ಮಡಿಕೇರಿ, ಏ. 8: ಕೊಡಗು ಜಿಲ್ಲೆಗೆ ಕ್ರೀಡಾ ಜಿಲ್ಲೆ ಎಂಬ ಹೆಗ್ಗಳಿಕೆ ಇದ್ದು; ವರ್ಷಂಪ್ರತಿ ಬೇಸಿಗೆ ಬಂತೆಂದರೆ ಇಡೀ ಜಿಲ್ಲೆಯಾದ್ಯಂತ ಕ್ರೀಡಾ ಹಬ್ಬಗಳ ಸಂಭ್ರಮವೋ ಸಂಭ್ರಮ ಮನೆ ಮಾಡಿರುತ್ತಿತ್ತು. ಹಾಕಿ, ಕ್ರಿಕೆಟ್, ಫುಟ್‍ಬಾಲ್, ಹಗ್ಗಜಗ್ಗಾಟ ಈ ರೀತಿಯಾಗಿ ಬಗೆ ಬಗೆಯ ಕ್ರೀಡಾಕೂಟಗಳು ಕೊಡಗಿನಲ್ಲಿ ಹಬ್ಬದ ವಾತಾವರಣವನ್ನು ಮಾರ್ಚ್‍ನಿಂದ ಮೇ ಅಂತ್ಯದವರೆಗೂ ಸೃಷ್ಟಿಸುತಿತ್ತಲ್ಲದೆ; ಜನತೆಯ, ಕ್ರೀಡಾಪ್ರೇಮಿಗಳ ಕೌಟುಂಬಿಕ ಸಮ್ಮಿಲನದ ಓಡಾಟ, ವ್ಯಾಪಾರೋದ್ಯಮಗಳಲ್ಲೂ ಚೇತರಿಕೆ, ಕೃಷಿ ಕೆಲಸಗಳ ಒತ್ತಡಗಳ ಬಳಿಕ ಕ್ರೀಡೆಯ ಮೂಲಕ ಮಾನಸಿಕ ಹಾಗೂ ದೈಹಿಕವಾಗಿಯೂ ಒಂದಷ್ಟು ನವೋಲ್ಲಾಸ ಸರ್ವೆ ಸಾಮಾನ್ಯವಾಗಿರುತ್ತಿತ್ತು. ಆದರೆ ಇವೆಲ್ಲವಕ್ಕೂ ಒಂದೆರಡು ವರ್ಷದಿಂದ ‘ಬ್ರೇಕ್’ ಬೀಳುವಂತಾಗಿರುವದು ವಿಪರ್ಯಾಸಕರವಾಗಿದೆ.

ಜಿಲ್ಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ವಿವಿಧ ಜನಾಂಗೀಯ ಕ್ರೀಡಾಕೂಟಗಳು ಹೆಚ್ಚಾಗಿ ನಡೆಯುತ್ತಿತ್ತು. ಇದರೊಂದಿಗೆ ವಿವಿಧ ಸಂಘ - ಸಂಸ್ಥೆಗಳು, ಕ್ರೀಡಾ ಕ್ಲಬ್‍ಗಳ ಮೂಲಕವೂ ಹಲವಾರು ರೀತಿಯ ಕ್ರೀಡೆಗಳು ಜರುಗುತಿತ್ತು. ಅದರಲ್ಲೂ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲಾಗಿ ಗಿನ್ನಿಸ್ ದಾಖಲೆಯ ಕದ ತಟ್ಟುತ್ತಿದ್ದ ಕೊಡವ ಕೌಟುಂಬಿಕ ‘ಹಾಕಿ ನಮ್ಮೆ’ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯ, ದೇಶ - ವಿದೇಶಗಳಲ್ಲೂ ವರ್ಷಂಪ್ರತಿ ಗಮನ ಸೆಳೆಯುತ್ತಿತ್ತು. ಇದರೊಂದಿಗೆ ವಿವಿಧ ಜನಾಂಗಗಳ ನಡುವಿನ ಕ್ರಿಕೆಟ್, ಫುಟ್‍ಬಾಲ್, ವಾಲಿಬಾಲ್, ಈ ರೀತಿಯಾಗಿ ಹೊಸ ಹೊಸ ಕ್ರೀಡಾಕೂಟಗಳು ಜಿಲ್ಲೆಯಲ್ಲಿ ಎರಡು - ಮೂರು ತಿಂಗಳು ಕ್ರೀಡಾ ಕಲರವವನ್ನು ಸೃಷ್ಟಿಸುತ್ತಿದ್ದವು.2018ರಲ್ಲಿ ಕೊಡಗು ಜಿಲ್ಲೆ ಈ ಹಿಂದೆಂದೂ ಕಂಡು ಕೇಳರಿಯದ ಪ್ರಾಕೃತಿಕ ದುರಂತಕ್ಕೆ ಒಳಗಾಗಿ ಅಪಾರ ಆಸ್ತಿ-ಪಾಸ್ತಿಯೊಂದಿಗೆ ಜನತೆ ಪ್ರಾಣವನ್ನೂ ಕಳೆದುಕೊಂಡಿದ್ದರು. ಈ ಸಂಕಷ್ಟದಿಂದ ಜನತೆ ಹೊರಬರಲು ಚಡಪಡಿಸುತ್ತಿದ್ದ ಕಾರಣದಿಂದಾಗಿ ಸಂಕಷ್ಟದಲ್ಲಿರುವವರಿಗೆ ಮಿಡಿದು 2019ರ ಇಸವಿಯಲ್ಲಿ ಕೌಟುಂಬಿಕ ಹಾಕಿ ಉತ್ಸವ, ಕ್ರಿಕೆಟ್ ಉತ್ಸವ ಸೇರಿದಂತೆ ವಿವಿಧ ಕ್ರೀಡಾಹಬ್ಬಗಳನ್ನು ಕೈಬಿಡಲಾಗಿತ್ತು. ಆದರೂ ಕ್ರೀಡೆ - ಕ್ರೀಡಾಪಟುಗಳಿಗೆ ಹಾಕಿ ಉತ್ಸವದಿಂದ ದೂರವಿರದಂತೆ ಮಾಡಲು ಹಾಕಿ ಕೂರ್ಗ್‍ನಿಂದ ಕಾಕೋಟು ಪರಂಬುವಿನಲ್ಲಿ ಹಾಗೂ ವಿಕೋಪ ಸಂಭವಿಸಿದ ಕುಟುಂಬಗಳಿಗೆ ಕಕ್ಕಬೆಯಲ್ಲಿ ಪಂದ್ಯಾವಳಿಯನ್ನು ಸಣ್ಣ ಪ್ರಮಾಣದಲ್ಲಿ ಮಾತ್ರವಾಗಿ ನಡೆಸಲಾಗಿತ್ತು.

ಆದರೆ 2019ರಲ್ಲೂ ಮತ್ತೆ ದುರಂತ ಸಂಭವಿಸಿದೆಯಾದರೂ ಇದನ್ನು ಮತ್ತೆ ಮಾನಸಿಕವಾಗಿ ಮೆಟ್ಟಿ ನಿಲ್ಲುವಂತೆ 2020ರ ಕ್ರೀಡಾ ಹಬ್ಬಗಳನ್ನು ಸಂಘಟಿಸಲು ಜವಾಬ್ದಾರಿ ಹೊತ್ತಿದ್ದ ಸಂಘಟಕರು ಪ್ರಯತ್ನ ಆರಂಭಿಸಿದ್ದರು. ಆದರೆ ಈ ಪ್ರಯತ್ನಗಳು ಈ ವರ್ಷದ ಮಟ್ಟಿಗೆ ಮತ್ತೊಮ್ಮೆ ನೆನೆಗುದಿಗೆ ಬಿದ್ದಂತಾಗಿದೆ. ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ಈಗಲೂ ಮುಂದುವರಿಯುತ್ತಿರುವ ಕೊರೊನಾ ಎಂಬ ಹೆಮ್ಮಾರಿ ಎಲ್ಲವನ್ನೂ ನುಂಗಿ ಹಾಕಿದೆ. ಕೊರೊನಾ ಆತಂಕದಿಂದಾಗಿ ಇಡೀ (ಮೊದಲ ಪುಟದಿಂದ) ದೇಶ ದಿನಗಟ್ಟಲೆ ‘ಲಾಕ್‍ಡೌನ್’ನಿಂದ ಕೂಡಿದ್ದು; ಇತಿಹಾಸದಲ್ಲೇ ಇಂತಹ ಪರಿಸ್ಥಿತಿ ಮೊದಲ ಬಾರಿ ಉಂಟಾಗಿದೆ.

