ಮಡಿಕೇರಿ, ಏ. 5: ಬಿಸಿಲಿನ ಪರಿತಾಪ ಹೆಚ್ಚಾಗುವುದರೊಂದಿಗೆ ಜನತೆ ಕೊರೊನಾ ಆತಂಕದ ನಡುವೆ ತೀರಾ ಸೆಕೆಯ ವಾತಾವರಣವನ್ನು ಎದುರಿಸುತ್ತಿದ್ದ ಸನ್ನಿವೇಶದಲ್ಲಿ ಭಾನುವಾರ ಅಪರಾಹ್ನ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವೆಡೆ ಮಳೆ ತಂಪೆರೆಯಿತು.

ಕಳೆದ ಕೆಲವು ದಿನಗಳಿಂದ ಜಿಲ್ಲೆಯ ನಾಪೋಕ್ಲು ಸುತ್ತಮುತ್ತಲು, ಕೂಡಿಗೆ ಮತ್ತಿತರ ಕೆಲವೆಡೆಗಳಲ್ಲಿ ಮಳೆಯಾಗಿತ್ತು. ಆದರೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬೇಸಿಗೆಯ ಅವಧಿಯ ಈ ಸಂದರ್ಭದಲ್ಲಿ ನಡು ನಡುವೆ ತಂಪೆರೆಯುವ ಮಳೆಯಾಗಿರಲಿಲ್ಲ.

ಇಂದು ಅಪರಾಹ್ನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ದಿಢೀರ್ ಮೋಡ ಆವರಿಸುವುದರೊಂದಿಗೆ, ಗಾಳಿ-ಗುಡುಗಿನ ಸಹಿತ ಸುಮಾರು ಅರ್ಧ ಇಂಚಿಗಿಂತಲೂ ಅಧಿಕ ಮಳೆ ಸುರಿಯಿತು. ಕೆಲಹೊತ್ತು ಆಲಿಕಲ್ಲು ಧರೆಗುರುಳಿದ್ದು ನಗರದಲ್ಲಿ ಕಂಡುಬಂದಿತು. ಲಾಕ್‍ಡೌನ್‍ನಿಂದ ಸ್ತಬ್ಧವಾಗಿರುವ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು, ಪೌರ ಕಾರ್ಮಿಕರು ದಿಢೀರ್ ಮಳೆಯಿಂದ ಆಶ್ರಯ ಪಡೆಯಲು ಯತ್ನಿಸಬೇಕಾಯಿತು. ಲಾಕ್‍ಡೌನ್‍ನಿಂದ ಜನರ್ಯಾರು ಹೊರಗೆ ಕಂಡುಬರಲಿಲ್ಲ.

ಮಡಿಕೇರಿಯೊಂದಿಗೆ, ಕರಿಕೆ, ನಾಪೋಕ್ಲು, ಹಾಕತ್ತೂರು, ತೊಂಭತ್ತುಮನೆ, ತಾಳತ್‍ಮನೆ, ಅರ್ವತ್ತೊಕ್ಲು, ಕಡಗದಾಳು, ಸುಂಟಿಕೊಪ್ಪ ಸೇರಿದಂತೆ ಹಲವೆಡೆಗಳಲ್ಲಿ ಮಳೆಯಾಗಿರುವ ಕುರಿತು ವರದಿಯಾಗಿದೆ.

ಸೋಮವಾರಪೇಟೆ: ಜಿಲ್ಲೆಯ ವಿವಿಧೆಡೆ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗಿದ್ದರೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ 3 ನಿಮಿಷಗಳ ಕಾಲ ತುಂತುರು ಮಳೆ ಸುರಿಯಿತು.

ಆಗಸದಲ್ಲಿ ದಟ್ಟ ಮೋಡ ಕಂಡು ಬಂದು ಗುಡುಗಿನ ಆರ್ಭಟ ಇದ್ದರೂ ಸಹ ಮಳೆ ಸುರಿಯಲಿಲ್ಲ. ಕೆಲವೇ ನಿಮಿಷಗಳ ಕಾಲ ತುಂತುರು ಮಳೆ ಸುರಿದು ವಾತಾವರಣ ತಿಳಿಯಾಯಿತು. ಭಾರೀ ಮಳೆಯಾಗುವ ಮುನ್ಸೂಚನೆ ಇದ್ದರೂ ಸಹ ನಿರೀಕ್ಷಿತ ಮಳೆಯಾಗಲಿಲ್ಲ.