ಮಡಿಕೇರಿ, ಏ. 7: ಕೊರೊನಾ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಜನತೆ ದೇಶವ್ಯಾಪಿ ಕರೆ ನೀಡಲಾಗಿರುವ ‘ಲಾಕ್‍ಡೌನ್’ ಕರೆಗೆ ಸಹಕರಿಸಬೇಕು. ತಮ್ಮ ತಮ್ಮ ಮನೆಗಳಿಂದ ವಿನಾಕಾರಣ ಹೊರ ಬರಬೇಡಿ... ಈ ಮೂಲಕ ಎಲ್ಲರೂ ಸಾಮೂಹಿಕವಾಗಿ ಕೊರೊನಾ ಹರಡುವಿಕೆಯನ್ನು ತಡೆ ಹಿಡಿಯೋಣ ಎಂದು ಜಿಲ್ಲೆಯ ಕ್ರೀಡಾಪಟುಗಳು, ಸಿನಿಮಾ ತಾರೆಯರು ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿಯೊಂದಿಗೆ ಮನವಿ ಮಾಡಿದ್ದಾರೆ.

ಇವರುಗಳ ವೀಡಿಯೋ ಸಂದೇಶಗಳನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಮ್ಮ ಫೇಸ್‍ಬುಕ್ ಖಾತೆಯ ಮೂಲಕ ಮತ್ತಷ್ಟು ಪ್ರಚುರಪಡಿಸಿದ್ದಾರೆ. ಕ್ರಿಕೆಟಿಗ ರಾಬಿನ್ ಉತ್ತಪ್ಪ, ಹಾಕಿಪಟುಗಳಾದ ಎಸ್.ವಿ. ಸುನಿಲ್, ವಿಕ್ರಂಕಾಂತ್, ಸಿನಿಮಾ ಹಾಗೂ ಕಿರುತರೆಯ ನಟ-ನಟಿಯರಾದ ಕೃಷಿ ತಾಪಂಡ, ಶ್ವೇತಾ ಚಂಗಪ್ಪ, ಶುಭ್ರ ಅಯ್ಯಪ್ಪ, ತಾರಕ್ ಪೊನ್ನಪ್ಪ ಮತ್ತಿತರರು ಈ ಸಂದೇಶದೊಂದಿಗೆ ಮನವಿ ಮಾಡಿದ್ದಾರೆ. ಸಂಕಷ್ಟದ ಈ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ಕುಟುಂಬ ಸದಸ್ಯರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ತಡೆಗೆ ಸಹಕರಿಸುವಂತೆ ಇವರುಗಳು ಕೋರಿದ್ದು ಜಿಲ್ಲಾಧಿಕಾರಿಗಳು ಇದನ್ನು ಹಂಚಿಕೊಂಡಿದ್ದಾರೆ.