ಗೋಣಿಕೊಪ್ಪಲು ಏ. 6:“ಅಮ್ಮಾ ಲಾಕ್ ಡೌನ್’ ಸಂದರ್ಭ ಅನೇಕ ವಲಸೆ ಕಾರ್ಮಿಕರು ನಿರ್ಗತಿಕ ರಾಗುತ್ತಿದ್ದಾರೆ. ನಮ್ಮ ಮನೆಯಲ್ಲಿ 10 ಮಂದಿಯನ್ನಾದರು ಇರಿಸಿಕೊಂಡು ಲಾಕ್ ಡೌನ್ ಮುಗಿಯುವವರೆಗೂ ಕಾಪಾಡೋಣ” ಎನ್ನುವ ಹಂಬಲವನ್ನು ವ್ಯಕ್ತಪಡಿಸಿದ ಯುವತಿ ಮತ್ಯಾರೂ ಅಲ್ಲ. ಆಕೆಯೇ ವಿಶೇಷ ಚೇತನಳಾಗಿದ್ದು ಬಹು ಅಂಗ ವೈಫಲ್ಯವನ್ನು ಎದುರಿಸಿ ತನ್ನ ತಾಯಿಯ ನೆರವಿನಿಂದ ಜೀವನವನ್ನು ಧೈರ್ಯ- ಸ್ಥೈರ್ಯ ದಿಂದ ನಿರ್ವಹಿಸಿಕೊಂಡು ಬರುತ್ತಿರುವ ತಿತಿಮತಿಯ ನಿವಾಸಿ ಸ್ವಾತಿ.“ಮಗಳೇ ನಮ್ಮ ಈ ಸಣ್ಣ ಮನೆಯಲ್ಲಿ ಅಷ್ಟು ಜನರನ್ನು ಇರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಇದನ್ನು ಸಾಧಿಸುವದು ಕಷ್ಟಸಾಧ್ಯವಾಗುತ್ತದೆ” ಎಂದು ತಾಯಿ ಫಿಲೋಮಿನ ಉತ್ತರಿಸಿದಾಗ “ ಹಾಗಿದ್ದರೆ ನಾನು ಸ್ತ್ರೀ ಶಕ್ತಿ ಸ್ವಸಹಾಯ ಸಂಘದಿಂದ ಪಡೆದಿರುವ ರೂ. 25 ಸಾವಿರವನ್ನು ನೀಡುತ್ತೇನೆ” ಎಂದು ಸ್ವಾತಿ ತಾಯಿಯ ಕೈಗೆ ಹಣ ನೀಡಿಯೇ ಬಿಟ್ಟರು. ತಾಯಿ ತಾನು ಕೂಡ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಉಳಿತಾಯದ ಖಾತೆಯಲ್ಲಿದ್ದ ರೂ. 25 ಸಾವಿರ ಅದಕ್ಕೆ ಸೇರಿಸಿದರು. ‘ಕೋವಿಡ್-19 ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ರೂ. 50 ಸಾವಿರ ರೂಪಾಯಿಗಳ ಚೆಕ್ ಅನ್ನು ತಿತಿಮತಿಯ ಸ್ವಾತಿ ಮೆಡಿಕಲ್ಸ್‍ನ ಮಾಲೀಕರಾದ ಫಿಲೋಮಿನಾ ಅವರ ವಿಶೇಷ ಚೇತನ ಮಗಳು ಸ್ವಾತಿ ನೀಡಿ ಸಮಾಜದ ನೋವಿಗೆ ಕಂಬನಿ ಮಿಡಿದರು. ವೀರಾಜಪೇಟೆ ಕ್ಷೇತ್ರದ ಶಾಸಕÀ ಕೆ ಜಿ ಬೋಪಯ್ಯ ಅವರಿಗೆ ಇಂದು ಚೆಕ್ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದರು.ಎಲ್ಲಾ ಸೌಕರ್ಯಗಳಿದ್ದೂ ಸಹಾಯ ಮಾಡುವ ಮನೋಭಾವ ವಿಲ್ಲದ ಅನೇಕರಿದ್ದಾರೆ. ಅಂತಹುದರಲ್ಲಿ ಸಮಾಜದ ಇತರರಂತೆ ದೈಹಿಕ ದಾಢ್ರ್ಯತೆ

