ಮಡಿಕೇರಿ, ಏ. 7: ವಿಶ್ವದೆಲ್ಲೆಡೆ ತೀವ್ರ ಆತಂಕಕ್ಕೆ ಕಾರಣವಾಗಿ; ಕೊಡಗಿನಲ್ಲೂ ಕಾಣಿಸಿಕೊಂಡು ಸಂಪೂರ್ಣ ಕೊಡಗನ್ನೆ ಕರಾಳ ಕೂಪಕ್ಕೆ ದೂಡಿದ್ದ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಕೊಡಗಿನ ವ್ಯಕ್ತಿ ಇದೀಗ ಗುಣಮುಖರಾಗಿದ್ದು; ಆ ಮೂಲಕ ಆತಂಕದಲ್ಲಿದ್ದ ಕೊಡಗು ಜಿಲ್ಲೆಗೊಂದು ನೆಮ್ಮದಿ ಸುದ್ದಿ ಸಿಕ್ಕಂತಾಗಿದೆ.ಕೊರೊನಾ ಸೋಂಕಿನಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ಮಾ. 19 ರಿಂದ ಚಿಕಿತ್ಸೆಗೆ ದಾಖಲಾಗಿದ್ದ ಕೊಂಡಂಗೇರಿ ಸಮೀಪದ ಕೇತುಮೊಟ್ಟೆಯ 35 ವರ್ಷ ಪ್ರಾಯದ ವ್ಯಕ್ತಿಗೆ 14 ದಿನಗಳ ನಿರಂತರ ಚಿಕಿತ್ಸೆಯ ಬಳಿಕ ನಡೆಸಲಾದ ಎರಡು ಪ್ರಮುಖ ಆರೋಗ್ಯ ಪರೀಕ್ಷೆಗಳಲ್ಲಿ ‘ನೆಗೆಟಿವ್’ ವರದಿ ಬಂದಿದ್ದು; ಎದೆಯ ಎಕ್ಸ್‍ರೇ ವರದಿಯಲ್ಲೂ ಸೋಂಕು ನಿವಾರಣೆಯಾಗಿರುವದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಕಣ್ಗಾವಲು ಸಮಿತಿಗೆ ಮಾಹಿತಿ ನೀಡಿ ಚೇತರಿಸಿಕೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ಕೈಗೊಳ್ಳಬೇಕಾದ ನಿಯಮಗಳನ್ನು ಪಾಲಿಸಿ ನಂತರ ಅಧಿಕೃತವಾಗಿ ಆಸ್ಪತ್ರೆಯಿಂದ ಕಳುಹಿಸಿಕೊಡಲಾಯಿತು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ 14 ದಿನಗಳ ಕಾಲ ಈ ವ್ಯಕ್ತಿ ಮನೆಯಲ್ಲಿಯೇ ಗೃಹ ಪರೀಕ್ಷೆಗೊಳಪಡಬೇಕಾಗಿದ್ದು; 14 ದಿನವೂ ಆರೋಗ್ಯ ಇಲಾಖೆ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಿದೆ. ಸೋಂಕು ತಗುಲಿದ್ದ ವ್ಯಕ್ತಿಯ ಕುಟುಂಬದವರು ಸ್ವಯಂ ಎಚ್ಚರಿಕೆ ವಹಿಸುವದರೊಂದಿಗೆ ಕೊರೊನಾ ಸೋಂಕಿನ ಲಕ್ಷಣಗಳೇನಾದರೂ ಕಂಡು ಬಂದಲ್ಲಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಇನ್ನುಳಿದಂತೆ ಸೂಕ್ಷ್ಮ ವಲಯವಾಗಿ ಪರಿಗಣಿಸಲ್ಪಟ್ಟಿದ್ದ ಕೊಂಡಂಗೇರಿ ಗ್ರಾಮವನ್ನು ಅದರಿಂದ ಮುಕ್ತಗೊಳಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಲಾಕ್ ಡೌನ್ ಆದೇಶ ಈ ಪ್ರದೇಶಕ್ಕೂ ಅನ್ವಯವಾಗಲಿದೆ ಜಿಲ್ಲಾಧಿಕಾರಿ ಮಾಹಿತಿಯಿತ್ತರು.

