ಅಂಚೆ ಕಾರ್ಡಿನಲ್ಲಿ ಕೃತಜ್ಞತೆ ಸಲ್ಲಿಸಿ ವಿಶ್ವದ ಪ್ರಬಲ ರಾಷ್ಟ್ರಗಳೇ ಕೊರೊನಾಕ್ಕೆ ನಲುಗಿ ಹೋಗಿರುವಾಗ, 130 ಕೋಟಿ ಜನಸಂಖ್ಯೆಯ ಭಾರತದಲ್ಲಿ ಸರ್ಕಾರಗಳು ಅದರ ಪ್ರಮಾಣವನ್ನು ತಗ್ಗಿಸಲು ಶತಾಯಗತಾಯ ಪ್ರಯತ್ನಿಸುತ್ತಿವೆ.ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲಿ ಕಾರ್ಯಾಂಗದ ಪ್ರಾಮುಖ್ಯತೆ, ಅದರ ಅಗತ್ಯತೆ ಮತ್ತು ಶಿಸ್ತುಬದ್ಧ ಕೆಲಸಗಳು ಕೊರೊನಾ ಸಂದರ್ಭದಲ್ಲಿ ಬಹುಶಃ ಭಾರತೀಯರಿಗೆ ಅರಿವಾಗಿದೆ.ಅದೆಲ್ಲೋ ದುಬೈನಿಂದ ಬಂದವ ಯಾವ ಬಸ್ - ಆಟೋಗಳಲ್ಲಿ ಸಂಚರಿಸಿದ...? ಯಾರನ್ನೆಲ್ಲಾ ಸಂಪರ್ಕಿಸಿದ...? ಎಂಬ ಖಚಿತ ಮಾಹಿತಿ ಕಲೆ ಹಾಕುವುದನ್ನು ಕಲ್ಪಿಸಲು ಅಸಾಧ್ಯ. ಅದಕ್ಕಿಂತ ಮಿಗಿಲಾಗಿ ಆ ವ್ಯಕ್ತಿ ಸಂಪರ್ಕಿಸಿರಬಹುದಾದ ಜನರ ಮಾಹಿತಿ ಕಲೆ ಹಾಕಿ ಅವರನ್ನು ಭೇಟಿ ಮಾಡಿ ಮನೆಯಲ್ಲಿರುವಂತೆ ಅವರ ಮನವೊಲಿಸುವುದು, ಆರೋಗ್ಯ ತಪಾಸಣೆಗಾಗಿ ತಿಳುವಳಿಕೆ ನೀಡುವುದು, ಅಂತಹವರ ನಿರಂತರ ಸಂಪರ್ಕದಲ್ಲಿ ಆರೋಗ್ಯ ವಿಚಾರಣೆ... ಹೀಗೆ ಒಂದಲ್ಲ ಎರಡಲ್ಲ ಹಲವು ಸವಾಲುಗಳು.

ಕೊಡಗು ಜಿಲ್ಲೆ ಸಧ್ಯಕ್ಕೆ ಶೂನ್ಯ ಕೊರೊನಾ ಪಾಸಿಟಿವ್ ಪ್ರಕರಣ ಹೊಂದಿ ಜನರು ಗಾಬರಿಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಿಂದ ಆರಂಭಗೊಂಡು ವಿವಿಧ ಇಲಾಖೆಗಳ ಪರಿಶ್ರಮ ಬರಹಕ್ಕೆ ನಿಲುಕದ್ದು. ಜಿಲ್ಲಾಡಳಿತಕ್ಕೆ ಅದೆಷ್ಟು ಜವಾಬ್ದಾರಿಗಳು...!

