿನ ಅಬ್ದುಲ್ ಖಾದರ್ ಹಾಗೂ ಅಮ್ಮವ್ವ ದಂಪತಿಗಳ ಪುತ್ರರಾಗಿದ್ದ ಹಸನಬ್ಬ ಅವರು ನಗರದಲ್ಲಿ ಅನಾಥ ಶವ ಕಂಡುಬಂದರೆ, ಅವುಗಳನ್ನು ತನ್ನ ಆಟೋದಲ್ಲಿ ಶವಾಗಾರಕ್ಕೆ ಸಾಗಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದರು. ಬಾವಿಯಲ್ಲಿ ಕಂಡು ಬರುವ ಕೊಳೆತ ಶವಗಳನ್ನು ಯಾವದೇ ಮುಜುಗರವಿಲ್ಲದೇ ಮೇಲೆತ್ತಿದ್ದರು. ಇಲ್ಲಿಯವರೆಗೆ ಒಟ್ಟು 50 ಕ್ಕೂ ಅಧಿಕ ಶವಗಳನ್ನು ಯಾವದೇ ಫಲಾಪೇಕ್ಷೆ ಯನ್ನು ನಿರೀಕ್ಷಿಸದೆ ಶವಾಗಾರಕ್ಕೆ ಸಾಗಿಸಿ ಸಾರ್ವಜನಿಕ ವಲಯದಲ್ಲೂ ಉತ್ತಮ ಹೆಸರು ಸಂಪಾದಿಸಿದ್ದರು.

ಅನೇಕ ಸಂಘ-ಸಂಸ್ಥೆಗಳಲ್ಲೂ ಕೆಲಸ ನಿರ್ವಹಿಸಿದ್ದ ಹಸನಬ್ಬ ಅವರು, 1985 ರಲ್ಲಿ ಸೋಮವಾರಪೇಟೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಕಾರ್ಯದರ್ಶಿ ಯಾಗಿ 15 ವರ್ಷ, ನಂತರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಎಲ್ಲಾ ಜನಾಂಗದವರೊಂದಿಗೆ ಬೆರೆತು, ಎಲ್ಲಾ ಸಮುದಾಯವನ್ನೂ ಗೌರವದಿಂದ ಕಾಣುತ್ತಿದ್ದ ಹಸನಬ್ಬ ಅವರು ಇಲ್ಲಿನ ಸಾರ್ವಜನಿಕ ಗಣಪತಿ ಸೇವಾ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಅದ್ಧೂರಿ ಗೌರಿ-ಗಣೇಶೋತ್ಸವವನ್ನು ಆಚರಿಸಲು ಕಾರಣಕರ್ತರಾಗಿದ್ದರು. ಇದರೊಂದಿಗೆ ನಗರದ ಜಲಾಲಿಯ ಮಸೀದಿಯ ಕಾರ್ಯದರ್ಶಿಯಾಗಿ, ಸಾರ್ವಜನಿಕ ಆಸ್ಪತ್ರೆ ಸಂದರ್ಶಕ ಸಮಿತಿ ಸದಸ್ಯರಾಗಿ ಸೇವೆಸಲ್ಲಿಸಿದ್ದರು.

ಇವರ ಸಮಾಜಸೇವೆಯನ್ನು ಗುರುತಿಸಿದ ಇಲ್ಲಿನ ರೋಟರಿ ಸಂಸ್ಥೆ, ವಾಹನ ಚಾಲಕರ ಸಂಘ, ಕನ್ನಡ ಸಾಹಿತ್ಯ ಪರಿಷತ್, ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ವತಿಯಿಂದ ಇವರನ್ನು ಸನ್ಮಾನಿಸಲಾಗಿತ್ತು.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದು, ಮೃತರ ಅಂತ್ಯಕ್ರಿಯೆ ತಾ. 9ರಂದು (ಇಂದು) ಆಲೆಕಟ್ಟೆ ರಸ್ತೆಯ ಖಬರಸ್ತಾನದಲ್ಲಿ ನಡೆಯಲಿದೆ.