ದುಬೈನಿಂದ ಬಂದಿದ್ದ ವ್ಯಕ್ತಿ

ಕೊರೊನಾ ಮಹಾಮಾರಿ ಎಲ್ಲೆಡೆ ಪಸರಿಸಲು ಆರಂಭಿಸಿದ ಸಂದರ್ಭ ಕೊಡಗಿನಲ್ಲೂ ಸೋಂಕು ಶಂಕಿತರ ಬಗ್ಗೆ ಕೊಡಗು ಜಿಲ್ಲಾಡಳಿತ ನಿಗಾ ವಹಿಸಿತ್ತು. ಕೊಡಗು ಮೂಲದವರಾಗಿದ್ದು; ಹೊರ ಜಿಲ್ಲೆ, ಹೊರ ರಾಜ್ಯ ಮಾತ್ರವಲ್ಲದೇ ವಿದೇಶಗಳಲ್ಲಿದ್ದು; ಎಲ್ಲಡೆ ಕೊರೊನಾ ಭೀತಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕೊಡಗಿಗೆ ಮರಳುವವರ ಬಗ್ಗೆ ಹದ್ದಿನ ಕಣ್ಣಿಟ್ಟಿತ್ತು. ಕೊಡಗು ಮೂಲದವರು ಮಾತ್ರವಲ್ಲದೆ ಹೊರಗಿನವರಾಗಿದ್ದುಕೊಂಡು ಕೊಡಗಿಗೆ ಬರುವವರ ಕುರಿತು ಮಾಹಿತಿ ಕಲೆ ಹಾಕಲು ಮುಂದಾಗಿತ್ತು. ಈ ರೀತಿ ಪತ್ತೆಯಾದವರ ಆರೋಗ್ಯ ತಪಾಸಣೆ ಕೈಗೊಳ್ಳುವ ಮೂಲಕ ಮನೆಯಲ್ಲಿಯೇ ಗೃಹ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಸೋಂಕು ತಗಲಿರುವ ಶಂಕೆಯುಳ್ಳವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಉಪಚರಿಸಲಾಗುತ್ತಿತ್ತು. ಈ ನಡುವೆ ದುಬೈನಿಂದ ಸೋಮವಾರ ಪೇಟೆಗೆ ಬಂದಿದ್ದ ವ್ಯಕ್ತಿಯೊಬ್ಬ ಗಂಟಲು ಉರಿ ಕಾಣಿಸಿ ಕೊಂಡಿದ್ದಾಗಿ ಜಿಲ್ಲಾಸ್ಪತ್ರೆಗೆ ಸ್ವಯಂ ದಾಖಲಾಗಿದ್ದು; ಆ ವ್ಯಕ್ತಿಗೆ ಕೊರೊನಾ ಸೋಂಕು ತಗಲಿರುವದು ಪರೀಕ್ಷೆಯಿಂದ ದೃಢ ಪಟ್ಟಿರಲಿಲ್ಲ. ಆದರೆ ಜಿಲ್ಲಾಡಳಿತ ವಿದೇಶದಿಂದ ಹಿಂತಿರುಗಿದವರ ಪತ್ತೆ ಕಾರ್ಯ ಮುಂದುವರೆಸುತ್ತಿದ್ದಂತೆ ಮಾ. 19 ರಂದು ಆಘಾತ ಎದುರಾಗಿತ್ತು. ದುಬೈನಿಂದ ಬಂದಿದ್ದ ಕೊಂಡಂಗೇರಿ ಮೂಲದ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ತಗುಲಿರುವದು ದೃಢಪಟ್ಟಿತ್ತು.

ನಲುಗಿದ ಕೊಡಗು

ದುಬೈನಿಂದ ಮರಳಿದ್ದ ಕೊಂಡಂಗೇರಿ ಕೇತುಮೊಟ್ಟೆಯ ನಿವಾಸಿಗೆ ಕೊರೊನಾ ಸೋಂಕು ತಗಲಿರುವ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪತ್ರಿಕಾ ಗೋಷ್ಠಿ ಮೂಲಕ ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆ ಕೊಡಗು ಜಿಲ್ಲೆಯೆ ನಲುಗಿತ್ತು. ಮಾ. 15 ರಂದು ದುಬೈನಿಂದ ಹೊರಟು ಮಾ. 16 ರಂದು ಕೊಂಡಂಗೇರಿಗೆ ತಲುಪಿದ್ದ ವ್ಯಕ್ತಿಗೆ ಮಾ. 17 ರಂದು ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೆ ಸೇರಿಸಿ; ರಕ್ತವನ್ನು ಬೆಂಗಳೂರಿನ ಲ್ಯಾಬ್‍ಗೆ ಕಳುಹಿಸಿದ ಪರೀಕ್ಷಾ