(ಮೊದಲ ಪುಟದಿಂದ) ಇಲ್ಲದಿರುವ ಸನ್ನಿವೇಶ ವನ್ನೂ ಲೆಕ್ಕಿಸದೇ ವಿಶೇಷ ಚೇತನ ಹೊಂದಿರುವ ಸ್ವಾತಿ ಮುಂದೆ ಬಂದಿದ್ದಾರೆ. ಸಮಾಜದ ನೋವಿಗೆ ಮಿಡಿದು ಕಂಬನಿ ಸುರಿಸಿ ಸಹಾಯ ಮಾಡುವಂತಹ ಅವರ ಈ ಕಾರ್ಯ ಸಮಾಜಕ್ಕೆ ಆದರ್ಶ ಪ್ರಾಯವಾಗಿದೆ ಎಂದು ಶಾಸಕ ಬೋಪಯ್ಯ ಸ್ವಾತಿಯ ಸೇವಾ ಮನೋಭಾವವನ್ನು ಶ್ಲಾಘಿಸಿದರು.

ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ನೋಡಿ ಜನರ ಸಂಕಷ್ಟಕ್ಕೆ ಕಣ್ಣೀರು ಸುರಿಸಿ ಏನಾದರೂ ಒಂದು ಸಹಾಯ ಸಮಾಜಕ್ಕೆ ಆಗಬೇಕೆಂಬ ಮನೋಭಾವವನ್ನು ಹೊಂದಿ ತನ್ನ ಉಳಿತಾಯದ ಹಣವನ್ನು ನೊಂದ ಜನರಿಗೆ ನೀಡಲು ಮುಂದಾಗಿ ರುವುದಾಗಿ ಸ್ವಾತಿಯ ತಾಯಿ ಫಿಲೋಮಿನ ತನ್ನ ಮಗಳ ಮನೋಭಿಪ್ರಾಯವನ್ನು”ಶಕ್ತಿ” ಯೊಂದಿಗೆ ತಿಳಿಸಿದರು.

