ಮಡಿಕೇರಿ, ಏ. 6: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತದ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಜನತೆಯ ಸಹಕಾರ ಸಿಗುತ್ತಿದೆ. ಇದರೊಂದಿಗೆ ಜಿಲ್ಲೆಯ ಜನತೆಯೂ ಜಿಲ್ಲಾಡಳಿತದ ಮೇಲೆ ಭರವಸೆಯನ್ನು ಹೊಂದಿದ್ದಾರೆ. ಜಿಲ್ಲಾಡಳಿತಕ್ಕೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ಸರಕಾರದ ಮೂಲಕವೂ ಅಗತ್ಯ ಸಹಕಾರ ಸಿಗುತ್ತಿದೆ ಎಂಬದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕೊರೊನಾದ ಆತಂಕದೊಂದಿಗೆ ಜಿಲ್ಲೆಯಲ್ಲಿನ ‘ಲಾಕ್‍ಡೌನ್’ ಕುರಿತಾಗಿ ‘ಶಕ್ತಿ’ಯೊಂದಿಗೆ ತಮ್ಮ ಕೆಲಸ - ಕಾರ್ಯದ ಕುರಿತಾಗಿ ಅನುಭವವನ್ನು ಜಿಲ್ಲಾಧಿಕಾರಿಗಳು ಹಂಚಿಕೊಂಡರು.2018 ಹಾಗೂ 2019ರಲ್ಲಿ ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪದ ದುರಂತ ದಿಂದಾಗಿ ಸಾಕಷ್ಟು ನಲುಗಿದೆ. ಇದ ರೊಂದಿಗೆ ಇದೀಗ 2020ರಲ್ಲಿ ಸತತವಾಗಿ ಮತ್ತೊಂದು ಆತಂಕಕಾರಿಯಾದ ಸನ್ನಿವೇಶವನ್ನು ಎದುರಿಸುವಂತಾಗಿದೆ. ಇದು ದೇಶವ್ಯಾಪಿ ಯಾದ ಪರಿಸ್ಥಿತಿ ಯಾದರೂ 2018 ಹಾಗೂ 2019ರಲ್ಲಿ ಉಂಟಾಗಿದ್ದ ದುರಂತ ವನ್ನು ನಿಭಾಯಿಸುವಲ್ಲಿ ಜಿಲ್ಲಾಡಳಿತ, ಪೊಲೀಸ್, ಆರೋಗ್ಯ ಇಲಾಖೆ ಸೇರಿದಂತೆ ಇತರ ಇಲಾಖೆಗಳು ಶ್ರಮವಹಿಸಿದ್ದ ಬಗ್ಗೆ ಜನತೆಗೆ ಜಿಲ್ಲಾಡಳಿತದ ಮೇಲೆ ಭರವಸೆ ಇದೆ. ಇದರೊಂದಿಗೆ ಎಲ್ಲಾ ಜನಪ್ರತಿನಿಧಿಗಳೂ ಪಕ್ಷಾತೀತವಾಗಿ ಸಹಕಾರ ನೀಡುತ್ತಿ ದ್ದಾರೆ. ಜಿಲ್ಲೆಯ ಜನತೆ ಇತರೆಡೆಗಳಿಗಿಂತ ಹೆಚ್ಚಾಗಿ ತಾವಾಗಿಯೇ ಎಲ್ಲಾ ರೀತಿಯ ನಿರ್ಬಂಧಗಳಿಗೆ ಸಹಕಾರ ನೀಡುತ್ತಿರುವದು, ಇದರೊಂದಿಗೆ ಸೂಕ್ತ ಸಲಹೆಗಳನ್ನೂ ನೀಡುತ್ತಿರುವದು ವಿಶೇಷವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ವಿವಿಧ ರೀತಿಯ ನಿರ್ಬಂಧಗಳಿಗೆ ಜನರು ಅಗತ್ಯ ರೀತಿಯಲ್ಲಿ ಈ ತನಕ ಸ್ಪಂದಿಸಿದ್ದಾರೆ. ಶೇ. 10 ರಷ್ಟು ತೊಂದರೆಗಳು ಕಂಡುಬಂದರೂ ಇದು ಇತರೆಡೆಗಳಷ್ಟು ಹೊರೆಯಾಗಿಲ್ಲ. ಮೂರು ವರ್ಷದ ಸತತ ದುರಂತವನ್ನು ನಿಭಾಯಿಸುತ್ತಿರುವ ಎಲ್ಲರ ಪರಿಶ್ರಮದ ಬಗ್ಗೆ ಜನತೆಯೊಂದಿಗೆ ಸರಕಾರಕ್ಕೂ ವಿಶ್ವಾಸವಿದೆ. ಪ್ರತಿ ಹೋಬಳಿ ಮಟ್ಟದಲ್ಲಿ ಅಧಿಕಾರಿಗಳ ನಿಯೋಜನೆ ಯಿಂದಾಗಿ ಅವರಿಗೆ ಜನರೊಂದಿಗೆ ನೇರ ಸಂಪರ್ಕವಿದೆ. ಸ್ವಯಂಪ್ರೇರಿತ ರಾಗಿಯೂ ಜನತೆಯಿಂದ ಬೆಂಬಲ ಸಿಕ್ಕಿದೆ.

