ವೀರಾಜಪೇಟೆ, ಏ.5: ಕೊರೊನಾ ವೈರಸ್‍ನ ಮುಂಜಾಗ್ರತೆ ಕ್ರಮವಾಗಿ ವೀರಾಜಪೇಟೆ ಸಮುಚ್ಚಯ ಪೊಲೀಸ್ ಠಾಣೆಯ ಪೊಲೀಸರು ಇಂದು ಬೆಳಗಿನಿಂದಲೇ ಇಲ್ಲಿನ ಗೋಣಿಕೊಪ್ಪಲು ರಸ್ತೆಯ ಮಾಂಸ ಮಾರುಕಟ್ಟೆಯ ಜಂಕ್ಷನ್ ಬಳಿ ಹೊರಗಿನಿಂದ ಬರುವ ವಾಹನಗಳ ತಪಾಸಣೆಯನ್ನು ಬಿಗಿಗೊಳಿಸಿದ್ದರು. ಇಲಾಖೆಯಿಂದ ಪಾಸ್, ಅನುಮತಿ ಪಡೆದ ಹಾಗೂ ರೋಗಿಗಳನ್ನು ಹೊಂದಿದ್ದ ಆಂಬ್ಯುಲೆನ್ಸ್ ವಾಹನಗಳಿಗೆ ಮಾತ್ರ ರಿಯಾಯಿತಿ ನೀಡಲಾಗಿತ್ತು.

ನ್ಯಾಯ ಬೆಲೆ ಅಂಗಡಿಗಳಲ್ಲಿ ಅಂತರವನ್ನು ಕಾಯ್ದುಕೊಂಡು ಇಂದು ಎರಡು ತಿಂಗಳ ಅವಧಿಯ ಪಡಿತರ ಸಾಮಗ್ರಿಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟ ಚೆಕ್‍ಪೋಸ್ಟ್‍ನಲ್ಲಿ ಬಿಗಿ ಬಂದೋಬಸ್ತ್ ಮುಂದುವರೆದಿದ್ದು ಕಾಲ್ನಡಿಗೆಯಲ್ಲಿ ಬರುವವರಿಗೂ ಗುರುತಿನ ಚೀಟಿ ಕಡ್ಡಾಯಗೊಳಸಿರುವುದರಿಂದ ಕಳೆದ ಮೂರು ದಿನಗಳಿಂದ ಮಾಕುಟ್ಟ ಚೆಕ್‍ಪೋಸ್ಟ್‍ನಿಂದ ಕಾಲ್ನಡಿಗೆಯ ಕಾರ್ಮಿಕರು ನುಸಳಲಿಲ್ಲ ಎಂದು ಈ ವಿಭಾಗದ ಕಂದಾಯ ಆಧಿಕಾರಿಗಳು ತಿಳಿಸಿದ್ದಾರೆ.