ಫಿಲೋಮಿನಾ ಅವರಿಗೆ ಮೂವರು ಹೆಣ್ಣು ಮಕ್ಕಳು. ಆ ಪೈಕಿ ಇಬ್ಬರಿಗೆ ವಿವಾಹವಾಗಿ ಒಬ್ಬ್ಬಾಕೆ ಕೊಡಗಿನಲ್ಲಿದ್ದು, ಇನ್ನೊಬ್ಬಾಕೆ ತುಮಕೂರಿನಲ್ಲಿದ್ದಾರೆ. 3 ನೇ ಮಗಳು ಇದೀಗ 30 ರ ಪ್ರಾಯದ ಸ್ವಾತಿ ಜನಿಸುವಾಗಲೇ “ sಸೆರೆಬ್ರಲ್ ಪಾಲ್ಸಿ” ಅಂದರೆ ಮಿದುಳಿಗೆ ಸಂಬಂಧಪಟ್ಟ ನ್ಯೂನ್ಯತೆಯಂದ ಬಹು ಅಂಗ ವೈಫಲ್ಯಕ್ಕೆ ಒಳಗಾಗಿದ್ದರು. ಆಕೆಗೆ 15 ವರ್ಷವಾಗುವವರೆಗೂ ಮಾತು ಕೂಡ ಆಡಲಾಗುತ್ತಿರಲಿಲ್ಲ. ಚಿಕಿತ್ಸೆ ಫಲಕಾರಿಯಾಗದಾಗ ತಾಯಿ ತಾನೇ ವೈದ್ಯಳಾಗಿ ಹಲವಾರು ಚಿಕಿತ್ಸಾ ಪ್ರಯೋಗ ನಡೆಸಿದರು. ಏಕೆಂದರೆ ಫಿಲೋಮಿನಾ ತಾನೇ ನರ್ಸ್ ಆಗಿ ಕಾರ್ಯ ನಿರ್ವಹಿಸಿದವರು. ಮೂಲತಃ ತಿತಿಮತಿಯವರಾದ ಇವರು ರಾಯಚೂರು, ಬಳ್ಳಾರಿ ಹಾಗೂ ಬಳಿಕ ಗೋಣಿಕೊಪ್ಪಲು ಸರಕಾರೀ ಆಸ್ಪತ್ರೆಗಳಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತರಾದರು. ಬಳಿಕ ತಿತಿಮತಿಗೇ ಮರಳಿದರು. ಅವರ ಪತಿ ಆರೋಗ್ಯ ಇಲಾಖೆಯಲ್ಲಿ ಚಾಲಕರಾಗಿದ್ದು 4 ವರ್ಷಗಳ ಹಿಂದೆ ನಿಧನರಾದರು. ತಾಯಿಯ ಛಲ ಬಿಡದ ಚಿಕಿತ್ಸೆÀ್ಸಯಿಂದ ಮಗಳು ಇದೀಗ ಕೊಂಚ ಮಾತನಾಡುವದು, ಬರೆಯುವದಕ್ಕೆ ಸಾಧ್ಯವಾಗಿದೆ. ಆಕೆಯನ್ನು 7ನೇ ತರಗತಿಯಲ್ಲಿ ತೇರ್ಗಡೆಗೊಳಿಸಿ ಎಸ್‍ಎಸ್‍ಎಲ್‍ಸಿ ಓದಿಸಿದರೂ ಅನಿವಾರ್ಯವಾಗಿ ಪರೀಕ್ಷೆ ಬರೆಯಲಾಗಲಿಲ್ಲ. ನಡೆಯಲೂ ಸಾಧ್ಯವಿಲ್ಲದಿದ್ದ ಮಗಳು ಇದೀಗ ಅಂಬೆಗಾಲಿನ ರೀತಿಯಿಂದಲಾದರೂ ತೆರಳಲು ಸಿದ್ಧಳಾಗಿದ್ದಾರೆ. ಜೊತೆಗೆ ತಿತಿಮತಿಯಲ್ಲಿ ಔಷಧಿ ಅಂಗಡಿಯಿಲ್ಲದುದನ್ನು ಗಮನಿಸಿ ಊರಿನ ಜನರಿಗೋಸ್ಕರ ತನ್ನ ಮಗಳ ಹೆಸರಿನಲ್ಲಿ ಫಿಲೋಮಿನಾ ಔಷಧಿ ಅಂಗಡಿ ತೆರೆÀದಿದ್ದು ಮಗಳನ್ನೂ ಅಲ್ಲಿ ಸಹಾಯಕ್ಕೆ ಕರೆದೊಯ್ಯತ್ತಾರೆ. ಮಗಳು ಸ್ವಾತಿ ಇದೀಗ ಎಲ್ಲ ಔಷಧಿಗಳ ಬಗ್ಗೆ ತಿಳಿದುಕೊಂಡಿದ್ದು ಇಂಗ್ಲಿಷ್‍ನಲ್ಲಿ ವ್ಯವಹಾರಕ್ಕೆ ಬರೆಯುವಷ್ಟು ಹಾಗೂ ತಾಯಿಯೊಂದಿಗೆÉ ವ್ಯವಹಾರದಲ್ಲಿ ನೆರವಾಗುವಷ್ಟು ಸಾಧ್ಯವಾಗಿದೆ. ಸಂಕಷ್ಟದ ನಡುವೆಯೂ ಪರರಿಗಾಗಿ ಸ್ಪಂದಿಸುವ ಇವರ ಈ ನಿಲುವು ಅತ್ಯಂತ ಅಪರೂಪದ್ದಾಗಿದೆ.

ಚೆಕ್ ಹಸ್ತಾಂತರದ ಸಂದರ್ಭ ಬಿಜೆಪಿ ಜಿಲ್ಲಾ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಆರ್‍ಎಂಸಿ ಸದಸ್ಯ ಗುಮ್ಮಟಿರ ಕಿಲನ್ ಗಣಪತಿ, ತಿತಿಮತಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಎನ್,ಎನ್ ಅನೂಪ್, ಪ್ರಮುಖರಾದ ಅಪ್ಪಿ, ಗಣೇಶ್, ಚೆಪ್ಪುಡಿರ ಮಾಚಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಧು ದೇವಯ್ಯ, ಸಹಾಯಕ ನರಸಿಂಹ, ಹಾಜರಿದ್ದರು.

ಚಿತ್ರ ವರದಿ: ಎನ್.ಎನ್. ದಿನೇಶ್, ಜಗದೀಶ್ ಜೋಡುಬೀಟಿ