(ಮೊದಲ ಪುಟದಿಂದ) ಇತರೆಡೆಗಳಿಗಿಂತ ಇಲ್ಲಿ ಪ್ರವಾಸಿ ತಾಣಗಳು, ಹೋಂಸ್ಟೇ, ರೆಸಾರ್ಟ್‍ಗಳಿದ್ದು; ಎಲ್ಲವನ್ನೂ ಬಂದ್ ಮಾಡಲಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್ ಹೇಳಿದರು.

ಜಿಲ್ಲೆಯಲ್ಲಿ ಕೊರೊನಾ ಆತಂಕ ಕಡಿಮೆ ಇದ್ದರೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಹೆಚ್ಚಾಗಿರುವುದರಿಂದ ಸದ್ಯದ ಮಟ್ಟಿಗೆ ನಿರ್ಬಂಧವನ್ನು ಸಡಿಲಿಸುವದು ಸಾಧ್ಯವಾಗದು ಎಂದ ಅವರು ಈ ಬಗ್ಗೆ ಕೆಲವರಿಂದ ಮನವಿಗಳು ಬರುತ್ತಿವೆಯಾದರೂ ಸದ್ಯಕ್ಕೆ ಪರಿಗಣಿಸಲು ಅಸಾಧ್ಯ. ಅತಿಯಾದ ಆತ್ಮವಿಶ್ವಾಸವೂ ಈ ಸಮಯದಲ್ಲಿ ಬೇಡ. ಪರಿಸ್ಥಿತಿ ತಹಬದಿಗೆ ಬರುವ ತನಕ ಜನತೆಯಿಂದ ಮತ್ತಷ್ಟು ಸಹಕಾರವನ್ನು ಜಿಲ್ಲಾಡಳಿತ ಬಯಸುತ್ತದೆ ಎಂದರು. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಇನ್ನಿತರ ಇಲಾಖೆಗಳ ಸಹಕಾರವನ್ನೂ ಅವರು ಸ್ಮರಿಸಿದರು.

ಸದ್ಯದಲ್ಲಿ ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದೆ ಯಾದರೂ ಈ ಬಗ್ಗೆ ಸರಕಾರದಿಂದ ಯಾವದೇ ನಿರ್ದೇಶನಗಳು ಬಂದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಈ ಕುರಿತಾದ ಸಿದ್ಧತೆ - ಸಭೆಗಳನ್ನೂ ನಡೆಸಲು ಸಾಧ್ಯವಾಗದು. ಆದರೂ ಕೆಲವೊಂದು ಪ್ರಾಥಮಿಕ ತಯಾರಿಯನ್ನು ಜಿಲ್ಲಾಡಳಿತ ನಡೆಸಿದೆ ಎಂದು ಅವರು ಈ ಕುರಿತ ಪ್ರಶ್ನೆಗೆ ಉತ್ತರಿಸಿದರು.