(ಮೊದಲ ಪುಟದಿಂದ) ವರದಿಯಲ್ಲಿ ಆ ವ್ಯಕ್ತಿಗೆ ಸೋಂಕು ತಗುಲಿರುವದಾಗಿ ಖಾತರಿಗೊಂಡಿತು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದರಲ್ಲದೆ; ಕೊಂಡಂಗೇರಿಯನ್ನು ಸೂಕ್ಷ್ಮ ವಲಯ ಪ್ರದೇಶವೆಂದು ಘೋಷಿಸಿ; ಪ್ರವಾಸೋದ್ಯಮ, ಧಾರ್ಮಿಕ ಮೇಳ, ಸಂತೆ, ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ, ಹೋಂಸ್ಟೇ, ವಸತಿಗೃಹಗಳನ್ನು ಬಂದ್ ಮಾಡಲು ಸೂಚಿಸಿ ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು.

ಸ್ತಬ್ಧಗೊಂಡ ಕೊಡಗು

ಕೊಡಗು ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಾರಿಯಾದ ನಿರ್ಬಂಧಗಳಿಂದಾಗಿ ಕೊಡಗು ಸಂಪೂರ್ಣ ಸ್ತಬ್ಧವಾಯಿತು. ಜಿಲ್ಲಾಡಳಿತ ಮಾತ್ರವಲ್ಲದೆ, ರಾಜ್ಯ - ಕೇಂದ್ರ ಸರ್ಕಾರಗಳ ಕಟ್ಟುನಿಟ್ಟಿನ ಸೂಚನೆಗಳಿಗೂ ಒಳಗಾದ ಕೊಡಗು ವ್ಯಾಪಾರ ವಹಿವಾಟು, ಪ್ರವಾಸಿಗರ ಭೇಟಿ, ಜನ ವಾಹನ ಸಂಚಾರ ಇವುಗಳಾವದೂ ಇಲ್ಲದೆ ಕೊರೊನಾ ಕರಿಛಾಯೆಗೆ ಸಿಲುಕಿ ಕುಗ್ಗಿ ಹೋಗಿತ್ತು. ಗಡಿಭಾಗಗಳನ್ನು ಬಂದ್ ಮಾಡಿದ್ದರಿಂದಾಗಿ ನೆರೆ ಜಿಲ್ಲೆಗಳ ಸಂಪರ್ಕವೂ ಕಡಿತಗೊಂಡು ಕೊಡಗು ದ್ವೀಪದಂತಾಗಿತ್ತು. ಇದೀಗ ಕೊಡಗಿನಲ್ಲಿದ್ದ ಏಕೈಕ ಕೊರೊನಾ ಪ್ರಕರಣ ‘ನೆಗೆಟಿವ್’ ವರದಿ ಮೂಲಕ ಮುಕ್ತಾಯಗೊಂಡಿದ್ದು; ಆತಂಕದಲ್ಲೇ ದಿನದೂಡುತ್ತಿದ್ದ ಕೊಡಗಿನ ಜನತೆ ಸದ್ಯಕ್ಕೆ ನಿರಾಳರಾಗಿದ್ದಾರೆ.

ಕೊರೊನಾ ಸೋಂಕಿತ ವ್ಯಕ್ತಿ ಹಾಗೂ ಕೊಂಡಂಗೇರಿ ಗ್ರಾಮದ ಬಗ್ಗೆ ಹೆಚ್ಚಿನ ಕಾಳಜಿ ತೋರಿದ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಮಾಧ್ಯಮಗಳಿಗೆ ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಕೆ. ಯೂಸೂಫ್ ಹಾಜಿ, ಕಾರ್ಯದರ್ಶಿ ಪಿ.ಇ. ಶಾದುಲಿ ಕೃತಜ್ಞತೆ ಸಲ್ಲಿಸಿದ್ದಾರೆ.