ಕೊರೊನಾ ಹೋರಾಟವೇ? ಜನರ ಆರೋಗ್ಯ ರಕ್ಷಣೆಯೇ? ಜನರಿಗೆ ಬೇಕಾದ ಅಗತ್ಯ ವಸ್ತುಗಳು ಲಭ್ಯವಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯೇ? ಹೊಸದಾಗಿ ಬಂದು ಸೇರ್ಪಡೆಗೊಳ್ಳುವವರ ಬಗ್ಗೆ ನಿಗಾವೇ? ವೈದ್ಯಕೀಯ ಅಗತ್ಯತೆಗಳ ಪೂರೈಕೆಯ ಸುಗಮ ವ್ಯವಸ್ಥೆ ಕಲ್ಪಿಸುವುದೇ? ಜಿಲ್ಲಾ ಗಡಿಗಳನ್ನು ಬಂದ್ ಮಾಡುವ ನಿರ್ಧಾರವೇ? ಅಂತಹ ಸಂದರ್ಭಗಳಲ್ಲಿ ಬರುವ ಒತ್ತಡಗಳನ್ನು ತಡೆಯುವ ಪ್ರಯತ್ನವೇ? ಎಲ್ಲ ವಿಚಾರಗಳಲ್ಲೂ ಪ್ರತಿನಿತ್ಯದ ಬೆಳವಣಿಗೆಗಳನ್ನು ಸರ್ಕಾರಕ್ಕೆ ವರದಿ ಮಾಡುವುದೇ? ಮಾಧ್ಯಮದವರಿಗೆ ವಿವರಣೆ ನೀಡುವುದೇ?... ಕಲ್ಪನೆಗೂ ಮೀರಿದ ಕೆಲಸಗಳ ಒತ್ತಡಗಳು.

ಪಾಪದ ಆಶಾ ಕಾರ್ಯಕರ್ತೆಯರು, ಅಂಗನವಾಡಿಯವರು ಬಿಸಿಲನ್ನೂ ಲೆಕ್ಕಿಸದೆ ನಡೆದೇ ಗ್ರಾಮಗಳಲ್ಲಿ ಮಾಹಿತಿ ಕಲೆ ಹಾಕಿದರು. ಪಂಚಾಯಿತಿಯ ನೌಕರರು, ಆರೋಗ್ಯಾಧಿಕಾರಿಗಳೂ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಈ ಒಂದು ಹೊಸ ಖಾಯಿಲೆಗೆ ವೈದ್ಯರು, ದಾದಿಯರು, ಸಿಬ್ಬಂದಿಗಳು ಜೀವದ ಹಂಗು ತೊರೆದು ಚಿಕಿತ್ಸೆ ನೀಡಿದರು. ಬೇರೆ ಖಾಯಿಲೆ ಇರುವವರಿಗೆ ಸೋಂಕು ತಗಲದಿರಲು ಅಶ್ವಿನಿ ಆಸ್ಪತ್ರೆಯನ್ನೇ ವಶಕ್ಕೆ ತೆಗೆದುಕೊಂಡು ಇತರ ಖಾಯಿಲೆಗಳ ಉಪಚಾರಕ್ಕಾಗಿ ಅದನ್ನು ಜಿಲ್ಲಾಸ್ಪತ್ರೆಯಾಗಿ ಪರಿವರ್ತಿಸಲಾಯಿತು. ಕೊರೊನಾ ಶಂಕಿತರ ಗಂಟಲ ದ್ರವವನ್ನು ಪೂನಾ ಹಾಗೂ ಇತರೆಡೆಗೆ ಕಳುಹಿಸಬೇಕು, ಅದರ ಬಗ್ಗೆ ನಿಗಾ ಇಡಬೇಕು, ಆಸ್ಪತ್ರೆಯಲ್ಲಿ ದಾಖಲಾದವರಿಗೆ ಊಟೋಪಚಾರ, ಸಾಂತ್ವನದ ಮಾತುಗಳ ಜೊತೆ ಅವರಿಗೆ ಮಾನಸಿಕ ಆಘಾತವಾಗದಂತೆ ನೋಡಿಕೊಳ್ಳಬೇಕು. ಪ್ರತಿದಿನ ಜಿಲ್ಲೆಯಲ್ಲಿ ಶಂಕಿತರ ಪಟ್ಟಿ ತಯಾರಾಗಬೇಕು... ಹೀಗೆ ಆರೋಗ್ಯ ರಕ್ಷಕರು ಶ್ರಮಿಸಿದರು.

