ಸೋಮವಾರಪೇಟೆ, ಏ. 7: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್‍ನಿಂದ ಪಾರಾಗಲು ಅಮೇರಿಕಾದಲ್ಲಿ ವೈದ್ಯರಾಗಿರುವ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಪುತ್ರ, ನೆರ್ಪಾಲಜಿಯಲ್ಲಿ ಎಂಬಿಬಿಎಸ್ ಎಂಡಿ ಸೂಪರ್ ಸ್ಪೆಶಾಲಿಸ್ಟ್ ಆಗಿರುವ ಡಾ. ಕಾರ್ಯಪ್ಪ ಅಪ್ಪಚ್ಚು ಅವರು ಸಾಮಾಜಿಕ ಜಾಲ ತಾಣದ ಮೂಲಕ ಜಿಲ್ಲೆಯ ಜನರಿಗೆ ಸಲಹೆಗಳನ್ನು ನೀಡಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಒತ್ತಿ ಹೇಳಿರುವ ಕಾರ್ಯಪ್ಪ ಅವರು, ಅಮೇರಿಕಾದಲ್ಲಿ ಕೊರೊನಾ ಸೃಷ್ಟಿಸಿರುವ ಭೀತಿಯನ್ನು ತಿಳಿಸುತ್ತಾ, ಭಾರತೀಯರು ಕೊರೊನಾ ವಿರುದ್ಧ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ವಿವರಿಸಿದ್ದಾರೆ.

ಕೊರೊನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ಭಾರತ ಉತ್ತಮ ಸಾಧನೆ ಮಾಡಿದೆ. ಪ್ರಧಾನಿ ಮೋದಿ ಅವರು ಅದ್ಭುತ ಕ್ರಮಗಳನ್ನು ಕೈಗೊಂಡಿದ್ದಾರೆ. ಸರ್ಜಿಕಲ್ ಸ್ಟ್ರೈಕ್, ನೋಟು ಅಮಾನ್ಯೀಕರಣ, ಕಾಶ್ಮೀರ ಸಮಸ್ಯೆಗಿಂತಲೂ ಹೆಚ್ಚಿನ ಧೈರ್ಯಶಾಲಿ ಕ್ರಮ ಎಂದರೆ ಲಾಕ್‍ಡೌನ್. ಇದು ಸಾವಿರಾರು ಭಾರತೀಯರ ಜೀವ ಉಳಿಸಿದೆ. ಇದು ಯಶಸ್ವಿಯಾಗಲು ಅವರೊಬ್ಬರಿಂದಲೇ ಸಾಧ್ಯವಿಲ್ಲ. ಎಲ್ಲರೂ ಕೈಜೋಡಿಸಬೇಕು ಎಂದು ವೀಡಿಯೋ ಸಂದೇಶದಲ್ಲಿ ಮನವಿ ಮಾಡಿದ್ದಾರೆ.

ಮನೆಯಲ್ಲಿಯೇ ಇರಿ; ಆರೋಗ್ಯವಾಗಿರಿ. ಕ್ವಾರಂಟೈನ್ ಎಂಬದು ಜೈಲು ಅಲ್ಲ-ಕುಟುಂಬ, ನೆರೆಹೊರೆ, ದೇಶವನ್ನು ಸುರಕ್ಷಿತವಾಗಿಡಲು ಇರುವ ಕ್ರಮ. ಹೊರಗೆ ಬಂದಾಗ 6 ಅಡಿ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಅಥವಾ ಕರ್ಚೀಫ್ ಬಳಸಿ, ಮನೆಯಲ್ಲಿ ಪ್ಯಾರಾಸಿಟಮಲ್ ಗುಳಿಗೆ, ಐವೋಪ್ರೂಫನ್, ಕಾಫ್ ಸಿರಪ್ ಇಟ್ಟುಕೊಳ್ಳಿ. ಹೆಚ್ಚಿನ ಜ್ವರ, ಉಸಿರಾಟದ ತೊಂದರೆ ಇದ್ದರೆ ವೈದ್ಯರನ್ನು ಭೇಟಿ ಮಾಡಿ ಎಂದು ಸಲಹೆ ನೀಡಿದ್ದಾರೆ.

ಮನೆಯಲ್ಲಿರುವ ಸಂದರ್ಭ ವ್ಯಾಯಾಮ ಮಾಡಿ, ಶ್ವಾಸಕೋಶದ ಶಕ್ತಿಯನ್ನು ಹೆಚ್ಚಿಸುವ ಉಸಿರಾಟದ ವ್ಯಾಯಾಮ, ಯೋಗ ಮಾಡಿ. ಜಾಗರೂಕರಾಗಿರಿ-ಭಯಪಡಬೇಡಿ. 1.30 ಕೋಟಿ ಅಧಿಕವಿರುವ ಜನಸಂಖ್ಯೆಯ ಭಾರತ ಮತ್ತು ಇದಕ್ಕಿಂತ 5 ಪಟ್ಟು ಕಡಿಮೆ ಇರುವ ಅಮೇರಿಕಾಕ್ಕೆ ಹೋಲಿಸಿದರೆ ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಭಾರತ ಉತ್ತಮ ಕ್ರಮಗಳನ್ನು ಕೈಗೊಂಡಿದೆ. ಸಾಮೂಹಿಕ ಪ್ರಯತ್ನದಿಂದ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಸಾಧ್ಯವಿದೆ ಎಂದು ಡಾ. ಕಾರ್ಯಪ್ಪ ಅಪ್ಪಚ್ಚು ತಿಳಿಸಿದ್ದಾರೆ.