ಸೋಮವಾರಪೇಟೆ, ಏ. 7: ಕೊರೊನಾ ವೈರಸ್ ಹಿನ್ನೆಲೆ ಲಾಕ್ಡೌನ್ ಆದೇಶ ಜಾರಿಯಲ್ಲಿರುವದರಿಂದ ಕೂಲಿ ಕೆಲಸಗಳೂ ಸ್ಥಗಿತಗೊಂಡಿವೆ. ಇದರಿಂದಾಗಿ ಕಡು ಬಡ ಕುಟುಂಬಗಳ ಜೀವನ ನಿರ್ವಹಣೆ ಕಷ್ಟಕರವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಟ್ಟಣದ ನಿವಾಸಿ ಎನ್.ಡಿ. ಸಂಪತ್ (ಶಂಭು) ಅವರು 100ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸಾಮಗ್ರಿಯ ಕಿಟ್ಗಳನ್ನು ವಿತರಿಸಿದರು.
ಪಟ್ಟಣ ಸೇರಿದಂತೆ ಸುತ್ತಮುತ್ತಲ ಕೆಲ ಗ್ರಾಮಗಳಲ್ಲಿರುವ ವಿಶೇಷಚೇತನರು, ತೀರಾ ಸಂಕಷ್ಟದಲ್ಲಿರುವ ಕುಟುಂಬಗಳು, ವಯೋವೃದ್ಧರು, ಮಾನಸಿಕ ಅಸ್ವಸ್ಥರು ಇರುವ ಕಡು ಬಡ ಕುಟುಂಬಗಳಿಗೆ ತಲಾ 4 ರಿಂದ 5 ಕೆ.ಜಿ. ಅಕ್ಕಿ, ಮೆಣಸಿನಪುಡಿ, ಸಕ್ಕರೆ, ಬೇಳೆ, ಆಲೂಗೆಡ್ಡೆ, ಈರುಳ್ಳಿ, ಟೀ ಪುಡಿ, ತರಕಾರಿಯನ್ನು ಮನೆ ಮನೆಗೆ ತೆರಳಿ ವಿತರಿಸಲಾಯಿತು. ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಯ ಕಿಟ್ಗಳನ್ನು ವಿತರಿಸುವಾಗ ಸ್ಥಳೀಯ ಕೆಲವರು ಭಾವಚಿತ್ರ ತೆಗೆಯಲು ಮುಂದಾದ ಸಂದರ್ಭ ನಯವಾಗಿ ತಿರಸ್ಕರಿಸಿದ ಸಂಪತ್ ಅವರು, ‘ಸಣ್ಣ ಸಹಾಯಕ್ಕೆ ಭಾವಚಿತ್ರ ತೆಗೆಯುವದು ಬೇಡ-ಅವರಿಗೂ ಇದು ಮುಜುಗರವಾಗುತ್ತದೆ’ ಎಂದು ಪ್ರತಿಕ್ರಿಯಿಸಿ ತಮ್ಮ ದೊಡ್ಡತನ ಮೆರೆದು ಇತರರಿಗೆ ಮಾದರಿಯಾದರು.