ಈ ಕಾರಣದಿಂದಾಗಿ 23ನೇ ವರ್ಷದ ಕೌಟುಂಬಿಕ ಹಾಕಿ ಉತ್ಸವವನ್ನು ಆಯೋಜಿಸಲು ಬಾಳುಗೋಡುವಿನ ಕೊಡವ ಸಾಂಸ್ಕøತಿಕ ಮತ್ತು ಕ್ರೀಡಾ ಸಮುಚ್ಚಯದಲ್ಲಿ ಫೆಡರೇಷನ್ ಆಫ್ ಕೊಡವ ಸಮಾಜದ ಸಹಕಾರ ಹಾಗೂ ಕೊಡವ ಹಾಕಿ ಅಕಾಡೆಮಿಯ ಸಹಯೋಗದೊಂದಿಗೆ ನಡೆಸಲು ಸಿದ್ಧತೆ ಆರಂಭಿಸಿದ ಹರಿಹರ ಬೆಳ್ಳೂರಿನ ಮುಕ್ಕಾಟಿರ ಕುಟುಂಬಸ್ಥರು ಮುಕ್ಕಾಟಿರ ಕಪ್ - 2020 ಉತ್ಸವ ವನ್ನು ಈ ವರ್ಷ ರದ್ದುಗೊಳಿಸಿರುವ ದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈಗಾಗಲೇ ಗ್ಯಾಲರಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತಾದರೂ ದೇಶವ್ಯಾಪಿಯಾಗಿ ಉಂಟಾಗಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇದನ್ನು ಕೈಬಿಡಲಾಗಿದ್ದು; ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಇನ್ನು ಅಮ್ಮತ್ತಿಯಲ್ಲಿ ನಡೆಯಲು ಸಿದ್ಧವಾಗುತ್ತಿದ್ದ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವ ‘ ಪೊರ್ಕೋಂಡ ಕಪ್’ ಗೌಡ ಯುವವೇದಿಕೆಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆಯಬೇಕಿದ್ದ ಗೌಡ ಕಪ್ 2020 ಕ್ರಿಕೆಟ್ ಜಂಬರ ಸೇರಿದಂತೆ ಜಿಲ್ಲೆಯಲ್ಲಿ ನಡೆಯಬೇಕಿದ್ದ ವಿವಿಧ ಜನಾಂಗಗಳ ಜನಾಂಗೀಯ ಕ್ರೀಡಾಕೂಟಗಳು ಈ ವರ್ಷದ ಮಟ್ಟಿಗೆ ಬಹುತೇಕ ರದ್ದಾಗುವದು ಖಚಿತವಾದಂತಿದೆ. ಹಾಕಿ ಹಬ್ಬ ಕೈಬಿಟ್ಟಿರುವ ಬಗ್ಗೆ ಮುಕ್ಕಾಟೀರ ಕಪ್ ಆಯೋಜಕರು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಉಳಿದ ಕ್ರೀಡಾಹಬ್ಬ ಗಳ ಬಗ್ಗೆ ಇತರ ಸಂಬಂಧಿಸಿದವರು ಈ ತನಕ ಅಧಿಕೃತ ಪ್ರಕಟಣೆಯನ್ನು ನೀಡಿಲ್ಲವಾದರೂ ದೇಶದಲ್ಲೇ ಘೋಷಣೆಯಾಗಿರುವ ತುರ್ತು ಪರಿಸ್ಥಿತಿಯ ರೀತಿಯಲ್ಲಿನ ನಿರಂತರ ‘ಲಾಕ್‍ಡೌನ್’ನಿಂದಾಗಿ ರದ್ದುಗೊಳ್ಳು ವದು ಖಚಿತವೆನ್ನಬಹುದಾಗಿದೆ.

-ಶಶಿ ಸೋಮಯ್ಯ