ಪೊಲೀಸರದ್ದು ಈ ಬಾರಿ ವಿಶೇಷ ಅನುಭವ. ಒಂದೆರಡು ದಿನ ಲಾಕ್‍ಡೌನ್ ಆದರೆ ಪರವಾಗಿಲ್ಲ, ಇದು 21 ದಿನಗಳ ಸುಧೀರ್ಘ ಹೋರಾಟ. ಬೆಳಿಗ್ಗೆ 5.30ಕ್ಕೆ ಮೈಕ್‍ನಲ್ಲಿ ಪೊಲೀಸರ ಘರ್ಜತೆ ! ಸುಮ್ಮನೆ ಮಲಗಿದ್ದವರೂ ಗಾಬರಿಯಿಂದೆದ್ದು ತಾನು ತಪ್ಪಿ ರಸ್ತೆಯಲ್ಲಿದ್ದೇನೆಯೇ ಎಂದು ಪ್ರಶ್ನಿಸಿಕೊಳ್ಳುವ ಸ್ಥಿತಿ! ಹಗಲು - ರಾತ್ರಿ ರಕ್ಷಣೆಯ ಹೊಣೆಯೊಂದಿಗೆ, ಜನರಿಗೆ ಶಿಸ್ತಿನ ಪಾಠವನ್ನು ಹೇಳಿಕೊಡುವ ಅನಿವಾರ್ಯತೆ. ಗಡಿಗಳಲ್ಲಿ ಹಗಲು - ರಾತ್ರಿ ದುಡಿಮೆ; ದ್ವೀಪದಂತಾದ ಕೊಂಡಂಗೇರಿಯಲ್ಲಿ 24 ಗಂಟೆಗಳ ಗಸ್ತು... ಸರಿಯಾದ ಊಟ, ನೀರೂ ಸಿಗದಿದ್ದರೂ ತಾಳ್ಮೆ ಕಳೆದುಕೊಳ್ಳದೆ ಸಲ್ಲಿಸಿದರು ಸೇವೆ.

ಜಿಲ್ಲಾಧಿಕಾರಿಗಳಂತೂ ಸಹನೆಯನ್ನೇ ತುಂಬಿದ, ಸರಳವಾಗಿ ಕಂಡರೂ ನಿರ್ಧಾರಗಳಲ್ಲಿ ರಾಜಿ ಮಾಡಿಕೊಳ್ಳದ ಛಲವಾದಿ. ಅವರಿಗೆ ಸಾಥ್ ನೀಡಿದವರು ಅಷ್ಟೇ ಕರ್ತವ್ಯ ನಿಷ್ಠೆಯ ಪೊಲೀಸ್ ವರಿಷ್ಠಾಧಿಕಾರಿ. ಜಿಲ್ಲಾ ಪಂಚಾಯತ್ ಸಿ.ಇ.ಓ. ಅವರಿಗೆ ಅನಿವಾರ್ಯ ಕಾರಣದಿಂದ ಜೊತೆಗಿರಲು ಸಾಧ್ಯವಿಲ್ಲದಿದ್ದರೂ, ಇಡೀ ಜಿಲ್ಲಾ ಪಂಚಾಯತ್ ವ್ಯವಸ್ಥೆಯೇ ಜಿಲ್ಲಾಡಳಿತಕ್ಕೆ ಕೈಜೋಡಿಸಿತು.

ದಾನಿಗಳು, ಸಂಘ - ಸಂಸ್ಥೆಗಳು, ಸ್ವಯಂಸೇವಕರು, ಚೇಂಬರ್, ಮಾಧ್ಯಮಮಿತ್ರರು ಅವರವರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಆಹಾರ, ಕಾರ್ಮಿಕ, ಸ್ಥಳೀಯ ಸಂಸ್ಥೆಗಳು, ಕಂದಾಯ ಇಲಾಖೆ, ಡಿಸಿಸಿ ಬ್ಯಾಂಕ್, ಅಂಗನವಾಡಿ ಬಂಧುಗಳು ಹಾಗೂ ಇತರ ಇಲಾಖೆಗಳು ಅವರವರ ವಿಭಾಗಗಳಲ್ಲಿ ಕಾರ್ಯಕ್ಷಮತೆ ಮೆರೆದಿದ್ದಾರೆ.

ದಿನಂಪ್ರತಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಅದೆಷ್ಟು ಸಭೆಗಳು, ಅದೆಷ್ಟು ಚರ್ಚೆಗಳು, ಅದೆಷ್ಟು ಸಲಹೆಗಳು, ಅದೆಷ್ಟು ದೂರವಾಣಿ ಕರೆಗಳು, ಅದೆಷ್ಟು ಮೆಸೇಜ್‍ಗಳು? ಎಲ್ಲರ ದೂರವಾಣಿಗಳೂ 24 ಗಂಟೆಗಳೂ ಕಾರ್ಯನಿರ್ವಹಿಸಿದವು. ಹಿರಿಯ ಅಧಿಕಾರಿಗಳು, ಕಿರಿಯ ಸಿಬ್ಬಂದಿಗಳು ಎಲ್ಲರೂ ಈ ಹೋರಾಟದಲ್ಲಿ ಒಂದಾಗಿ ಶ್ರಮಿಸಿದರು. ಅರ್ಥೈಸಿಕೊಂಡ ಕೊಡಗಿನ ಜನತೆ ಕೂಡಾ ಬೇರೆ ಜಿಲ್ಲೆಗಳಿಗಿಂತ ವಿಭಿನ್ನವಾಗಿ, ವಿನಮ್ರವಾಗಿ ಜಿಲ್ಲಾಡಳಿತದ ಆದೇಶಗಳಿಗೆ ಮನ್ನಣೆ ನೀಡಿತು. ಜನಪ್ರತಿನಿಧಿಗಳೂ ಕೂಡಾ ಜಿಲ್ಲಾಡಳಿತ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದರು.

ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಸತತ ಪರಿಶ್ರಮ, ಸ್ವಾರ್ಥ ರಹಿತ ಸೇವೆಯಿಂದ ಇದೀಗ ಕೊಡಗು ಕೊರೊನಾ ಪಾಸಿಟಿವ್ ಕಪ್ಪುಚುಕ್ಕಿಯಿಂದ ಹೊರಬಂದಿದ್ದು ಜನತೆ ಖುಷಿಯಿಂದಿದ್ದಾರೆ, ಉತ್ತಮ ಭವಿಷ್ಯದ ಕಲ್ಪನೆಯಲ್ಲಿದ್ದಾರೆ, ಇದಕ್ಕೆ ಕಾರಣರಾದವರಿಗೆ ಮನದಲ್ಲಿಯೇ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ನಮ್ಮನ್ನು ರಕ್ಷಿಸಿದವರು ಏನನ್ನೂ ನಿರೀಕ್ಷಿಸುವುದಿಲ್ಲ; ಆದರೆ ವ್ಯಕ್ತಗೊಳ್ಳುವ ಕೃತಜ್ಞತೆ ಅವರ ಮಾನಸಿಕ ಸ್ಥೈರ್ಯವನ್ನು, ಉತ್ಸಾಹವನ್ನು ಉತ್ತೇಜಿಸುತ್ತದೆ, ಇನ್ನಷ್ಟು ಸೇವೆಗೆ ಪ್ರೋತ್ಸಾಹಿಸುತ್ತದೆ.

ಹಾಗಾಗಿ ನಾವೆಲ್ಲ ಒಂದು ಅಂಚೆ ಕಾರ್ಡ್ ಮೂಲಕ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸೋಣ. ಮಕ್ಕಳು ಕಾರ್ಡಿನಲ್ಲಿ ಕೃತಜ್ಞತೆ ಪ್ರತಿಬಿಂಬಿಸಲು ಚಿತ್ರ ಬರೆಯಿರಿ; ಅಥವಾ ತೊದಲು ಭಾಷೆಯಲ್ಲೇ ಪ್ರೀತಿಯ ನಮಸ್ಕಾರದ ಬರಹವಿರಲಿ. ಹಿರಿಯರು ಅತ್ಯಂತ ಚಿಕ್ಕದಾದ, ಚೊಕ್ಕದಾದ ಬರಹ, ಕವಿತೆಗಳ ಮೂಲಕ ತಮ್ಮ ಧನ್ಯತಾಭಾವವನ್ನು ವ್ಯಕ್ತಪಡಿಸಿ.

ಕೊರೊನಾ ಸಮರ ವೀರರಿಗೆ ನಮ್ಮ ನಮನವಿರಲಿ.

ಕಾರ್ಡ್‍ಗಳು ಕಡ್ಡಾಯವಾಗಿ ‘ಶಕ್ತಿ’ ಕಚೇರಿಗೆ ತಲುಪಬೇಕು. ಅವುಗಳನ್ನು ಒಟ್ಟಾಗಿ ಜಿಲ್ಲಾಧಿಕಾರಿಗಳಿಗೆ ತಲುಪಿಸಲಾಗುವುದು.

ವಿಳಾಸ ಹೀಗಿರಲಿ.

ಕೊರೊನಾ ಸಮರ ವೀರರಿಗೆ ನಮನ.

‘ಶಕ್ತಿ’ ದಿನಪತ್ರಿಕೆ ಕಾರ್ಯಾಲಯ, ಮಡಿಕೇರಿ, ಕೊಡಗು.

ತಾ, 15ರೊಳಗೆ ನಿಮ್ಮ ಪತ್ರ ತಲುಪಲಿ.

ವಿಶ್ವಾಸಿ, ಜಿ. ಚಿದ್ವಿಲಾಸ್