ಮಡಿಕೇರಿ, ಏ. 7: ಪ್ರಸ್ತುತ ಎದುರಾಗಿರುವ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ಜನತೆಯ ಹಿತದೃಷ್ಟಿಯೊಂದಿಗೆ ಪೊಲೀಸ್ ಇಲಾಖೆ ಕಟ್ಟೆಚ್ಚರದ ಕರ್ತವ್ಯ ನಿರ್ವಹಣೆ ಮಾಡುತ್ತಿದೆ. ಇಲಾಖಾ ಸಿಬ್ಬಂದಿಗಳು ಶಕ್ತಿ ಮೀರಿ ಕೆಲಸ ನಿರ್ವಹಿಸುತ್ತಿದ್ದು; ಇದಕ್ಕೆ ಜನರು - ಜನಪ್ರತಿನಿಧಿಗಳಿಂದಲೂ ಸಹಕಾರ ಸಿಗುತ್ತಿದೆ. ಇದು ಇಲಾಖೆಯ ಕರ್ತವ್ಯ ನಿರ್ವಹಣೆಗೆ ಪೂರಕವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಅವರು ಅಭಿಪ್ರಾಯಪಟ್ಟರು.‘ಲಾಕ್‍ಡೌನ್’ ಕುರಿತಾಗಿ ಪ್ರಸ್ತುತದ ಸನ್ನಿವೇಶದ ಬಗ್ಗೆ ಅವರು ‘ಶಕ್ತಿ’ಯೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಸರಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನಗಳನ್ನು ಇಲಾಖೆ ಪರಿಪಾಲಿಸುತ್ತಿದೆ. ಜಿಲ್ಲೆಯಲ್ಲಿ ಅದರಲ್ಲೂ ಗಡಿಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ, ನಿಗಾ ವಹಿಸಲಾಗುತ್ತಿದೆ. ಚೆಕ್‍ಪೋಸ್ಟ್‍ನಲ್ಲಿ ಆರಂಭದಿಂದಲೂ ಕಟ್ಟೆಚ್ಚರ ವಹಿಸಲಾಗಿದ್ದು; ಇಲಾಖಾ ಸಿಬ್ಬಂದಿಗಳು ಉತ್ತಮ ಕೆಲಸ ಮಾಡುತ್ತಿರುವದಾಗಿ ಹೇಳಿದರು. ಜನತೆ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಸದ್ಯದಲ್ಲಿ ಪರಿಸ್ಥಿತಿ ತಹಬದಿಗೆ ಬರುವ ಆಶಾಭಾವನೆಯಿದ್ದು; ಸಾರ್ವಜನಿಕರು ಇಲಾಖೆಯೊಂದಿಗೆ ಇನ್ನಷ್ಟು ಕೈಜೋಡಿಸುವಂತೆ ಅವರು ಮನವಿ ಮಾಡಿದರು.

(ಮೊದಲ ಪುಟದಿಂದ)

ಜಾಲ ತಾಣಗಳ ಬಗ್ಗೆ ನಿಗಾ

ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚೋದನಾತ್ಮಕವಾದ ಹಾಗೂ ತಪ್ಪು ಸಂದೇಶಗಳನ್ನು ರವಾನಿಸುತ್ತಿರುವ ಬಗ್ಗೆ ಇಲಾಖೆ ಗಮನ ಹರಿಸುತ್ತಿದ್ದು; ಕ್ರಮಜರುಗಿಸಲಾಗುತ್ತಿದೆ. ಈಗಾಗಲೇ ಕೆಲವೆಡೆಗಳಲ್ಲಿ ಎಫ್‍ಐಆರ್ ಕೂಡ ದಾಖಲಿಸಲಾಗಿದೆ. ಈ ಬಗ್ಗೆ ದಿನಂಪ್ರತಿ ಇಲಾಖೆ ಗಮನ ಹರಿಸುತ್ತಿರುವದಾಗಿ ಡಾ. ಸುಮನ್ ಹೇಳಿದರು.

ವಾಹನಗಳ ಓಡಾಟ ವಿರುದ್ಧ ಕ್ರಮ

ಲಾಕ್‍ಡೌನ್ ಇದ್ದರೂ ಕೆಲವರು ವಾಹನಗಳಲ್ಲಿ ಅನವಶ್ಯಕವಾಗಿ ಓಡಾಡುತ್ತಿರುವ ಬಗ್ಗೆ ಕ್ರಮ ಜರುಗಿಸಲಾಗುತ್ತಿದ್ದು; ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ. ಕೆಲವರು ವಿನಾಕಾರಣ ಸುತ್ತಾಡಲು ಪ್ರಯತ್ನ ಮಾಡುತ್ತಿರುವದನ್ನು ಇಲಾಖೆ ಗಮನಿಸಿದೆ. ಇಂತಹವರ ವಿರುದ್ಧ ಕ್ರಮ ವಹಿಸಲಾಗುತ್ತಿದೆ. ತಬ್ಲಿಘಿಗಳ ವಿಚಾರದ ಬಗ್ಗೆಯೂ ಪರಿಶೀಲನೆ ಮುಂದುವರಿಯುತ್ತಿದೆ ಎಂದು ಅವರು ಮಾಹಿತಿಯಿತ್ತರು.

ಮಳೆಗಾಲಕ್ಕೂ ಎಚ್ಚರಿಕೆ

ಸದ್ಯದಲ್ಲಿ ಜಿಲ್ಲೆ ಮತ್ತೊಂದು ಮಳೆಗಾಲವನ್ನು ಎದುರಿಸಬೇಕಾಗಿದ್ದು; ಈ ನಿಟ್ಟಿನಲ್ಲೂ ಇದೀಗ ಮುಂಜಾಗ್ರತೆ ವಹಿಸಬೇಕಾಗಿದೆ. ಇದಕ್ಕಾಗಿ ಪರಿಣತ ಸಿಬ್ಬಂದಿಗಳು ಇಲಾಖೆಯಲ್ಲಿದ್ದು; ಮುಂದಿನ ದಿನದಲ್ಲಿ ಇವರುಗಳನ್ನು ಮತ್ತೆ ಸಜ್ಜುಗೊಳಿಸಲಾಗುವದು. ಅಗತ್ಯ ಪರಿಕರಗಳನ್ನು ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆಯೂ ಗಮನ ಹರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.